ಲಾಕ್​ಡೌನ್ ನಿಂದ ಹೆಚ್ಚಾಯ್ತು ‘ಭೂಲೋಕದ ಸ್ವರ್ಗ’ ಮುಳ್ಳಯ್ಯನಗಿರಿಯ ಸೊಬಗು!

|

Updated on: Jun 05, 2020 | 3:10 PM

ಚಿಕ್ಕಮಗಳೂರು: ಇಂದು ಜೂನ್ 5, ವಿಶ್ವ ಪರಿಸರ ದಿನ.. ನಮ್ಮ ಪ್ರತಿಯೊಂದು ಕೆಲಸ ಕಾರ್ಯದ ಮೇಲೂ, ಪ್ರತಿ ಹೆಜ್ಜೆಯಲ್ಲೂ ಪರಿಸರದ ಅವಲಂಬನೆ ಅತಿ ಹೆಚ್ಚಾಗಿದೆ. ಆದ್ರೂ ಪರಿಸರದ ಮೇಲೆ ನಮ್ಮ ಕಾಳಜಿ ಅಷ್ಟಕಷ್ಟೇ. ಈ ಪರಿಸರ ಅಂದಾಗ ಪಶ್ಚಿಮ ಘಟ್ಟಗಳು, ಮಲೆನಾಡು ನಮ್ಮ ಕಣ್ಮುಂದೆ ಬಂದ್ಬಿಡುತ್ತೆ. ಹಸಿರುಟ್ಟ ಬೆಟ್ಟಗಳ ಗಿರಿ ಶೃಂಗಗಳ ಸಾಲುಗಳು. ಗಿರಿ ಶಿಖರಗಳ ಮಧ್ಯೆ ಹೊಯ್ದಾಡೋ ಮಂಜಿನ ಕಣ್ಣಾ ಮುಚ್ಚಾಲೆಯ ಆಟ. ಮೈಯನ್ನ ಅರೆಕ್ಷಣ ನಡುಗಿಸಿ ಮೈ ಮನವನ್ನ ಕೂಲಾಗಿಸೋ ತಂಪಾದ ತಂಗಾಳಿ. ಆಹಾ.. […]

ಲಾಕ್​ಡೌನ್ ನಿಂದ ಹೆಚ್ಚಾಯ್ತು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿಯ ಸೊಬಗು!
Follow us on

ಚಿಕ್ಕಮಗಳೂರು: ಇಂದು ಜೂನ್ 5, ವಿಶ್ವ ಪರಿಸರ ದಿನ.. ನಮ್ಮ ಪ್ರತಿಯೊಂದು ಕೆಲಸ ಕಾರ್ಯದ ಮೇಲೂ, ಪ್ರತಿ ಹೆಜ್ಜೆಯಲ್ಲೂ ಪರಿಸರದ ಅವಲಂಬನೆ ಅತಿ ಹೆಚ್ಚಾಗಿದೆ. ಆದ್ರೂ ಪರಿಸರದ ಮೇಲೆ ನಮ್ಮ ಕಾಳಜಿ ಅಷ್ಟಕಷ್ಟೇ. ಈ ಪರಿಸರ ಅಂದಾಗ ಪಶ್ಚಿಮ ಘಟ್ಟಗಳು, ಮಲೆನಾಡು ನಮ್ಮ ಕಣ್ಮುಂದೆ ಬಂದ್ಬಿಡುತ್ತೆ. ಹಸಿರುಟ್ಟ ಬೆಟ್ಟಗಳ ಗಿರಿ ಶೃಂಗಗಳ ಸಾಲುಗಳು. ಗಿರಿ ಶಿಖರಗಳ ಮಧ್ಯೆ ಹೊಯ್ದಾಡೋ ಮಂಜಿನ ಕಣ್ಣಾ ಮುಚ್ಚಾಲೆಯ ಆಟ. ಮೈಯನ್ನ ಅರೆಕ್ಷಣ ನಡುಗಿಸಿ ಮೈ ಮನವನ್ನ ಕೂಲಾಗಿಸೋ ತಂಪಾದ ತಂಗಾಳಿ. ಆಹಾ.. ಮಲೆನಾಡ ಸಿರಿಯ ವೈಭವ ಅನುಭವಿಸಿದವರಿಗೆ ಗೊತ್ತು. ಮಳೆಯ ಆರಂಭಕ್ಕೂ ಮುನ್ನ ಹಚ್ಚ ಹಸಿರಿನ ಮಲೆನಾಡಿನ ವೈಭವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ರೂ ಪ್ರವಾಸಿಗರು ಮಾತ್ರ ಬರೋ ಹಾಗಿಲ್ಲ. ಲಾಕ್​ಡೌನ್​ನಿಂದ ಸದ್ಯ ಗಿರಿ ಪ್ರದೇಶ ಸ್ವಚ್ಛವಾಗಿದ್ದು, ಮುಳ್ಳಯ್ಯನಗಿರಿಯ ನೈಜ ಸೊಬಗು ಅನಾವರಣವಾಗಿದೆ.

