ಗೋಕರ್ಣ ಮಹಾಬಲೇಶ್ವರ ದೇಗುಲ ಆಡಳಿ ನಿರ್ವಹಣೆ ವಿವಾದ: ರಾಜ್ಯ ಸರ್ಕಾರ ಆದೇಶ ರದ್ದುಗೊಳಿಸಿದ ಹೈಕೋರ್ಟ್

| Updated By: ರಮೇಶ್ ಬಿ. ಜವಳಗೇರಾ

Updated on: Jan 23, 2024 | 11:14 PM

ಗೋಕರ್ಣ ಶ್ರೀ ಮಹಾಬಲೇಶ್ವರ ದೇಗುಲದ ಉಪಾಧಿವಂತರು ಹಾಗೂ ವಿದ್ವಾಂಸರ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.

ಗೋಕರ್ಣ ಮಹಾಬಲೇಶ್ವರ ದೇಗುಲ ಆಡಳಿ ನಿರ್ವಹಣೆ ವಿವಾದ: ರಾಜ್ಯ ಸರ್ಕಾರ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, (ಜನವರಿ 23): ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಾಮ ನಿರ್ದೇಶನಗೊಂಡಿದ್ದ ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ಯಾಂಸದರನ್ನು ಬದಲಾಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ. ಈ ಸಂಬಂಧ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿದ್ದ ಹೈಕೋರ್ಟ್​, 2023ರ ಆಗಸ್ಟ್​ 22ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಆದ್ರೆ, ಇಂದು (ಜನವರಿ 22) ಸರ್ಕಾರದ ಕ್ರಮ ರದ್ದುಪಡಿಸಿ‌ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಗೋಕರ್ಣಶ್ರೀ ಮಹಾಬಲೇಶ್ವರ ದೇಗುಲದ ಆಡಳಿತ ನಿರ್ವಹಣೆಗಾಗಿ ಸುಪ್ರೀಂಕೋರ್ಟ್‌ ಆದೇಶಾನುಸಾರ ನೇಮಕವಾಗಿದ್ದರು. ಆದ್ರೆ, ರಾಜ್ಯ ಸರ್ಕಾರ ಬದಲಾವಣೆ ಮಾಡಿ 2023ರ ಜುಲೈ 12ರಂದು ಆದೇಶಿಸಿತ್ತು. ಹೊಸ ಸದಸ್ಯರ ನೇಮಕಾತಿಗೆ ಸರ್ಕಾರಕ್ಕೆ‌ ಅಧಿಕಾರವಿಲ್ಲವೆಂದು ಸರ್ಕಾರದ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್, ಗೋಕರ್ಣಶ್ರೀ ಮಹಾಬಲೇಶ್ವರ ದೇಗುಲದ ಉಪಾಧಿವಂತರ ಬದಲಾವಣೆ ರದ್ದುಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಪ್ರಕರಣದ ಹಿನ್ನೆಲೆ

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಡಿನೋಟಿಫೈ ಪ್ರಕರಣದ ಸಿವಿಲ್‌ ದಾವೆಯಲ್ಲಿ ಸುಪ್ರೀಂ ಕೋರ್ಟ್‌ 2021ರ ಏಪ್ರಿಲ್‌ 19ರಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದ ಅನುಸಾರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ 2021ರ ಮೇ 4ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.

ಈ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯೆ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ಬದಲಾವಣೆ ಮಾಡಿ ಸಿದ್ದರಾಮಯ್ಯನವರ ಸರ್ಕಾರ, 2023ರ ಜುಲೈ 12ರಂದು ಆದೇಶ ಹೊರಡಿಸಿತ್ತು. ಅಲ್ಲದೇ ಉಪಾಧಿವಂತರ ಸ್ಥಾನಕ್ಕೆ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರ ಸ್ಥಾನಕ್ಕೆ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ್‌ ಗಣೇಶ್‌ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.