ಹುಬ್ಬಳ್ಳಿ: 2018ರ ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಸೋತ ಮೇಲೆ ದೂರವಾಗಿದ್ದ ಮಾಜಿ ಸಚಿವ ಸಂತೋಷ್ ಲಾಡ್ ಮತ್ತೆ ಕ್ಷೇತ್ರಕ್ಕೆ ಹತ್ತಿರವಾಗುತ್ತಿದ್ದಾರೆ. ಆಗಿದಾಂಗ್ಗೆ ಕ್ಷೇತ್ರದ ಪ್ರವಾಸ ಕೈಗೊಳ್ಳುವ ಸಂತೋಷ ಲಾಡ್ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ದಾರಿ ಮಧ್ಯದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡುವ ಮೂಲಕವೂ ಗಮನ ಸೆಳೆದಿದ್ದಾರೆ.
ಕಲಘಟಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಚಿಕ್ಕ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡಿದ ಸಂತೋಷ್ ಲಾಡ್ ಕಾರನ್ನು ನಿಲ್ಲಿಸಿ ಮೈದಾನಕ್ಕಿಳಿದರು. ಸಂತೋಷ್ ಲಾಡ್ ಬರುವುದನ್ನು ನೋಡಿದ ಯುವಕರು ಜೋರಾಗಿ ಸಿಳ್ಳೆ ಕೇಕೆ ಹೊಡೆದು ಬರಮಾಡಿಕೊಂಡರು. ಬರುತ್ತಿದ್ದಂತೆ ಬ್ಯಾಟ್ ಹಿಡಿದ ಸಂತೋಷ್ ಲಾಡ್ ಸಖತ್ ಬ್ಯಾಟಿಂಗ್ ಮಾಡಿದರು. ನಂತರ ಯುವಕರಿಗೆ ಥ್ಯಾಂಕ್ಸ್ ಕೊಟ್ಟು ಅಲ್ಲಿಂದ ಮುಂದೆ ಬೇರೆ ಕಾರ್ಯಕ್ರಮಕ್ಕೆ ತೆರಳಿದರು.
ಸಂತೋಷ್ ಲಾಡ್ ಎಂಟ್ರಿ ಕಾಂಗ್ರೆಸ್ಗೆ ಗೊಂದಲ
ಕಳೆದ ಬಾರಿ ಭಾರೀ ಸೋಲಿನ ನಂತರ ಕ್ಷೇತ್ರದಿಂದ ಸಂತೋಷ ಲಾಡ್ ಬಹುತೇಕ ದೂರವೇ ಉಳಿದಿದ್ದರು. ಹೀಗಾಗಿ ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಛಬ್ಬಿ ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದರು. ಮುಂದಿನ ಭಾರಿ ತಾವೇ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಯಿಳಿಯಲು ಭರ್ಜರಿ ತಯಾರಿಸಿ ನಡೆಸಿದ್ದರು. ಅಲ್ಲದೇ ಕೊರೊನಾ ಸಮಯದಲ್ಲಿ ಬಡ ಕಾರ್ಮಿಕರಿಗೆ ಕಿಟ್ ಹಂಚಿಕೆ ಮಾಡಿದ್ದರು. ತಮ್ಮ ಮಗಳ ಮದುವೆಯನ್ನು ಕಲಘಟಗಿಯಲ್ಲಿ ಮಾಡಿ ಭರ್ಜರಿ ಆರಂಭ ನೀಡಿದ್ದರು.
ಈಗಲೂ ಛಬ್ಬಿ ಕಲಘಟಗಿ ಕ್ಷೇತ್ರದಲ್ಲೆ ಪ್ರತಿ ದಿನ ರೌಂಡ್ಸ್ ಹೊಡೆಯುತ್ತಿದ್ದಾರೆ. ಆದರೆ ಛಬ್ಬಿ ಆಗಮನದ ಸುದ್ದಿ ಕೇಳಿ ಸಂತೋಷ ಲಾಡ್ ಕಳೆದ ಎರಡು ಮೂರು ತಿಂಗನಿಳಿಂದ ಮತ್ತೆ ಕಲಘಟಗಿ ಕ್ಷೇತ್ರಕ್ಕೆ ಎಂಟ್ರಿ ನೀಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಜನರ ಮದುವೆ ಕಾರ್ಯಕ್ರಮ ಹಾಗೂ ಇನ್ನಿತರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾನೂ ಕೂಡ ಮತ್ತೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಕಳೆದ ಭಾರಿ ಬಿಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಎದುರು 26 ಸಾವಿರ ಮತಗಳಿಂದ ಸೋತಿರುವ ಲಾಡ್, ಸದ್ಯ ಭರ್ಜರಿಯಾಗಿ ಪೂರ್ವ ತಯಾರಿ ನಡೆಸಲು ಮುಂದಾಗಿದ್ದಾರೆ. ಇದೇ ಕಸರತ್ತು ಜಿಲ್ಲಾ ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಇಬ್ಬರೂ ನಾಯಕರು ಒಂದೇ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವುದರಿಂದ ಸಹಜವಾಗಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಗೊಂದಲದಲ್ಲಿದೆ.