ಹಾವೇರಿ: ಭರಪೂರ ಮಳೆಯಾದರೆ ಸಾಕು ಹಾವೇರಿ ಮತ್ತು ಸವಣೂರು ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತದೆ. ಭರ್ಜರಿ ಮಳೆ ಬಂದು ನದಿಗೆ ನೀರು ಬಂದರಂತೂ ಕೆಲವು ಗ್ರಾಮಗಳಿಗೆ ಸಂಪರ್ಕವೆ ಕಡಿತಗೊಳ್ಳುತ್ತದೆ. ಎರಡ್ಮೂರು ಕಿ.ಮೀ ಇರುವ ಊರುಗಳಿಗೆ ಹೋಗಲು ಹತ್ತಿಪ್ಪತ್ತು ಕಿ.ಮೀ ಸುತ್ತು ಹಾಕಿ ಹೋಗಬೇಕಾಗುತ್ತದೆ. ಇದು ಹತ್ತಾರು ಗ್ರಾಮಗಳ ಜನರಿಗೆ ಎಲ್ಲಿಲ್ಲದ ಸಮಸ್ಯೆ ತಂದೊಡ್ಡುತ್ತಿದೆ.
ಇಷ್ಟಕ್ಕೂ ಹಾವೇರಿ ತಾಲೂಕಿನ ನಾಗನೂರು, ಸವಣೂರು ತಾಲೂಕಿನ ಕಳಸೂರು, ಹಿರೇಮರಳಿಹಳ್ಳಿ ಗ್ರಾಮಗಳ ಬಳಿ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಲಾಗಿದೆ. ಸುಮಾರು ವರ್ಷಗಳ ಹಿಂದೆಯೇ ಬ್ರಿಡ್ಜ್ ಕಂ ಬ್ಯಾರೇಜ್ ಗಳು ನಿರ್ಮಾಣವಾಗಿವೆ. ಕಳಸೂರು ಗ್ರಾಮದಿಂದ ದೇವಗಿರಿ, ಹಾವೇರಿ, ಹಿರೇಮರಳಿಹಳ್ಳಿ ಗ್ರಾಮದಿಂದ ಕೋಣನಬಗಿ, ಡಂಬರಮತ್ತೂರು, ನಾಗನೂರು ಗ್ರಾಮದಿಂದ ಕೂಡಲ ಗ್ರಾಮಗಳಿಗೆ ತೆರಳಲು ವರದಾ ನದಿ ದಾಟಿಕೊಂಡು ಹೋಗಬೇಕು.
ಈ ಊರುಗಳಿಗೆ ಹೋಗಿಬರಲು ನದಿಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗಳಿವೆ. ಆದರೆ ಜಿಲ್ಲೆಯಲ್ಲಿ ಹಾಗೂ ಶಿವಮೊಗ್ಗ, ಕಾರವಾರ ಜಿಲ್ಲೆಗಳಲ್ಲಿ ಮಳೆಯಾದರೆ ಸಾಕು ಬ್ರಿಡ್ಜ್ ಕಂ ಬ್ಯಾರೇಜ್ ಗಳು ಸಂಪೂರ್ಣ ಮುಳುಗಡೆ ಆಗುತ್ತವೆ.
ಬ್ರಿಡ್ಜ್ ಕಂ ಬ್ಯಾರೇಜ್ ಗಳು ವರದಾ ನದಿಗೆ ನೀರು ಬಂದಾಗೊಮ್ಮೆ ಸಂಪೂರ್ಣ ಜಲಾವೃತಗೊಳ್ಳುತ್ತವೆ. ಆಗ ಬ್ರಿಡ್ಜ್ ಮಾರ್ಗವಾಗಿ ಒಂದೆರಡು ಕಿ.ಮೀಗಳಲ್ಲಿ ತಲುಪಬಹುದಾದ ಊರುಗಳಿಗೆ ಹತ್ತು, ಇಪ್ಪತ್ತು ಕಿ.ಮೀ ದೂರ ಸುತ್ತು ಹಾಕಿ ಹೋಗಬೇಕಾಗುತ್ತದೆ.
ಹೀಗಾಗಿ ಈ ಗ್ರಾಮಗಳ ಜನರು ಬ್ರಿಡ್ಜ್ ಎತ್ತರಿಸಿ ಎಂದು ಸ್ಥಳೀಯ ಜನಪ್ರತಿನಿಧಿಗಳು, ಸಚಿವರು ಅಧಿಕಾರಿಗಳಿಗೂ ಮನವಿಗಳ ಮೇಲೆ ಮನವಿ ಸಲ್ಲಿಸಿದ್ದಾರೆ. ಆದರೂ ಈ ಗ್ರಾಮಗಳ ಜನರ ಕೂಗು ಮಾತ್ರ ಯಾರಿಗೂ ಕೇಳುತ್ತಿಲ್ಲ. ಇದರ ಜೊತೆ ನದಿ ಪಾತ್ರದಲ್ಲಿನ ರೈತರ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಸಹ ನೀರಿನಿಂದ ಜಲಾವೃತಗೊಂಡು ಬೆಳೆಗಳು ಹಾಳಾಗುತ್ತಿವೆ.
ಅನಾಹುತಗಳು ಸಂಭವಿಸಿವೆ :
ಭರಪೂರ ಮಳೆ ಬಂದು ನದಿಗಳಿಗೆ ನೀರು ಬಂದಾಗೊಮ್ಮೆ ಈ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಜಲಾವೃತಗೊಳ್ಳುತ್ತವೆ. ಆಗ ಕೆಲವರು ನೀರು ಹರಿಯುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಓಡಾಡಲು ಹೋಗಿ ನೀರು ಪಾಲಾದ ಉದಾಹರಣೆಗಳು ಇವೆ.
ನಾಗನೂರು ಗ್ರಾಮದ ಬಳಿ ಕಳೆದೆರಡು ವರ್ಷಗಳ ಹಿಂದೆ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಚಲಿಸುತ್ತಿದ್ದ ಲಾರಿಯೊಂದು ನದಿಗೆ ಉರುಳಿ ಲಾರಿಯಲ್ಲಿದ್ದ ಇಬ್ಬರು ಮೃತಪಟ್ಟಿದ್ದರು.
ಮಳೆ ಬಂದಾಗೊಮ್ಮೆ ಇಲ್ಲಿನ ಜನರು ಅನುಭವಿಸುವ ಸಂಕಷ್ಟಕ್ಕೆ ಫುಲ್ ಸ್ಟಾಪ್ ಹಾಕುವ ಸಲುವಾಗಿ ಜಿಲ್ಲಾಡಳಿತ ಮತ್ತು ಸರಕಾರ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ಎತ್ತರಿಸುವ ಕೆಲಸ ಮಾಡಬೇಕಿದೆ.
-ಪ್ರಭುಗೌಡ ಎನ್. ಪಾಟೀಲ
Published On - 6:20 pm, Thu, 6 August 20