ಕಬ್ಬನ್ ಪಾರ್ಕ್ ವಾಯು ವಿಹಾರಕ್ಕೆ ಬರುವಾಗ ತಮ್ಮ ತಮ್ಮ ಮುದ್ದಿನ ನಾಯಿಗಳನ್ನು ಜೊತೆಯಲ್ಲಿ ತರುವವರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ತೋಟಗಾರಿಕೆ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಉದ್ಯಾನವನಕ್ಕೆ ಸಾಕು ನಾಯಿಗಳನ್ನು ಕರೆತರುವ ಜೊತೆಯಲ್ಲಿ ಅದರ ಆರೋಗ್ಯ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು. ನಿಯಮ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ವಾಕ್ ಮಾಡಲು ಹೊರಗಡೆ ಹೋದಾಗ ನಾಯಿಗಳನ್ನು ಕರೆದೊಯ್ಯುವುದು ಸಹಜ. ಆದರೆ ಕೆಲವೊಮ್ಮೆ ಇದರಿಂದ ಜನರಿಗೆ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಗೆ ಹೋಗುವವರಿಗೆ ಹೊಸ ನಿರ್ಬಂಧನೆಗಳನ್ನು ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.
ನಿಯಮಗಳೇನು: ನಾಯಿಗಳಿಗೆ ಮುಖಗವಸು (ಮಾಸ್ಕ್) ಮತ್ತು ಲಸಿಕೆ ಹಾಕಿಸಿ, ಜೊತೆಗೆ ಆರೋಗ್ಯ ಪ್ರಮಾಣಪತ್ರ ತಂದರೆ ಪಾರ್ಕ್ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ನಾಯಿಯ ಕೊರಳು ಪಟ್ಟಿಗೆ ಸಿಲುಕಿಸುವ ಚೈನ್ ನನ್ನು ಮಾಲಿಕರು ಹಿಡಿತದಲ್ಲಿರಿಸಿಕೊಳ್ಳಬೇಕು.
ಉದ್ಯಾನವನದ ಒಳಗೆ ನಾಯಿಗಳು ಮಲ ಹಾಗೂ ಮೂತ್ರ ವಿಸರ್ಜನೆ ಮಾಡಿದರೆ ಸಂಬಂಧಪಟ್ಟ ಮಾಲಿಕರೇ ಶುಚಿಗೊಳಿಸಬೇಕು. ನಿಯಮಗಳನ್ನು ನಿರ್ಲಕ್ಷಿಸಿಸುವ ಮಾಲಿಕರಿಗೆ ಇಂತಿಷ್ಟು ದಂಡ ಹಾಕುವುದು ಅಂತಾನೂ ನಿಗದಿಯಾಗಿದೆ.