ಜೆಡಿಎಸ್​ಗೆ​ ಮುಖಂಡ ರಾಜಣ್ಣ ಕೊರವಿ ರಾಜೀನಾಮೆ

ಕಳೆದೊಂದು ವರ್ಷದಲ್ಲಿ ಹಲವು ನಾಯಕರು ಜೆಡಿಎಸ್ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂದ ಸದ್ಯ ಜೆಡಿಎಸ್ ವರಿಷ್ಠರಿಗೆ ತಲೆನೋವು ಶುರುವಾಗಿದೆ.

ಜೆಡಿಎಸ್​ಗೆ​ ಮುಖಂಡ ರಾಜಣ್ಣ ಕೊರವಿ ರಾಜೀನಾಮೆ
ಜೆಡಿಎಸ್ ನಾಯಕ ರಾಜಣ್ಣ ಕೊರವಿ

Updated on: Jan 19, 2021 | 8:19 PM

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ಗೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಕಳೆದೊಂದು ವರ್ಷದಲ್ಲಿ ಹಲವು ನಾಯಕರು ಜೆಡಿಎಸ್ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂದ ಸದ್ಯ ಜೆಡಿಎಸ್ ವರಿಷ್ಠರಿಗೆ ತಲೆನೋವು ಶುರುವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್​ನ ಮತ್ತೋರ್ವ ಹಿರಿಯ ಮುಖಂಡರು ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಬಿಜೆಪಿಗೆ ಸೇರ್ಪಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ಹುಬ್ಬಳ್ಳಿ-ಧಾರವಾಡ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜಣ್ಣ ಕೊರವಿ ರಾಜೀನಾಮೆ ಸಲ್ಲಿಸಿದ್ದಾರೆ. ನಗರ ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಜೆಡಿಎಸ್​ ಟಿಕೆಟ್​ ಮೇಲೆ ಜಗದೀಶ ಶೆಟ್ಟರ್ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಸದ್ಯ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರಾಗಿರುವ ಕೊರವಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಳ ಆಪ್ತರಾಗಿದ್ದರು‌. ಹುಬ್ಬಳ್ಳಿಯಲ್ಲಿ ಎಚ್​ಡಿಕೆಯ ಯಾವುದೇ ಕಾರ್ಯಕ್ರವಿದ್ದರು ಇವರದೇ ಉಸ್ತುವಾರಿಯಿರುತ್ತಿತ್ತು‌. ಬಸವರಾಜ ಹೊರಟ್ಟಿ ಬಿಟ್ರೆ ಇವರೇ ಎಚ್​ಡಿಕೆಗೆ ಬಹಳ ಆಪ್ತರೆನೆಸಿಕೊಂಡಿದ್ದರು.

ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​ನ ನಾಲ್ಕೈದು ಸದಸ್ಯರನ್ನು ಗೆಲ್ಲಿಸುವುದು ಸೇರಿದಂತೆ ಜೆಡಿಎಸ್​ಗೆ ಮರುಜೀವ ತುಂಬಲು ಶ್ರಮಿಸಿದ್ದರು. ಪಕ್ಷದ ತಮ್ಮ ಹುದ್ದೆಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಏಕಾಏಕಿ ರಾಜಿನಾಮೆ ಸಲ್ಲಿಸಿರುವುದು ಚರ್ಚೆಯ ವಿಷಯವಾಗಿದೆ.

ರಾಜಿನಾಮೆಗೆ ಕಾರಣವೇನು?
ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮತ್ತು ಪಕ್ಷದ ವರಿಷ್ಠರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದ ರಾಜಣ್ಣ ರಾಜೀನಾಮೆ ನೀಡಿದ್ದೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ‘ಪಕ್ಷದಲ್ಲಿ ಈಚೆಗೆ ನಡೆದ ಕೆಲ ಬೆಳವಣಿಗೆಗಳಿಂದ ಬೇಸತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.

ಜೆಡಿಎಸ್ ನಾಯಕ ದೇವೇಗೌಡರಿಗೆ ರಾಜಣ್ಣ ಕೊರವಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ರಾಜಣ್ಣ ಕೊರವಿ ಸೇವೆ ಸಲ್ಲಿಸಿದ್ದು, ಬಿಜೆಪಿಯತ್ತ ಒಲವು ತೋರಿದ್ದಾರೆ ಎನ್ನಲಾಗಿದೆ. ಜ.23ಕ್ಕೆ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.