ಕೊಂಡಿದ್ದು ನಾಟಿ ಮೊಟ್ಟೆ.. ಬೆಳೆದದ್ದು ಬ್ರಾಯ್ಲರ್ ಕೋಳಿ! ಕ್ಷಮೆಯಾಚಿಸಿದ ಪಶು ವೈದ್ಯಕೀಯ ಪ್ರಾಧ್ಯಾಪಕ
ಒಂದು ನಾಟಿ ಮೊಟ್ಟೆ ಕಥೆ.. ಪಶುವೈದ್ಯಕೀಯ ಕಾಲೇಜಿನ ಎಡವಟ್ಟಿನಿಂದ ನಾಟಿ ಮೊಟ್ಟೆ ಬ್ರಾಯ್ಲರ್ ಕೋಳಿಯಾಗಿ ಬೆಳೆದಿದೆ. ಇದರಿಂದ ರೈತನಿಗೆ ಮೋಸವಾಗಿದ್ದು ಸಾವಿರಾರು ರೂಪಾಯಿ ಲಾಸ್ ಆಗಿದ್ದರಿಂದ ರೈತ ಕಂಗಾಲಾಗಿದ್ದಾನೆ.
ಹಾಸನ: ಪಶು ವೈದ್ಯಕೀಯ ಕಾಲೇಜಿನ ಯಡವಟ್ಟಿನಿಂದ ನಾಟಿ ಕೋಳಿ ಮರಿ ಫಾರಂ ಕೋಳಿ ಮರಿಯಾಗಿ ಬದಲಾದ ಪ್ರಸಂಗ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣದ ಧರಣೀಶ್ ಎಂಬ ರೈತ 1 ಸಾವಿರ ನಾಟಿ ಮೊಟ್ಟೆಗಳನ್ನು ಖರೀದಿಸಿದ್ದ. ಬಳಿಕ ರೈತರಿಂದ ಖರೀದಿಸಿ ತಂದ ಮೊಟ್ಟೆಯನ್ನು ಮರಿ ಮಾಡಿ ರೈತರಿಗೆ ನೀಡೊ ಕುಕ್ಕುಟೋದ್ಯಮ ವಿಭಾಗಕ್ಕೆ ಖರೀದಿಸಿದ್ದ ಮೊಟ್ಟೆಗಳನ್ನು ನೀಡಿದ್ದ. ಬಳಿಕ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ಡಾ.ರುದ್ರಪ್ಪ ಮಾರ್ಗದರ್ಶನದಲ್ಲಿ ರೈತ ಧರಣೀಶ್ ತನ್ನ ಕೋಳಿ ಮರಿ ಪಡೆದು ಸಾಕಲು ಮುಂದಾಗಿದ್ದಾನೆ. ಈ ವೇಳೆ 400 ಕೋಳಿಗಳು ಮೃತಪಟ್ಟಿವೆ.
ಉಳಿದ 600 ಕೋಳಿಗಳು ಬ್ರಾಯ್ಲರ್ ಕೋಳಿಗಳಾಗಿವೆ. ಧರಣೀಶ್ ಕೊಂಡು ಹೋಗಿದ್ದು ನಾಟಿ ಮೊಟ್ಟೆ ಆದ್ರೆ ಬೆಳೆದದ್ದು ಬ್ರಾಯ್ಲರ್ ಕೋಳಿ. ಹೀಗಾಗಿ ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ಎಡವಟ್ಟಿನಿಂದ ರೈತನಿಗೆ ನಷ್ಟವಾಗಿದೆ. ಒಂದು ಮೊಟ್ಟೆಗೆ 32 ರೂಪಾಯಿ ನೀಡಿ ಖರೀದಿಸಲಾಗಿತ್ತು. ಶೆಡ್ ನಿರ್ಮಾಣ, ಆಹಾರ ಖರೀದಿ, ನಿರ್ವಹಣೆಗೆ ಭಾರಿ ಖರ್ಚು ಆಗಿತ್ತು. ಆದರೆ ಪಶು ವೈದ್ಯಕೀಯ ಪ್ರಾಧ್ಯಾಪಕರ ಎಡವಟ್ಟಿನಿಂದ ರೈತರಿಗೆ ತೊಂದರೆಯಾಗಿದೆ. ಸಾವಿರಾರು ರೂಪಾಯಿ ಲಾಸ್ ಆಗಿದ್ದರಿಂದ ರೈತ ಕಂಗಾಲಾಗಿದ್ದಾನೆ.
ರೈತನಿಗೆ ಆದ ನಷ್ಟ ಭರಿಸುತ್ತೇವೆ: ರೈತನ ಆರೋಪಕ್ಕೆ ಸ್ಪಷ್ಟನೆ ನೀಡಿದ ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರುದ್ರಪ್ಪ, ರೈತನಿಗೆ ಆದ ನಷ್ಟ ಭರಿಸುತ್ತೇವೆ ಎಂದು ಹೇಳಿದ್ದಾರೆ. ಇದುವರೆಗೆ ಪಶು ವೈದ್ಯ ಕಾಲೇಜಿನಿಂದ 25 ರೈತರಿಗೆ ನಾಟಿ ಮೊಟ್ಟೆ ಮಾರಾಟ ಮಾಡಿದ್ರೂ ಮೋಸ ಆಗಿಲ್ಲ. ಬ್ರಾಯ್ಲರ್ ಮೊಟ್ಟೆಗಳನ್ನ ಟೀ ಡಿಕಾಕ್ಷನ್ನಲ್ಲಿ ನೆನೆಸಿದ್ದರಿಂದ ಎಡವಟ್ಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡುತ್ತೇನೆ ಎಂದಿದ್ದಾರೆ.
Published On - 9:32 am, Wed, 25 November 20