ಕೊರೊನಾ ಆತಂಕದ ನಡುವೆಯೇ ಗಗನಕ್ಕೇರಿದ್ದ ಚಿನ್ನದ ದರ ಕಳೆದೆರಡು ವಾರಗಳಿಂದ ಇಳಿಯುತ್ತಿದೆ. ಪ್ರಸ್ತುತ 22 ಕ್ಯಾರೆಟ್ನ 10ಗ್ರಾಂ ಚಿನ್ನದ ದರ 45,150 ರೂ ಆಗಿದ್ದು, ನಿನ್ನೆಗಿಂತ ಇಂದು 250ರೂ ಕಡಿಮೆಯಾಗಿದೆ. ಕೊರೊನಾ ಸೋಂಕಿದ್ದರೂ ಜನರಲ್ಲಿ ಚಿನ್ನ ಕೊಳ್ಳುವ ಆಸೆ ಮೂಡಿಸುತ್ತಿದೆ.
ಚಿನ್ನದ ದರದ ಏರಿಳಿತದ ಕುರಿತು ಟಿವಿ9 ಕನ್ನಡ ಏರ್ಪಡಿಸಿದ್ದ Facebook Live ನಲ್ಲಿ ಇಂಡಿಯನ್ ಮನಿ. ಕಾಮ್ನ ಸಿಇಓ ಸಿ ಎಸ್ ಸುಧೀರ್, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಶರವಣ ಮತ್ತು ವಚನ ಇನ್ವೆಸ್ಟ್ಮೆಂಟ್ನ ಮುಖ್ಯಸ್ಥ ರುದ್ರಮೂರ್ತಿ ಪಾಲ್ಗೊಂಡಿದ್ದರು.
ಚಿನ್ನದ ದರದ ಏರಿಳಿತಗಳ ಕುರಿತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡ ಸಿ.ಎಸ್. ಸುಧೀರ್, ‘ಕೊರೊನಾ ನಂತರ ಆರ್ಥಿಕ ಚೇತರಿಕೆ ಕಷ್ಟ ಎಂದೇ ಬಹುತೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ಅತ್ಯಂತ ವೇಗವಾಗಿ ಆರ್ಥಿಕ ಚೇತರಿಕೆಯಾಗುತ್ತಿರುವ ಕಾರಣ ಎಲ್ಲ ರಂಗಗಳಲ್ಲೂ ಉತ್ತಮ ಹೂಡಿಕೆಯಾಗುತ್ತಿದೆ. ಕೇವಲ ಚಿನ್ನದ ಮೇಲೊಂದೇ ಅಲ್ಲದೇ, ಮ್ಯೂಚುವಲ್ ಫಂಡ್ ಮುಂತಾದ ಇತರ ಕ್ಷೇತ್ರಗಳಲ್ಲೂ ಹೂಡಿಕೆಯಾದಾಗ ಹೂಡಿಕೆಯ ಮೊತ್ತವು ವಿಭಜನೆಯಾಗುತ್ತದೆ. ಹೀಗಾಗಿ, ಚಿನ್ನದ ಬೆಲೆಯಲ್ಲಿ ಇನ್ನೂ ನಾಲ್ಕರಿಂದ ಐದು ಸಾವಿರ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ದೃಢವಾಗಿ ಎಂದು ವಿವರಿಸಿದರು.
ಲಾಕ್ಡೌನ್ ಅವಧಿಯಲ್ಲಿ ಸಾಲ ಮರುಪಾವತಿಗೆ ಬ್ಯಾಂಕ್ಗಳು ವಿನಾಯ್ತಿ ನೀಡಿದ್ದವು. ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಗೋಚರವಾಗುತ್ತವೆ. ಷೇರುಪೇಟೆಯಲ್ಲಿ ಬ್ಯಾಂಕಿಂಗ್ ಕಂಪನಿಗಳ ಷೇರುಮೌಲ್ಯ ತೀವ್ರಗತಿಯಲ್ಲಿ ಕುಸಿದರೆ ಚಿನ್ನದ ದರ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದರು.
ಟಿವಿ9 ಕನ್ನಡ ಫೆಸ್ಬುಕ್ ಲೈವ್ (Tv9 Kannada Facebook Live)
ಷೇರು ಮಾರುಕಟ್ಟೆ ಚೇತರಿಕೆಯ ಮೇಲೆ ಚಿನ್ನದ ದರದ ನಿರ್ಧಾರ..
ಸರ್ಕಾರ ಚಿನ್ನದ ದರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಹಣದ ಬದಲಿಗೆ, ಚಿನ್ನವನ್ನು ಲಂಚ ಕೇಳುವ ಪದ್ಧತಿ ರೂಡಿಗೆ ಬರುತ್ತಿದೆ. ಈಗಲೂ ಕಪ್ಪುಹಣವನ್ನು ಚಿನ್ನದ ರೂಪಕ್ಕೆ ಬದಲಿಸುತ್ತಿದ್ದಾರೆ. ಹೂಡಿಕೆಯ ಶೇ.5ರಿಂದ 10 ಭಾಗವನ್ನು ಮಾತ್ರ ಚಿನ್ನಕ್ಕೆ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು. ಕೊರೊನಾ ಲಸಿಕೆಯ ಯಶಸ್ಸು, ವಸೂಲಾಗದ ಸಾಲವನ್ನು ಬ್ಯಾಂಕಿಂಗ್ ವಲಯ ಘೋಷಿಸುವ ಹೊತ್ತಿಗೆ ಷೇರು ಮಾರುಕಟ್ಟೆಯ ಏರಿಳಿತ, ಸರ್ಕಾರದ ನಿರ್ಧಾರಗಳು ಚಿನ್ನದ ದರ ಏರಿಳಿತ ಅವಲಂಬಿತವಾಗಲಿದೆ. ಶೇರು ಮಾರುಕಟ್ಟೆ ಚೇತರಿಸಿದರೆ ಖಂಡಿತವಾಗಿಯೂ ಚಿನ್ನದ ದರ ಇಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿನ್ನದ ದರದಲ್ಲಿ ಪ್ರತಿವರ್ಷ 5-10 ಪ್ರತಿವರ್ಷ ಏರಿಕೆಯಾಗಬಹುದು..
