Antharagange: ಅರಣ್ಯ ಇಲಾಖೆಯಿಂದ ಮಾಸ್ಟರ್​ ಪ್ಲಾನ್, ಹೊಸ ಟಚ್! ದಕ್ಷಿಣ ಕಾಶಿ ಅಂತರಗಂಗೆಗೆ ಇನ್ನು ದಂಡು ದಂಡಾಗಿ ಬರಲಿದ್ದಾರೆ ಪ್ರವಾಸಿಗರು!

| Updated By: ಸಾಧು ಶ್ರೀನಾಥ್​

Updated on: Dec 30, 2022 | 11:59 AM

ಅಂತರಗಂಗೆಯತ್ತ ಪ್ರವಾಸಿಗರನ್ನು ಆಕರ್ಷಿಸಲು ಬೆಟ್ಟದಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಯೋಜನೆ ಸಿದ್ದವಾಗಿದ್ದು, ಕೆಲವೇ ತಿಂಗಳಲ್ಲಿ ಅಂತರಗಂಗೆ ಬೆಟ್ಟಕ್ಕೆ ಹೊಸ ಕಳೆ ತುಂಬಿ, ಪ್ರವಾಸಿಗರಿಂದ ತುಂಬಿತುಳುಕುವುದರಲ್ಲಿ ಅನುಮಾನವಿಲ್ಲ.

Antharagange: ಅರಣ್ಯ ಇಲಾಖೆಯಿಂದ ಮಾಸ್ಟರ್​ ಪ್ಲಾನ್, ಹೊಸ ಟಚ್! ದಕ್ಷಿಣ ಕಾಶಿ ಅಂತರಗಂಗೆಗೆ ಇನ್ನು ದಂಡು ದಂಡಾಗಿ ಬರಲಿದ್ದಾರೆ ಪ್ರವಾಸಿಗರು!
ಚಾರಣಿಗರ ಹಾಟ್​ ಸ್ಪಾಟ್​ ಆಗುತ್ತದೆ ಅಂತರಗಂಗೆ ಬೆಟ್ಟ..!
Follow us on

ಅದು ರಾಜ್ಯದ ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ಪ್ರಸಿದ್ದ ಸ್ಥಳ. ಈ ಪ್ರದೇಶವು ರಾಜ್ಯದ ಎರಡು ಇಲಾಖೆಗಳ ವ್ಯಾಪ್ತಿಗೆ ಒಳಪಡುತ್ತದೆ. ಆದರೂ ಅಲ್ಲಿ ಅಭಿವೃದ್ದಿ ಮಾತ್ರ ಮರೀಚಿಕೆ. ಆದರೆ ಜಿಲ್ಲೆಯಲ್ಲಿ ಬದಲಾದ ವಾತಾವರಣ ಹಾಗೂ ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದಾಗಿ ಸದ್ಯ ದಕ್ಷಿಣ ಕಾಶಿಗೆ ಹೊಸ ಕಳೆ ತಂದುಕೊಡಲು ಮುಂದಾಗಿದ್ದು, ಹೊಸ ಯೋಜನೆಯೊಂದನ್ನು ರೂಪಿಸಿದೆ. ಕೋಲಾರದ (Kolar) ಪ್ರಸಿದ್ದ ಯಾತ್ರಾಸ್ಥಳ ಅಂತರಗಂಗೆ (Antharagange) ಪ್ರದೇಶ ಕೋಲಾರ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶ. ರಾಜಧಾನಿ ಬೆಂಗಳೂರಿಗೆ ಕೇವಲ 60 ಕಿ.ಮೀ ದೂರದಲ್ಲಿದೆ. ಹಾಗಾಗಿ ನಿತ್ಯ ಸಾವಿರಾರು ಪ್ರವಾಸಿಗರು ಈ ಪ್ರವಾಸಿ ತಾಣಕ್ಕೆಂದು ಬರುತ್ತಾರೆ. ಒಂದಷ್ಟು ಪ್ರವಾಸಿಗರು ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ನೆಲೆಸಿರುವ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿಯನ್ನು ನೋಡಿ ದೇವರ ದರ್ಶನ ಪಡೆಯಲು ಬಂದರೆ, ಮತ್ತೊಂದಷ್ಟು ಜನರು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ಸವಿದು, ಸುಂದರ ಬೆಟ್ಟಗುಡ್ಡಗಳ ನಡುವೆ ಒಂದಷ್ಟು ಕಾಲ ಕಳೆದು ಹೋಗಲೆಂದು ಬರ್ತಾರೆ.

