ಗದಗ: ಇಡೀ ದೇಶವನ್ನ ಬುಡಮೇಲು ಮಾಡಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಕೊರೊನಾ ವಾರಿಯರ್ಸ್ ಮನೆ ಮಠ ಬಿಟ್ಟು ಶ್ರಮಿಸುತ್ತಿದ್ದಾರೆ. ಆದರೆ ಸರ್ಕಾರ ಅವರ ನೆರವಿಗೆ ನಿಲ್ಲುತಿಲ್ಲ.
ಮೇ 27 ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಡ್ಯೂಟಿ ವೇಳೆ 108 ಆ್ಯಂಬುಲೆನ್ಸ್ ಚಾಲಕ ಉಮೇಶ್ ಹಡಗಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊರೊನಾ ವಾರಿಯರ್ ಮೃತಪಟ್ಟರೂ ಅಧಿಕಾರಿಗಳು ಕುಟುಂಬದ ನೆರವಿಗೆ ಬಂದಿಲ್ಲ.
ತಾಳಿಯನ್ನು ಅಡವಿಟ್ಟು ಪತ್ನಿ ಮೃತ ಪತಿಯ ಕಾರ್ಯ ಮಾಡಿದ್ದಾರೆ. ಕೊರೊನಾ ವಾರಿಯರ್ ಮೃತಪಟ್ಟು 5 ದಿನಗಳಾಗಿದೆ. ಸೌಜನ್ಯಕ್ಕಾದರೂ ಮೃತನ ಮನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಭೇಟಿ ನೀಡಿಲ್ಲ. ಮೃತನ ಪತ್ನಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಮನೆ ಯಜಮಾನ ಕಳೆದುಕೊಂಡು ಕುಟುಂಬ ಕಣ್ಣೀರು ಹಾಕುತ್ತಿದೆ.
ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಸಿಸಿ ಪಾಟೀಲ್ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗದಗ ಡಿಹೆಚ್‌ಒ ಇದು ತನ್ನ ವ್ಯಾಪ್ತಿಗೆ ಬರಲ್ಲವೆಂದು ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಡಿಹೆಚ್‌ಒ ಬೇಜವಾಬ್ದಾರಿ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು, ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸಿಎಂ ಯಡಿಯೂರಪ್ಪ ಸಾಂತ್ವನ:
ಮೃತನ ಪತ್ನಿಗೆ ಸಿಎಂ B.S.ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದಿಂದ ಸಿಗಬೇಕಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಕೊರೊನಾ ವಾರಿಯರ್ ಕುಟುಂಬದ ಸಂಕಷ್ಟದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
Published On - 9:28 am, Mon, 1 June 20