ಆತ್ಮನಿರ್ಭರ್ ನಿವೇಶಕ್ ಮಿತ್ರ ಎಂಬ ಪೋರ್ಟಲ್ವೊಂದನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸುತ್ತಿದೆ. ದೇಶೀ ಹೂಡಿಕೆದಾರರಿಗೆ ಬೆಂಬಲ ಒದಗಿಸುವ, ಪ್ರಚಾರ ಮಾಡುವ ಹಾಗೂ ಕೆಲಸ ಸುಲಭಗೊಳಿಸುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ಶುಕ್ರವಾರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಹೇಳಿದೆ. ಸದ್ಯಕ್ಕೆ ಈ ಪೋರ್ಟಲ್ನ ಪರೀಕ್ಷೆ ನಡೆಯುತ್ತಿದೆ. ಮೇ 1, 2021ರ ಹೊತ್ತಿಗೆ ಅಂತಿಮ ವರ್ಷನ್ ಪೂರ್ಣಗೊಂಡು, ಬಿಡುಗಡೆಗೆ ಸಿದ್ಧವಾಗುತ್ತದೆ. ಈ ವೆಬ್ ಪೇಜ್ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಮೊಬೈಲ್ ಆಪ್ನಲ್ಲೂ ಲಭ್ಯವಾಗಲಿದೆ ಎಂದು ಸಚಿವಾಲಯದಿಂದ ತಿಳಿಸಲಾಗಿದೆ.
“ದೇಶೀಯ ಹೂಡಿಕೆಯನ್ನು ಉತ್ತೇಜಿಸಲು ಹಾಕುವ ಶ್ರಮವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಡಿಪಾರ್ಟ್ಮೆಂಟ್ ಫಾರ್ ಪ್ರಮೋಷನ್ ಆಫ್ ಇಂಡಸ್ಟ್ರಿ ಅಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ)ನಿಂದ ಡಿಜಿಟಲ್ ಪೋರ್ಟಲ್ವೊಂದನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ದೇಶೀ ಹೂಡಿಕೆದಾರರ ಕೈ ಬಲಪಡಿಸಲು, ಮಾಹಿತಿ ಪ್ರಸಾರ ಮಾಡಲು ಮತ್ತು ವ್ಯವಹಾರ ಸಲೀಸುಗೊಳಿಸಲು ಆತ್ಮನಿರ್ಭರ್ ನಿವೇಶಕ್ ಮಿತ್ರ ಸಹಾಯ ಮಾಡಲಿದೆ,” ಎಂದು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹೊಸ ನಡೆ ಮತ್ತು ನೀತಿಗಳ ಬಗ್ಗೆ ಪೋರ್ಟಲ್ ವಿಶೇಷ ಫೀಚರ್ಗಳ ಮೂಲಕ ನಿತ್ಯವೂ ಅಪ್ಡೇಟ್ ಆಗುತ್ತವೆ. ಮಂಜೂರಾತಿ, ಪರವಾನಗಿ, ಕ್ಲಿಯರೆನ್ಸ್ಗಳು, ವಿವಿಧ ಯೋಜನೆಗಳು ಹಾಗೂ ಪ್ರೋತ್ಸಾಹಧನದ ಬಗ್ಗೆ ಮತ್ತು ಉತ್ಪಾದನೆ ಕ್ಲಸ್ಟರ್ಗಳು, ಭೂಮಿ ಲಭ್ಯತೆ, ತೆರಿಗೆ ವ್ಯವಸ್ಥೆ ಬಗ್ಗೆ ಮಾಹಿತಿಗಳು ಇರುತ್ತವೆ. ಹೂಡಿಕೆದಾರರಿಗೆ ಉದ್ಯಮದ ಪಯಣದ ಉದ್ದಕ್ಕೂ ಪೋರ್ಟಲ್ ಬೆಂಬಲ ನೀಡುತ್ತದೆ. ಹಣದ ವ್ಯವಸ್ಥೆ ಹೇಗೆ ಮಾಡಿಕೊಳ್ಳಬಹುದು, ಕಚ್ಚಾ ವಸ್ತುಗಳ ಲಭ್ಯತೆ, ತರಬೇತಿ, ಆಡಳಿತದ ಅಗತ್ಯಗಳು ಮತ್ತು ಟೆಂಡರ್ ಮಾಹಿತಿಗಳು ಸಹ ಪೋರ್ಟಲ್ ಮೂಲಕ ಸಿಗುತ್ತವೆ.
ಸದ್ಯಕ್ಕೆ ಹಲವು ದೇಶೀ ಕಂಪೆನಿಗಳಿಗೆ ಅಂತಲೇ ಮೀಸಲಾದ ರಿಲೇಷನ್ಷಿಪ್ ಮ್ಯಾನೇಜರ್ ಇದ್ದಾರೆ. ಈಗಾಗಲೇ ಸಕ್ರಿಯರಾಗಿ 31,725 ಕೋಟಿ ರೂಪಾಯಿ ಹೂಡಿಕೆ ತರುವುದಕ್ಕೆ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ರೂ. 9375 ಕೋಟಿ ಹೂಡಿಕೆ ಆಗಿದೆ. ಈ ಮೂಲಕ 77,213 ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯ ಇದಕ್ಕೆ ಇದೆ ಎಂದು ತಿಳಿಸಲಾಗಿದೆ. ಒಟ್ಟಾರೆ ಜಾಗತಿಕ ಕಂಪೆನಿಗಳಿಂದ ಬರಬಹುದಾದ 153.7 ಬಿಲಿಯನ್ ಯುಎಸ್ಡಿ ಹೂಡಿಕೆಯಲ್ಲಿ 28.75 ಬಿಲಿಯನ್ ಯುಎಸ್ಡಿ ವಾಸ್ತವ ಹೂಡಿಕೆಯಾಗಿದೆ. ಈ ಮೂಲಕ 29,91,626 ಉದ್ಯೋಗದ ಸೃಷ್ಟಿ ಸಾಧ್ಯತೆ ಇದ್ದು ಮಾರ್ಚ್ 4, 2021ರ ತನಕ 3,38,685 ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಡಿಪಿಐಐಟಿ ಅಡಿಯಲ್ಲಿ ಇನ್ವೆಸ್ಟ್ ಇಂಡಿಯಾ ಎಂಬ ಸಂಸ್ಥೆಯನ್ನು 2009ರಲ್ಲಿ ಶುರು ಮಾಡಲಾಯಿತು.
ಇದನ್ನೂ ಓದಿ: Govt Stake Sale In Tata Communications: ಟಾಟಾ ಕಮ್ಯುನಿಕೇಷನ್ಸ್ನಲ್ಲಿನ ಎಲ್ಲ ಷೇರನ್ನು ಮಾರಲಿದೆ ಕೇಂದ್ರ ಸರ್ಕಾರ