ವಚನ ಇನ್ವೆಸ್ಟ್ಮೆಂಟ್ನ ಮುಖ್ಯಸ್ಥ ರುದ್ರಮೂರ್ತಿ ಮಾತನಾಡಿ, ಕೊರೊನಾ ಲಸಿಕೆ ಬರುವ ಭರವಸೆಯೇ ಚಿನ್ನದ ದರದ ಇಳಿಕೆಗೆ ಕಾರಣ ಎಂದು ತಿಳಿಸಿದರು. ಆದರೆ ದರದಲ್ಲಿ ಭಾರಿ ಏರಿಕೆ ಅಥವಾ ಇಳಿಕೆಯನ್ನು ನಿರೀಕ್ಷಿಸುವಂತಿಲ್ಲ. ಶೇ.5ರಿಂದ10 ಏರಿಳಿತ ಆಗಬಹುದು. ಒಂದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಬಾರದು. ಚಿನ್ನದ ದರದಲ್ಲಿ ಪ್ರತಿವರ್ಷ 5-10ಪ್ರತಿವರ್ಷ ಏರಿಕೆಯಾಗಬಹುದು. ಪ್ರಸ್ತುತ ದೀರ್ಘಕಾಲಿಕ ಬ್ಯಾಂಕ್ ಠೇವಣಿಯೂ ಸಹ ಚಿನ್ನದಷ್ಟೇ ಲಾಭ ತರಬಹುದು. ಚಿನ್ನದ ದರ ಪಾತಾಳಕ್ಕೆ ಕುಸಿಯತ್ತದೆ ಎಂಬ ನಿರೀಕ್ಷೆಯಂತೂ ಬೇಡ ಎಂದರು.
ಈ ಕಂಪನಿಗಳ ಮೇಲೆ ಹೂಡಿಕೆ ಮಾಡಿ..
ಷೇರು ಮಾರುಕಟ್ಟೆ ಕಬ್ಬಿಣದ ಕಡಲೆ ಎಂಬ ಭಾವನೆ ಸಾರ್ವಜನಿಕರಲ್ಲಿ ಈಗಲೂ ಇದೆ. ದಿನಬಳಕೆಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳ ಶೇರುಗಳ ಮೇಲೆ ಹೂಡಿಕೆ ಮಾಡಬಹುದು. ಕೈಲಿರುವ ಎಲ್ಲಾ ಹಣವನ್ನು ಒಂದೇ ಕ್ಷೇತ್ರದ ಮೇಲೆ ಹೂಡಿಕೆ ಮಾಡಬಾರದು. ಮೊದಲು ನಿಮ್ಮ ಹಣದ ಭದ್ರತೆ ಖಚಿತಪಡಿಸಿಕೊಳ್ಳಿ. ನಂತರವಷ್ಟೇ, ಲಾಭದ ಮೇಲೆ ಗಮನಹರಿಸಿ. ಮುಂದಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಇಡುವ ಠೇವಣಿಗೆ ಹೆಚ್ಚು ಬಡ್ಡಿ ದರ ಸಿಗುವ ಸಂಭವವಿದೆ. ಹೂಡಿಕೆ ಕ್ಷೇತ್ರದ ಬದಲಾವಣೆಗಳನ್ನು ಅರಿತು ಹೂಡಿಕೆ ಮಾಡಿ ಎಂದು ಅವರು ವಿವರಿಸಿದರು.
ಹೂಡಿಕೆಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಭೌತಿಕ ಚಿನ್ನಕ್ಕಿಂತಲೂ ಯೂನಿಟ್ಗಳತ್ತ ಗಮನ ಹರಿಸುವುದು ಒಳಿತು. ಬೆಲೆ ಏರಿಳಿತವನ್ನು ಸೂಕ್ಷ್ಮವಾಗಿ ಗಮನಿಸಿ, ಚಿನ್ನದ ಬೆಲೆ ಕಡಿಮೆಯಾದಾಗ ಕೊಳ್ಳಲು ಮುಂದಾಗಬೇಕು. ಆದರೆ ನಾವು ಇನ್ನಷ್ಟು ಕಡಿಮೆಯಾಗಬಹುದು ಎಂದು ಕಾಯುತ್ತೇವೆ. ನಿಗದಿತ ಮೊತ್ತವನ್ನು ಹೂಡಿಕೆ ಮಾಡುವ ಶಿಸ್ತು ಬೆಳೆಸಿಕೊಳ್ಳುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಶರವಣ ಮಾತ್ರ, ಆಭರಣ ರೂಪದ ಚಿನ್ನ ಕೊಳ್ಳುವುದೇ ಕ್ಷೇಮ ಮತ್ತು ಲಾಭಕರ ಎಂದು ಪ್ರತಿಪಾದಿಸಿದರು.
Published On - 6:19 pm, Wed, 2 December 20