AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಶುಲ್ಕ ಪಾವತಿಸದಿದ್ರೆ ಆನ್​ಲೈನ್ ಕ್ಲಾಸ್ ಬಂದ್ ಮಾಡ್ತೀವಿ.. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಧಮ್ಕಿ

ಮಕ್ಕಳ ಕಲಿಕೆಗೆ ತೊಂದರೆ ಆಗುತ್ತೆ ಅಂತಾ ಆನ್​ಲೈನ್ ಕ್ಲಾಸ್​ಗಳನ್ನ ಶುರು ಮಾಡಿದ್ರು. ಇದ್ರಿಂದ ಅನೇಕ ಪೋಷಕರು ಶಾಲಾ ಶುಲ್ಕ ಕಟ್ಟಿರಲಿಲ್ಲ. ಈಗ ಖಾಸಗಿ ಶಾಲೆಗಳು ಶುಲ್ಕ ಕಟ್ಟದಿದ್ರೆ ಆನ್​ಲೈನ್​ ಕ್ಲಾಸ್ ಬಂದ್ ಮಾಡ್ತೀವಿ ಅಂತಾ ಧಮಕಿ ಹಾಕ್ತಿವೆ.

ಶಾಲಾ ಶುಲ್ಕ ಪಾವತಿಸದಿದ್ರೆ ಆನ್​ಲೈನ್ ಕ್ಲಾಸ್ ಬಂದ್ ಮಾಡ್ತೀವಿ.. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಧಮ್ಕಿ
ಶಾಲಾ ಶುಲ್ಕ ಪಾವತಿಸದಿದ್ರೆ ಆನ್​ಲೈನ್ ಕ್ಲಾಸ್ ಬಂದ್ ಮಾಡ್ತೀವಿ ಅಂತಾ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೆದರಿಕೆ
ಆಯೇಷಾ ಬಾನು
| Edited By: |

Updated on:Nov 25, 2020 | 12:06 PM

Share

ವಿಶ್ವದಲ್ಲಿ ಮಹಾಮಾರಿ ಕೊರೊನಾ ಅಬ್ಬರ ಶುರುವಾಗಿದ್ದೇ ತಡ.. ಹಲವು ದೇಶಗಳಲ್ಲಿ ಲಾಕ್​ಡೌನ್ ಘೋಷಣೆಯಾಯ್ತು. ಭಾರತದಲ್ಲೂ ಡೆಡ್ಲಿ ವೈರಸ್ ಆರ್ಭಟ ಶುರುವಾಗ್ತಿದ್ದಂತೆ ಲಾಕ್​ಡೌನ್ ಘೋಷಣೆಗೂ ಮುನ್ನವೇ ಶಾಲಾ-ಕಾಲೇಜುಗಳನ್ನ ಮುಚ್ಚಿದ್ರು. ಶಾಲೆಗಳನ್ನ ಮುಚ್ಚಿ ಈಗಾಗಲೇ 8 ತಿಂಗಳು ಕಳೆದಿದೆ. ಶಾಲೆಗಳು ಓಪನ್ ಆಗಲ್ಲ ಅಂತಾ ಗೊತ್ತಾದ ಬಳಿಕ ಮಕ್ಕಳ ಕಲಿಕೆ ನಿಲ್ಲಬಾರದು ಅನ್ನೋ ಕಾರಣಕ್ಕೆ ಆನ್​ಲೈನ್ ಕ್ಲಾಸ್​ಗಳನ್ನ ಆರಂಭಿಸಿದ್ರು. ಈ ಮೂಲಕ ಮಕ್ಕಳು ಮನೆಯಲ್ಲಿದ್ರೂ ಅವರ ಶಿಕ್ಷಣ ಮುಂದುವರಿಸಲು ಅವಕಾಶ ಸಿಕ್ಕಿತ್ತು. ಇಂತಾ ಆನ್​ಲೈನ್ ಕ್ಲಾಸ್​ಗಳನ್ನೇ ನಿಲ್ಲಿಸ್ತೀವಿ ಅಂತಾ ಖಾಸಗಿ ಶಿಕ್ಷಣ ಸಂಸ್ಥೆಗಳು ಧಮ್ಕಿ ಹಾಕ್ತಿವೆ.