ಹಸಿರ ಪ್ರಕೃತಿ ಸೊಬಗಲ್ಲಿ ಮನಸ್ಸು ಇಮ್ಮಡಿ:
ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸಾಗುತ್ತಿದ್ದರೆ ಆಕಾಶದಲ್ಲಿ ಕಾಣೋ ಸಿಗೋ ಮೋಡಗಳ ಚಿತ್ತಾರ. ಆ ಮಧ್ಯೆ ಕಿವಿಗೆ ಕೇಳಿಸೋ ಪಕ್ಷಿಗಳ ಇಂಚರದ ಸ್ವಾಗತ. ಪ್ರಕೃತಿ ವೈಶಿಷ್ಟತೆಯೇ ವಿಚಿತ್ರವನ್ನ ನಿಬ್ಬೆರಾಗುವಂತೆ ಮಾಡುತ್ತದೆ. ಕಾಫಿನಾಡಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾದ್ರೆ ಸಾಕು ಪ್ರಕೃತಿ ಹೊಸ ರೂಪ ಪಡೆದುಕೊಳ್ಳುತ್ತದೆ. ಹೌದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಚಿತ್ರಣವೇ ಬದಲಾಗಿದೆ. ಸೂರ್ಯ ರಶ್ಮಿಗೆ ಮಂಜು ಮುತ್ತಿಕ್ಕುತ್ತಿದ್ದು, ಮಂಜಿನ ರಭಸಕ್ಕೆ ದಿನಕರನೂ ಮಂಕಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಿಂದ 40 ಕಿಲೋ ಮೀಟರ್ ದೂರದಲ್ಲಿ ಇರುವ ಪಶ್ಚಿಮ ಘಟ್ಟ ಪ್ರದೇಶವಾದ ಮುಳ್ಳಯ್ಯನ ಗಿರಿಯ ಪ್ರಕೃತಿ ಸೊಬಗು ಇದೀಗ ಇಮ್ಮಡಿಗೊಂಡಿದೆ. ಸುತ್ತಲಿನ ವನರಾಶಿ ಕಂಗೊಳಿಸುತ್ತಿದ್ರೂ ನೋಡಿ ಆನಂದಿಸುವ ಭಾಗ್ಯ ಮಾತ್ರ ಈ ಭಾರೀ ಪ್ರವಾಸಿಗರಿಗೆ ಇಲ್ಲದಂತಾಗಿದೆ.

