ಬೆಂಗಳೂರು: ಬೆಂಗಳೂರಿನ ಕೆರೆಗಳ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬೇಗೂರು ಕೆರೆ, ಸುಬ್ರಹ್ಮಣ್ಯಪುರ ಕೆರೆ, ಕಗ್ಗದಾಸಪುರ ಕೆರೆ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದ್ದು, ಡಿಪಿಎಆರ್ನಂತೆ ಕಾಮಗಾರಿ ನಿರ್ವಹಿಸಲು ಬಿಬಿಎಂಪಿಗೆ ಹೈಕೋರ್ಟ್ ಅನುಮತಿ ನೀಡಿದೆ. ಕೆರೆಯ ಸುತ್ತಲಿನ ಪಾದಚಾರಿ ಮಾರ್ಗದ ಅಗಲ ಕಡಿತಗೊಳಿಸಲು ಸೂಚಿಸುವ ಜೊತೆಗೆ ಕೆರೆಗಳ ನೀರು ಶೇಖರಣೆ ಸಾಮರ್ಥ್ಯ ಹೆಚ್ಚಳ ಮಾಡಲು ಬೇಕಾದ ಕ್ರಮಕೈಗೊಳ್ಳಲು ಸೂಚನೆ ನೀಡಿದೆ.
ಬೇಗೂರು ಕೆರೆಯಲ್ಲಿ 6.30 ಎಕರೆ ಖಾಸಗಿಯವರ ಒತ್ತುವರಿ ಇರುವುದು ಸರ್ವೆಯಲ್ಲಿ ಪತ್ತೆಯಾಗಿದೆ. 3.26 ಎಕರೆ ಸರ್ಕಾರಿ ರಸ್ತೆಯೂ ನಿರ್ಮಾಣವಾಗಿದೆ. ಕಗ್ಗದಾಸಪುರ ಕೆರೆಯಲ್ಲಿ 23 ಒತ್ತುವರಿ ಇರುವುದು ಸರ್ವೆ ವೇಳೆ ಪತ್ತೆಯಾಗಿದ್ದು, ಒತ್ತುವರಿ ತೆರವಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಸುಬ್ರಹ್ಮಣ್ಯಪುರ ಕೆರೆಯೂ ಸೇರಿದಂತೆ ಮೂರೂ ಕೆರೆಗಳನ್ನು ಹೊಸದಾಗಿ ಸರ್ವೆ ಮಾಡಲು ಬಿಬಿಎಂಪಿ ನಾಲ್ಕು ವಾರಗಳ ಕಾಲಾವಕಾಶ ಕೋರಿದೆ. ಬಿಬಿಎಂಪಿ ಮನವಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್ ಹೊಸ ಸರ್ವೆ ವರದಿ ಬರುವವರೆಗೂ ಬಿಬಿಎಂಪಿ ಕಾಯುವ ಅಗತ್ಯವಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಬೇಕು. ಬಿಬಿಎಂಪಿ, ಸರ್ಕಾರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ ಹೈಕೋರ್ಟ್ ಸೂಚನೆಯಂತೆ NEERI ಸಂಸ್ಥೆಯ ಸಲಹೆ ಪಡೆಯಲಾಗಿದ್ದು ಡಿಪಿಎಆರ್ ನಂತೆ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬಹುದೆಂದು NEERI ತಿಳಿಸಿದೆ. ಹೀಗಾಗಿ ಹೈಕೋರ್ಟ್ ಡಿಪಿಎಆರ್ ನಂತೆ ಕಾಮಗಾರಿ ನಡೆಸಲು ಬಿಬಿಎಂಪಿ ಗೆ ಅನುಮತಿ ನೀಡಿದೆ. ಕೆರೆ ಸುತ್ತಲಿನ ಪಾದಚಾರಿ ಮಾರ್ಗದ ಅಗಲ ಕಡಿತಗೊಳಿಸಿ ಕೆರೆಗಳ ನೀರು ಶೇಖರಣೆ ಸಾಮರ್ಥ್ಯ ಹೆಚ್ಚಳಕ್ಕೂ ಹೈಕೋರ್ಟ್ ಸೂಚನೆ ನೀಡಿದೆ. ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಕೂಡಾ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದು ಸುಬ್ರಹ್ಮಣ್ಯಪುರ ಕೆರೆಯ ಸರ್ವೆ, ಬೇಗೂರು, ಕಗ್ಗದಾಸಪುರ ಕೆರೆ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ಕಾಲಾವಕಾಶ ನೀಡುವಂತೆ ಕೋರಿದ್ದರು.
ಇದನ್ನೂ ಓದಿ:
ಕೆರೆ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಆರೋಪ: ಸರ್ವೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ
ರಾಜಕಾಲುವೆಗಳ ಮೇಲೆ ಮತ್ತೆ ಘರ್ಜಿಸಲಿವೆ ಬಿಬಿಎಂಪಿ ಜೆಸಿಬಿಗಳು! ಯಾವಾಗಿನಿಂದ, ಎಲ್ಲೆಲ್ಲಿ?