ಆದರೆ ಪ್ರದೇಶಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುವ, ಪ್ರವಾಸಿಗರಿಗೆ ಅನುಕೂಲಕರವಾದ ವಾತಾರವಣವಾಗಲೀ, ಅಥವಾ ಅಗತ್ಯ ಮೂಲಭೂತ ಸೌಲಭ್ಯಗಳಾಗಲಿ ಇಲ್ಲಿಲ್ಲ. ಇಡೀ ಅಂತರಗಂಗೆ ಪ್ರದೇಶ ಎರಡು ಇಲಾಖೆಗೆ ಒಳಪಡುತ್ತದೆ. ಪ್ರಮುಖವಾಗಿ ಈ ಪ್ರದೇಶದಲ್ಲಿನ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ (Muzrai department) ಒಳಪಟ್ರೆ, ಉಳಿದ ಬೆಟ್ಟಗುಡ್ಡ, ಕಲ್ಲು ಬಂಡೆ, ಸುಂದರ ಅರಣ್ಯ ಪ್ರದೇಶ ಎಲ್ಲವೂ ಅರಣ್ಯ ಇಲಾಖೆ (Forest Department) ವ್ಯಾಪ್ತಿಗೆ ಒಳಪಡುತ್ತದೆ.

ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆಯಿಂದ ಹೊಸ ಪ್ಲಾನ್​..!

ಎರಡು ಇಲಾಖೆಗೆ ಒಳಪಟ್ಟರೂ ಕೂಡಾ ಮುಜರಾಯಿ ಇಲಾಖೆಯು ಕೇವಲ ದೇವಾಲಯದ ನಿರ್ವಹಣೆಗಷ್ಟೇ ಸೀಮಿತಗೊಂಡಿದೆ. ಹಾಗಾಗಿಯೇ ಅರಣ್ಯ ಇಲಾಖೆ ಅಲ್ಲಿರುವ ಅರಣ್ಯವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅರಣ್ಯ ಪ್ರದೇಶಕ್ಕೆ ಫೆನ್ಸಿಂಗ್​ ಮಾಡಿ ಅಲ್ಲಿ ನಡೆಯುವ ಕೆಲ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು. ಜೊತೆಗೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯ ಪ್ರವಾಸಿಗರನ್ನು ಆಕರ್ಷಿಸಲು ಒಂದು ಮಾಸ್ಟರ್ ಪ್ಲಾನ್​ ಮಾಡಿದ್ದು, ಬೆಟ್ಟದಲ್ಲಿ ಮೂರು ಸ್ಥಳದಲ್ಲಿ ಚಾರಣಿಗರಿಗೆ ಅನುಕೂಲವಾಗುವಂತೆ ಟ್ರಕ್ಕಿಂಗ್​ ಪಾತ್​ ವ್ಯವಸ್ಥೆ ಮಾಡಲಿದೆ.

ಜೊತೆಗೆ ಇಲ್ಲಿಗೆ ಬರುವ ಚಾರಣಿಗರು ಹಾಗೂ ಪ್ರವಾಸಿಗರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಜಿಲ್ಲೆಯಲ್ಲಿ ಬದಲಾದ ಹವಾಮಾನ ವಾತಾವರಣದಿಂದ ಹೆಚ್ಚಾಗಿ ಮಳೆಯಾಗುತ್ತಿದ್ದು ಬೆಟ್ಟದಲ್ಲಿ ಇರುವ ಸಣ್ಣಪುಟ್ಟ ಫಾಲ್ಸ್​ಗಳನ್ನು ಅಭಿವೃದ್ದಿ ಪಡಿಸಿ ಕೃತಕ ಫಾಲ್ಸ್​ಗಳನ್ನು ಮಾಡಲು ನಿರ್ಧರಿಸಿದೆ. ಚಲುವನಹಳ್ಳಿ ಬಳಿ ಒಂದು ಕೃತಕ ಫಾಲ್ಸ್​ ನಿರ್ಮಾಣ ಮಾಡಿ ಅಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡುವುದೂ ಒಂದು ಭಾಗವಾಗಿದೆ.

ದಿನದ 24 ಗಂಟೆ ಇಲ್ಲಿಗೆ ಬರುವ ಜನರಿಗೆ ರಕ್ಷಣೆ ಕೊಡಲು ಬೆಟ್ಟದ ಮೇಲೆ ಕಂಟೇನರ್ ನಲ್ಲಿ ಒಂದು ಹೊರ ಠಾಣೆ ರೀತಿಯಲ್ಲಿ ನಿರ್ಮಾಣ ಮಾಡುವುದು, ರಾತ್ರಿ ಹೊತ್ತಿನಲ್ಲಿ​ ಫೈರ್​ ಕ್ಯಾಂಪ್​, ಟೆಂಟ್​ ಕ್ಯಾಂಪ್​ ರೀತಿಯಲ್ಲಿ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯುವಂತೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಸುಮಾರು 2.5 ಕೋಟಿ ರೂಪಾಯಿಯಲ್ಲಿ ಜಿಲ್ಲಾಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಹೆಚ್ಚಿನ ಆಸಕ್ತಿ ವಹಿಸಿ ಯೋಜನೆ ರೂಪಿಸಿದ್ದಾರೆ.

ಬೆಟ್ಟಗುಡ್ಡಗಳ ನಡುವೆ ಪ್ರೀತಿ ಪ್ರೇಮದ ಹೆಸರಲ್ಲಿ ಅನೈತಿಕ ಚಟುವಟಿಕೆಗೆ ಕಡಿವಾಣ..!