ಪ್ರವಾಸಿಗರಿಲ್ಲದೆ ರಸ್ತೆಗಳು ಖಾಲಿ ಖಾಲಿ:
ಬಾನೆತ್ತರದ ಶಿಖರಗಳಿಂದ ಬರುವ ಮಂಜಿಗೆ ಮೈಯೊಡ್ಡಲು ಪ್ರವಾಸಿಗರಿಲ್ಲ. ಮುಗಿಲು ಚುಂಬಿಸುವ ಹಸಿರು ಬೆಟ್ಟದ ಮೇಲೆಲ್ಲ ರಾಶಿ ಬಿದ್ದ ಹಿಮ, ಅದರ ನಡುವೆ ಅಚಾನಕ್ಕಾಗಿ ಯಾವಾಗಲೊ ಒಮ್ಮೆ ತನ್ನ ಬಂಗಾರದ ಕಿರಣಗಳನ್ನು ಹೊರಸೂಸುವ ದಿನಕರನ ಚಿತ್ತಾರ, ಮೈ ಕೊರೆಯುವ ಚಳಿಗಾಳಿ, ಎದೆ ಝಲ್ ಎನಿಸುವ ಕಡಿದಾದ ರಸ್ತೆಯ ತಳದಲ್ಲೇ ಇರುವ ಪ್ರಪಾತ. ಪ್ರಶಾಂತವಾಗಿ ಹಸಿರು ಹೊದ್ದು ಮಲಗಿರುವ ದಟ್ಟ ಕಾನನ ಮಲೆನಾಡಿನಲ್ಲೀಗ ಹೊಸ ಲೋಕವನ್ನು ತೆರೆದಿಟ್ಟಿದೆ . ಲಾಕ್​ಡೌನ್​ನಿಂದ ಮಲೆನಾಡಿನ ದಟ್ಟ ಕಾನನದ ರಸ್ತೆಗಳು ಸಹ ಖಾಲಿ ಖಾಲಿಯಾಗಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಗಿರಿ ಪ್ರದೇಶದಲ್ಲಿ ಜನರು ಇಲ್ಲದೇ ಕೂಲ್ ಕೂಲ್ ಆಗಿದ್ದು, ಪ್ಲಾಸಿಕ್ ಮುಕ್ತವಾಗಿ ಸಂಪೂರ್ಣ ಸ್ವಚ್ಚಂದ ವಾತಾವರಣ ಈಗ ಕಂಡುಬರುತ್ತಿದೆ.

ಕೊರೊನಾ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ರೂ ಪರಿಸರದ ಮೇಲೆ ಪ್ರೀತಿಯ ಅನುಭೂತಿ ತೋರಿದಂತಾಗಿದೆ. ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಬೀಸೊ ಸ್ವಚ್ಛಂದ ತಂಗಾಳಿ, ಕಿವಿಗೆ ಕೇಳಿಸೋ ಪಕ್ಷಿಗಳ ಚಿಲಿಪಿಲಿಯ ಝೇಂಕಾರ, ಕಣ್ಣಿಗೆ ಕಾಣೋ ಮಂಜಿನ ಕಣ್ಣಾಮುಚ್ಚಾಲೆ ಆಟ. ಸ್ವರ್ಗಕ್ಕೆ ಮೂರೇ ಗೇಣು ಅಂತಾ ಆಸೆ ಹುಟ್ಟಿಸುತ್ತದೆ. ಒಟ್ಟಾರೆ ಮಲೆನಾಡಿನ ನಿಸರ್ಗ ಚೆಲುವಿನ ಸೌಂದರ್ಯ ಮುಂಗಾರು ಪೂರ್ವದಲ್ಲೇ ಈ ಭಾರೀ ಅನಾವರಣವಾಗಿದೆ. ಲಾಕ್​ಡೌನ್​ನಿಂದ ಪ್ರವಾಸಿಗರು ಇಲ್ಲದೇ ಪಕ್ಷಿಗಳ ಸದ್ದು ಹೆಚ್ಚಾಗಿದೆ. ಗಿರಿಗೆ ಸಾಗುವ ರಸ್ತೆಯ ಉದ್ದಕ್ಕೂ ಎಲ್ಲೆಡೆ ಹಸಿರು.. ಹಸಿರು.. ಪ್ಲಾಸಿಕ್ ನಿಂದ ಮುಕ್ತವಾಗಿದೆ.. ಆದ್ರೂ ಲಾಕ್​ಡೌನ್ ಮುಗಿಯುವ ತನಕ ಪ್ರವಾಸಿಗರು ಇತ್ತ ಬರುವ ಸಾಹಸವನ್ನೇ ಮಾಡದೇ ಇಲ್ಲೇ ಪ್ರಕೃತಿ ಐಸಿರಿಯನ್ನು ನೋಡಿ ಆನಂದಿಸಿ.

Published On - 7:20 am, Fri, 5 June 20