ಡಾ. ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ; US ಕೊವಿಡ್ ನಿಯಂತ್ರಣ ಕಾರ್ಯಪಡೆಗೆ ನಿಯೋಜನೆ!
ಬರಾಕ್ ಒಬಾಮಾ ಅಮೇರಿಕದ ಅಧ್ಯಕ್ಷರಾಗಿದ್ದಾಗ ಸರ್ಜನ್ ಜನರಲ್ ಆಗಿ ಹೆಸರು ಮಾಡಿದ್ದ ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೊಸದಾಗಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್ ಫೋರ್ಸ್ನಲ್ಲಿ ವಿವೇಕ್ ಮೂರ್ತಿ ಇದ್ದಾರೆ. ಈ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ಅಮೆರಿಕ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಖಚಿತವಾಗುತ್ತಿದ್ದಂತೆ ಹಲವು ಸಮಿತಿ, ಸಭೆ, ಶಿಫಾರಸ್ಸುಗಳ ಕೆಲಸಕಾರ್ಯದಲ್ಲಿ ಅವರು ತೊಡಗಿದ್ದಾರೆ. ಅದರಂತೆ ಕೊವಿಡ್ ನಿಯಂತ್ರಣ ಕಾರ್ಯಪಡೆ ರಚನೆಯಾಗಿದ್ದು, ಪ್ರಮುಖ ವಿಜ್ಞಾನಿಗಳು ಮತ್ತು ವೈದ್ಯರು ತಂಡದಲ್ಲಿ ಸದಸ್ಯರಾಗಿದ್ದಾರೆ. […]
ಬರಾಕ್ ಒಬಾಮಾ ಅಮೇರಿಕದ ಅಧ್ಯಕ್ಷರಾಗಿದ್ದಾಗ ಸರ್ಜನ್ ಜನರಲ್ ಆಗಿ ಹೆಸರು ಮಾಡಿದ್ದ ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೊಸದಾಗಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್ ಫೋರ್ಸ್ನಲ್ಲಿ ವಿವೇಕ್ ಮೂರ್ತಿ ಇದ್ದಾರೆ. ಈ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ.
ಅಮೆರಿಕ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಖಚಿತವಾಗುತ್ತಿದ್ದಂತೆ ಹಲವು ಸಮಿತಿ, ಸಭೆ, ಶಿಫಾರಸ್ಸುಗಳ ಕೆಲಸಕಾರ್ಯದಲ್ಲಿ ಅವರು ತೊಡಗಿದ್ದಾರೆ. ಅದರಂತೆ ಕೊವಿಡ್ ನಿಯಂತ್ರಣ ಕಾರ್ಯಪಡೆ ರಚನೆಯಾಗಿದ್ದು, ಪ್ರಮುಖ ವಿಜ್ಞಾನಿಗಳು ಮತ್ತು ವೈದ್ಯರು ತಂಡದಲ್ಲಿ ಸದಸ್ಯರಾಗಿದ್ದಾರೆ. ಕಾರ್ಯಪಡೆಯ ಮುಖ್ಯಸ್ಥರಾಗಿ ಡಾ. ಕೆಸ್ಲರ್, ಡಾ. ಸ್ಮಿತ್ ಜೊತೆಗೆ ಮಂಡ್ಯ ಮೂಲದ ವೈದ್ಯ ಡಾ. ವಿವೇಕ್ ಮೂರ್ತಿ ನಿಯೋಜನೆಗೊಂಡಿದ್ದು, ಕರುನಾಡಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಹುಟ್ಟೂರಿನ ಜೊತೆಗೆ ಬಿಟ್ಟುಬಿಡದ ನಂಟು! ಸದ್ಯ ಅಮೆರಿಕದಲ್ಲಿ ನೆಲೆಸಿರುವ 43 ವರ್ಷದ ಡಾ. ವಿವೇಕ್ ಮೂರ್ತಿ, ಡಾ. ಎಚ್.ಎನ್. ಲಕ್ಷ್ಮಿನರಸಿಂಹಮೂರ್ತಿ ಮತ್ತು ಮೈತ್ರೇಯಿ ದಂಪತಿಗಳ ಪುತ್ರ. ಡಾ. ಲಕ್ಷ್ಮಿನರಸಿಂಹಮೂರ್ತಿ ಅವರು ಕೂಡ ವೈದ್ಯರಾಗಿದ್ದು, ಲಂಡನ್ನಲ್ಲಿ ಇದ್ದರು. ಬಳಿಕ ಅವರ ಕುಟುಂಬವು ಅಮೆರಿಕದಲ್ಲಿ ನೆಲೆಸಿತು.