ನವೆಂಬರ್ 30ರ ಡೆಡ್​ಲೈನ್​ ಕೊಟ್ಟ ಖಾಸಗಿ ಶಾಲೆಗಳು! ಶಾಲೆಗಳು ಬಂದ್ ಆಗಿರೋದ್ರಿಂದ ಹಲವು ಪಾಲಕರು-ಪೋಷಕರು ಮಕ್ಕಳ ಶಾಲಾ ಶುಲ್ಕ ಕಟ್ಟಿಲ್ಲ. ಇದ್ರಿಂದ ಖಾಸಗಿ ಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಸಂಬಳ ನೀಡಲು ಆಗ್ತಿಲ್ಲ. ಕೆಲವರು ಕಳೆದ ವರ್ಷದ ಶುಲ್ಕವನ್ನೇ ಇನ್ನೂ ಕಟ್ಟಿಲ್ಲ. ಈ ವರ್ಷ ಶಾಲೆಗಳು ಓಪನ್ ಆಗದಿರೋದ್ರಿಂದ ಕೆಲವರು ಶೇಕಡ 20 ರಿಂದ 30ರಷ್ಟು ಶುಲ್ಕವನ್ನ ಮಾತ್ರ ಕಟ್ಟಿದ್ದಾರೆ. ಇದ್ರ ಜೊತೆಗೆ ಆರ್​ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದ ಮಕ್ಕಳ ಶುಲ್ಕವನ್ನ ಸರ್ಕಾರ ಭರಿಸಬೇಕಿತ್ತು. ಕಳೆದ ವರ್ಷದ ಬಾಕಿಯನ್ನ ಸರ್ಕಾರ ಉಳಿಸಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಆನ್​ಲೈನ್ ಕ್ಲಾಸ್​ಗಳನ್ನ ಬಂದ್ ಮಾಡ್ತೀವಿ ಅಂತಾ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿವೆ. ಇದ್ರ ನಡುವೆ ಸಚಿವ ಸುರೇಶ್ ಕುಮಾರ್ 1 ರಿಂದ 9ನೇ ತರಗತಿವರೆಗಿನ ಮಕ್ಕಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡ್ತೀವಿ ಅಂತಾ ಹೇಳಿದ್ದಾರೆ.

ಯಾವಾಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೀಗಂತಾ ಖಡಕ್ ಆಗಿ ಹೇಳಿದ್ರೋ.. ಅಲ್ಲಿಗೆ ಶುಲ್ಕ ಕಟ್ಟದೇ ಆನ್​ಲೈನ್ ಕ್ಲಾಸ್ ಪಡೀತಿದ್ದ ಮಕ್ಕಳ ಪೋಷಕರು, ಹೇಗಿದ್ರೂ ಮಕ್ಕಳು ಮುಂದಿನ ತರಗತಿಗೆ ತೇರ್ಗಡೆಯಾಗ್ತಾರೆ. ಯಾಕೆ ಶುಲ್ಕ ಕಟ್ಟಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದು, ಶುಲ್ಕ ಕಟ್ಟಲು ಹಿಂದೇಟು ಹಾಕ್ತಿದ್ದಾರೆ. ಸುರೇಶ್ ಕುಮಾರ್ ಹೇಳಿಕೆ, ಪೋಷಕರ ನಿರ್ಧಾರದಿಂದ ಗರಂ ಆಗಿರೋ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಆನ್​ಲೈನ್​ ಕ್ಲಾಸ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಮಾತನಾಡಿರೋ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಸಚಿವರು ತಮ್ಮ ನಿರ್ಧಾರ ವಾಪಸ್ ಪಡೆಯದಿದ್ರೆ ಆನ್​ಲೈನ್ ಕ್ಲಾಸ್ ಬಂದ್ ಮಾಡ್ತೀವಿ ಅಂತಾ ಬೆದರಿಕೆ ಹಾಕಿದ್ದಾರೆ.

ಸೇವೆಯ ಉದ್ದೇಶದೊಂದಿಗೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ ಅನ್ನೋ ಕಾರಣಕ್ಕೆ ರಾಜ್ಯದಲ್ಲಿ ಶಿಕ್ಷಣ ವಲಯದಲ್ಲಿ ಖಾಸಗಿಯವರಿಗೆ ಅವಕಾಶ ನೀಡಲಾಗಿತ್ತು. ಈಗ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕೊರೊನಾದಂತಾ ಕಠಿಣ ಸಂದರ್ಭದಲ್ಲಿ ಶುಲ್ಕ ಕಟ್ಟಲೇಬೇಕು ಅನ್ನೋ ಒತ್ತಾಯ ಮಾಡ್ತಿವೆ. ಅಲ್ದೆ, ಶುಲ್ಕ ಕಟ್ಟದೇ ಇದ್ರೆ ಆನ್​ಲೈನ್ ಕ್ಲಾಸ್ ಸ್ಥಗಿತ ಮಾಡ್ತೀವಿ ಅಂತಾ ಸರ್ಕಾರಕ್ಕೆ ಬೆದರಿಕೆ ಹಾಕ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗೆ, ಶುಲ್ಕ ಕಟ್ಟಲೇಬೇಕು ಅಂತಾ ಒತ್ತಾಯ ಮಾಡ್ತಿರೋ ಖಾಸಗಿ ಶಾಲೆಗಳ ಮುಖ್ಯಸ್ಥರೇ ಉತ್ತರ ನೀಡಬೇಕಿದೆ.

Published On - 8:18 am, Wed, 25 November 20