ಬೆಳಗಾವಿ: ಛೇ! ಯಾವ ತಪ್ಪಿಗೆ ಈ ಶಿಕ್ಷೆ? ಕರುಳ ಕಂದನಿಗೇ 10 ವರ್ಷದಿಂದ ಬೇಡಿ ಹಾಕಿದ್ದಾರಂತೆ! ಇನ್ನೂ ಯಾವ ಕಾಲದಲ್ಲಿದ್ದಾರೆ ಈ ಜನ. ಮಾನಸಿಕ ಅಸ್ವಸ್ಥ ಎಂದು ಹಣೆಪಟ್ಟಿ ಹಚ್ಚಿ ಸ್ವಂತ ಪುತ್ರನಿಗೆ 10 ವರ್ಷಗಳಿಂದ ಕಾಲಿಗೆ ಬೇಡಿ ಹಾಕಿರುವ ಅಮಾನವೀಯ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ.
ಯಾವ ಮಹಾಪರಾಧಕ್ಕೆ?
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ವಿಠ್ಠಲ್ ಬಳಗಣ್ಣವರ್ ಎಂಬ ವ್ಯಕ್ತಿಗೆ ಪೋಷಕರೇ ಬೇಡಿ ತೊಡಿಸಿದ್ದಾರೆ. ಇಷ್ಟಕ್ಕೂ ಬೇಡಿ ತೆಗೆದರೆ ಇವನು ಮಾಡುವ ಮಹಾಪರಾಧ ಏನೂ ಅಂತ ಕೇಳಿದಾಗ. ಏನಿಲ್ಲ ಎದುರಿಗೆ ಸಿಕ್ಕಿದವರಿಗೆಲ್ಲ ಕಲ್ಲಿನಿಂದ ಹೊಡೆಯುತ್ತಾನೆ ಎಂದು ಅವನ ಹೆತ್ತವರೇ ಆರೋಪಿಸಿದ್ದಾರೆ.
ವಿಠ್ಠಲ್ ಬಳಗಣ್ಣವರ್ 10 ವರ್ಷಗಳ ಹಿಂದೆ ಬೆಳಗಾವಿಯ ಹೋಟೆಲ್‌ನಲ್ಲಿದ್ದ. ಬಳಿಕ ಊರಿಗೆ ಬಂದ ಮೇಲೆ ಮಾನಸಿಕ ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ತೋರಿಸಿದರೂ ಗುಣಮುಖನಾಗದ ಹಿನ್ನೆಲೆಯಲ್ಲಿ ಅವನನ್ನು ಮನೆಯಲ್ಲಿ ಕೂಡಿ ಹಾಕಿದ್ದೇವೆ ಎಂದು ಪೋಷಕರು ಹೇಳುತ್ತಾರೆ. ಇದೀಗ ನೇಸರಗಿ ಪಿಎಸ್‌ಐ ವೈ ಎಲ್ ಶೀಗಿಹಳ್ಳಿ ವಿಠ್ಠಲ್ ಬಳಗಣ್ಣವರ್ ಮನೆಗೆ ಭೇಟಿಕೊಟ್ಟು, ಪರಿಶೀಲನೆ ನಡೆಸಿದ್ದಾರೆ.
ಬೇರೆಯವರೆಗೆ ತೊಂದರೆ ಆಗಬಾರದು, ಅಲ್ವಾ? -ಅಮ್ಮನ ಕರುಳು
ಬೇರೆಯವರೆಗೆ ತೊಂದರೆ ಆಗಬಾರದೆಂದು ಮಗನನ್ನು ಮನೆಯಲ್ಲಿ ಕೂಡಿಹಾಕಿದ್ದೇವೆ ಎಂದು ಮಗ ವಿಠ್ಠಲನ ದುಃಸ್ಥಿತಿ ನೆನೆದು ತಾಯಿ ಭೀಮವ್ವಾ ಬಳಗಣ್ಣವರ್ ಕಣ್ಣೀರು ಹಾಕುತ್ತಾರೆ.