ಇನ್ನು ಹಲವು ವರ್ಷಗಳಿಂದ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟ ಹಾಗೂ ದೇವಾಲಯ ಇದರ ಜೊತೆಗೆ ಬೆಟ್ಟದ ಮೇಲಿರುವ ಕೆಲವೊಂದು ಐತಿಹಾಸಿಕ ಪ್ರದೇಶಗಳು ಪ್ರವಾಸಿಗರಿಲ್ಲದೆ, ಅದರ ಮಹತ್ವ ತಿಳಿಯದೆ ಸೊರಗಿ ಹೋಗಿ ಅಸ್ತಿ ಪಂಜರದಂತೆ ಆಗಿ ಹೋಗಿದೆ. ಹಾಗಾಗಿ ಅರಣ್ಯ ಇಲಾಖೆಯ ಈ ಹೊಸ ಅಭಿವೃದ್ದಿ ಯೋಜನೆಯಿಂದಾಗಿ ಅಂತರಗಂಗೆ ಬೆಟ್ಟದಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಯುವಕ ಯುವತಿಯರು ಬಂದು ಬೆಟ್ಟ ಗುಡ್ಡಗಳ ನಡುವೆ ನಡೆಸುವ ಗುಪ್ತ್​ ಗುಪ್ತ್​ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಜೊತೆಗೆ ಕೆಲವು ಯುವಕರು ಇಲ್ಲಿ ನಿರ್ಜನ ಪ್ರದೇಶಗಳಲ್ಲಿ ಗಾಂಜಾ ಸೇವನೆ, ಮದ್ಯ ಸೇವನೆಯಂತ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹಲವು ದೂರುಗಳಿದ್ದು, ಒಂದಷ್ಟು ಅಭಿವೃದ್ದಿಯಿಂದ ಇಲ್ಲಿಗೆ ಬರುವ ಪ್ರಸಾಸಿಗರ ಸಂಖ್ಯೆ ಹೆಚ್ಚಾದರೆ ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

ಚಾರಣಿಗರ ಹಾಟ್​ ಸ್ಪಾಟ್​ ಆಗುತ್ತದೆ ಅಂತರಗಂಗೆ ಬೆಟ್ಟ..!

ಅಂತರಗಂಗೆ ಬೆಟ್ಟವನ್ನು ಶತಶೃಂಗ ಶೃಂಗಪರ್ವತ ಎಂದು ಕರೆಯುತ್ತಾರೆ, ಅಂತರಗಂಗೆ ಬೆಟ್ಟಕ್ಕೆ ಹೊಂದಿಕೊಂಡಂತೆ ಹಲವು ಬೆಟ್ಟಗಳ ಸಾಲು ಇದೆ, ಹಾಗಾಗಿ ಅಂತರಗಂಗೆ, ತೇರಹಳ್ಳಿ, ಸೇರಿದಂತೆ ಹಲವು ಬೆಟ್ಟಗಳ ಸಾಲಿದ್ದು, ಇದು ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ, ಈ ಮೊದಲು ಕೂಡಾ ನೂರಾರು ಸಂಖ್ಯೆಯಲ್ಲಿ ಚಾರಣಿಗರು ಇಲ್ಲಿಗೆ ಬರುತ್ತಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಇಲ್ಲಿಗೆ ಬರುವ ಚಾರಣಿಗರ ಸಂಖ್ಯೆ ಕಡಿಮೆಯಾಗಿತ್ತು. ಇನ್ನು ಇಲ್ಲಿ ಒಂದಷ್ಟು ಅಭಿವೃದ್ದಿಯಾಗಿ ಪ್ರವಾಸಿಗರಿಗೆ ಬೇಕಾದ ಅಗತ್ಯ ಸೌಲಭ್ಯ ಸಿಕ್ಕರೆ ಇಂದು ಚಾರಣಿಗರ ಹಾಟ್​ ಸ್ಪಾಟ್​ ಆಗಿ ಪರಿಣಮಿಸುತ್ತದೆ.

ಒಟ್ಟಾರೆ 15-20 ವರ್ಷಗಳ ನಂತರ ಅಂತರಗಂಗೆಗೆ ಪ್ರವಾಸಿಗರನ್ನು ಆಕರ್ಷಿಸಲು ಬೆಟ್ಟದಲ್ಲಿರುವ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಯೋಜನೆಯೊಂದು ಸಿದ್ದವಾಗಿದ್ದು, ಕೆಲವೇ ತಿಂಗಳಲ್ಲಿ ಅಂತರಗಂಗೆ ಬೆಟ್ಟಕ್ಕೆ ಹೊಸ ಕಳೆ ತುಂಬಿ, ಪ್ರವಾಸಿಗರಿಂದ ತುಂಬಿತುಳುಕುವುದರಲ್ಲಿ ಅನುಮಾನವಿಲ್ಲ.

ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ

Published On - 11:56 am, Fri, 30 December 22