
ಚಿಕ್ಕಬಳ್ಳಾಪುರ: ಕುಡಿಯೋಕೆ ಪತ್ನಿ ಹಣ ಕೊಡಲಿಲ್ಲ ಅಂತ ದೊಣ್ಣೆಯಿಂದ ಹೊಡೆದು, 3 ದಿನಗಳ ಹಿಂದೆ ತನ್ನ ಪತ್ನಿಯನ್ನೇ ಕೊಂದಿದ್ದ ಆ ಪಾಪಿ. ಆದ್ರೆ ಈ ಕೊಲೆಯ ಪ್ರಾಯಶ್ಚಿತಕ್ಕೋ ಅಥವಾ ಅರೆಸ್ಟ್ ಆಗುವ ಭಯಕ್ಕೋ ಗೊತ್ತಿಲ್ಲ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಕೊಂದ ಪಾಪಿ ಹೆಣವಾಗಿ ಸಿಕ್ಕಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿ ಗ್ರಾಮದಲ್ಲಿ 3 ದಿನಗಳ ಹಿಂದೆ ಆದಿನಾರಾಯಣ ಎಂಬಾತ, ಪತ್ನಿಯನ್ನ ಒನಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದ. ಅಂದು ಪೊಲೀಸರು ಮನೆಗೆ ಬರುವಷ್ಟರಲ್ಲಿ ಪರಾರಿಯಾಗಿದ್ದ ಅಸಾಮಿ, ಗ್ರಾಮದ ಹೊರಹೊಲಯದಲ್ಲಿರೋ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೆರೆಯಲ್ಲಿ ಶವ ತೇಲುತ್ತಿರೋದನ್ನ ನೋಡಿದ ಸ್ಥಳೀಯರು, ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ಮೇಲೆ ತೆಗೆದು ಸಂಬಂಧಿಕರಿಗೆ ಒಪ್ಪಿಸಿದ್ರು.
ಮದ್ಯ ಸೇವನೆಗೆ ಪತ್ನಿ ಹಣ ಕೊಡಲಿಲ್ಲ ಅಂತ, ಮೂರು ದಿನಗಳ ಹಿಂದೆ ತನ್ನ ಮಕ್ಕಳ ಸಮ್ಮುಖದಲ್ಲೇ ಪತ್ನಿಯನ್ನ ಹೊಡೆದು ಕೊಂದ ಆದಿನಾರಾಯಣನ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಹುಡುಕಾಟಕ್ಕೆ ಬಲೆ ಬೀಸಿದ್ರು. ಆದ್ರೆ ಆರೋಪಿ ಪತ್ತೆಯಾಗಿರಲಿಲ್ಲ. ಆದಿನಾರಾಯಣ ಪತ್ನಿಯನ್ನ ಕೊಂದ ದಿನವೇ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಒಟ್ನಲ್ಲಿ ಅನ್ಯಾಯವಾಗಿ ಮಕ್ಕಳ ಮುಂದೆ ತಾಯಿಯನ್ನು ಕೊಂದಿದ್ದ ಆದಿನಾರಾಯಣ, ಮಕ್ಕಳ ಮುಖವನ್ನು ನೋಡದೆ ಎಸ್ಕೇಪ್ ಆಗಿದ್ದ. ಈಗ ತಾನು ಸಾವಿನ ಮನೆ ಸೇರಿದ್ದರಿಂದ ಮಕ್ಕಳು ಅನಾಥರಾಗಿದ್ದಾರೆ.