ವಿದೇಶದಲ್ಲಿ ವೃತ್ತಿಯಲ್ಲಿದ್ದರೂ ತವರಿನ ಕಡೆಗೆ ಅಪಾರವಾದ ಸೆಳೆತ ಹೊಂದಿರುವ ಡಾ. ವಿವೇಕ್, ತಮ್ಮ ಹುಟ್ಟೂರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರತಿವರ್ಷ ಮಂಡ್ಯದ ಹಲ್ಲೇಗೆರೆಗೆ ಭೇಟಿ ನೀಡುವ ಅಭ್ಯಾಸವನ್ನು ಇಟ್ಟುಕೊಂಡಿರುವ ಅವರು, ಸುಮಾರು ಹತ್ತು ವರ್ಷಗಳಿಂದ ವೈದ್ಯಕೀಯ ಕ್ಯಾಂಪ್ಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಸಹಾಯ ಮಾಡುತ್ತಿದ್ದಾರೆ. ಹಲ್ಲೇಗೆರೆಯಲ್ಲಿರುವ ತಮ್ಮ ಮೂಲ ಆಸ್ತಿಯನ್ನು ಬಳಸಿ, ಸರ್ವಧರ್ಮೀಯರೂ ಪ್ರಾರ್ಥಿಸುವಂಥ ‘ಭೂಮಂಡಲ ಆರಾಧನಾ ಕೇಂದ್ರ’ ಸ್ಥಾಪಿಸುವ ಯೋಜನೆಯಲ್ಲಿದ್ದಾರೆ.
ವಿವೇಕ್ ಮೂರ್ತಿ ಅಮೆರಿಕದಲ್ಲಿ,’ಡಾಕ್ಟರ್ ಫಾರ್ ಅಮೆರಿಕ’ ಸಂಸ್ಥೆಯ ಸಹ ಸಂಸ್ಥಾಪಕರು ಮತ್ತು ಡೆಮಾಕ್ರಟಿಕ್ ಪಕ್ಷದ ವೈದ್ಯಕೀಯ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರ ಪ್ರಚಾರ ನಡೆಸಿರುವ ಅವರು, ಬರಾಕ್ ಒಬಾಮ ಸರ್ಕಾರದಲ್ಲಿ ಯುಎಸ್ ಸರ್ಜನ್ ಜನರಲ್ ಆಗಿ ಕೆಲಸ ನಿರ್ವಹಿಸಿದ್ದರು. ಒಬಾಮಾ ಕೇರ್ ಕಾರ್ಯಕ್ರಮ ರೂಪಿಸುವಲ್ಲೂ ಮುಖ್ಯಪಾತ್ರ ವಹಿಸಿದ್ದರು. ಅವರು ಕೋವಿಡ್ ಸಮಯದಲ್ಲಿ ಬರೆದ ‘ಟುಗೆದರ್’ ಎಂಬ ಪುಸ್ತಕ 25 ರಾಷ್ಟ್ರಗಳಲ್ಲಿ ಬಿಡುಗಡೆ ಕಂಡಿತ್ತು. ಇದೀಗ ಅಮೆರಿಕದ ಕೊವಿಡ್ ನಿಯಂತ್ರಣ ಕಾರ್ಯಪಡೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿರುವ ಡಾ. ವಿವೇಕ್ ಹೊಸ ಸಾಧನೆಯ ಹಾದಿಯಲ್ಲಿ ಸಾಗಲಿದ್ದಾರೆ.