ಹಾಸನ: ಈ ಹಿಂದೆ ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿಯಿಂದ ಲಕ್ಷಾಂತರ ಜನರಿಗೆ ಮೋಸ ಆಗಿತ್ತು. ಈಗ ಅದೇ ಕಂಪನಿಯ ವಂಚಕರಿಂದ ಮತ್ತೆ ಹೊಸ ಕಂಪನಿ ಹೆಸರಿನಲ್ಲಿ ಜನರಿಗೆ ಮೋಸಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಾಸನ ಎಸ್‌ಪಿಗೆ ವಂಚನೆಗೊಳಗಾಗಿದ್ದವರಿಂದ ದೂರು ದಾಖಲಾಗಿದೆ.2010 ರಲ್ಲಿ ಸ್ಥಾಪನೆಯಾದ ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿ ರಾಜ್ಯದ ಸುಮಾರು 7 ಲಕ್ಷ ಗ್ರಾಹಕರಿಗೆ 700 ಕೋಟಿ ವಂಚನೆ ಮಾಡಿತ್ತು.
ಹಾಸನ ಜಿಲ್ಲೆಯೊಂದರಲ್ಲೇ 50 ಸಾವಿರ ಜನರಿಂದ 30ಕೋಟಿಯಷ್ಟು ಹಣ ವಂಚನೆ ಮಾಡಲಾಗಿತ್ತು ಎಂಬ ಬಗ್ಗೆ ದೂರು ದಾಖಲಾಗಿದೆ. ಈಗ ಅದೇ ಕಂಪನಿ ವಂಚಕರು ಹೊಸ ಕಂಪನಿ ಹೆಸರಿನಲ್ಲಿ ಮತ್ತೆ ವಂಚನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ವಂಚಕ ಲಕ್ಷ್ಮಿ ನಾರಾಯಣ ಮತ್ತು ತಂಡದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಹಾಸನ SP ಮೊರೆ ಹೋಗಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ ಹಾಗೂ ವಂಚನೆಗೊಳಗಾದವರಿಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿ ಹೆಸರಿನಲ್ಲಿ ಮೋಸ ಮಾಡಿದ್ದ ಹಳೆ ತಂಡ ಈಗ LKN ಎಂಬ ಹೊಸ ಹೆಸರಿನಲ್ಲಿ ಹಾಸನಲ್ಲಿ ಸಭೆ ನಡೆಸಿದೆ. ಈ ಹಿಂದೆ ವಂಚನೆ ಮಾಡಿ ಹಣ ಕಬಳಿಸಿದ್ದ ಹಣವನ್ನೇ ಜನರಿಗೆ ನೀಡದೆ ಇದೀಗ ಹೊಸ ಪ್ಲಾನ್ನೊಂದಿಗೆ ಮತ್ತೆ ಮೋಸ ಮಾಡಲು ಈ ತಂಡ ಸಜ್ಜಾಗಿದೆ. ಹಾಗಾಗಿ ಮತ್ತೊಮ್ಮೆ ಈ ಕಂಪನಿಯಿಂದ ಜನರಿಗೆ ಮೋಸ ಆಗುವ ಮೊದಲು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಿದೆ.
ಇದನ್ನೂ ಓದಿ: ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: 8.41 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED