ಮೈಸೂರು: ಕೊರೊನಾ ವೈರಸ್ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಸಿಂಪಲ್ ಆಗಿ ದಸರಾ ನಡೆಯಲಿದೆ. ಜಯದೇವ ಆಸ್ಪತ್ರೆ ನಿರ್ದೇಶಕರು ಡಾ. ಸಿ.ಎನ್. ಮಂಜುನಾಥ್ 7.45 ರಿಂದ 8.15 ಕ್ಕೆ ಸಲ್ಲುವ ಶುಭ ಬ್ರಾಹ್ಮೀ ಲಗ್ನದಲ್ಲಿ ದಸರಾ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಡಾ. ಮಂಜುನಾಥ್ ಚಾಮುಂಡೇಶ್ವರಿ ದೇವಿಗೆ 3 ಬೇಡಿಕೆಗಳನ್ನು ಇಟ್ಟಿದ್ದಾರಂತೆ.
ದಸರಾ ಉದ್ಘಾಟನೆ ನಂತರ ಮಾತನಾಡಿದ ಡಾ. ಮಂಜುನಾಥ್, ನಾನು ಚಾಮುಂಡೇಶ್ವರಿ ದೇವಿಗೆ ಮೂರು ಬೇಡಿಕೆ ಇಟ್ಟಿದ್ದೇನೆ. ಇಡಿ ವಿಶ್ವಕ್ಕೆ ವ್ಯಾಪಿಸಿರುವ ಕೊರೊನಾ ಸೋಂಕು ಮುಕ್ತವಾಗಲಿ. ಕೊರೊನಾಗೆ ಲಸಿಕೆ ಸಿಗಲಿ, ಜಲಕಂಟಕದಿಂದ ಮುಕ್ತಿ ಸಿಗಲಿ ಹೀಗೆ ಚಾಮುಂಡೇಶ್ವರಿ ದೇವಿಗೆ 3 ಬೇಡಿಕೆಗಳನ್ನು ಇಟ್ಟಿದ್ದೇನೆ. ಇತ್ತೀಚೆಗೆ ವೈದ್ಯರ ವಯಸ್ಸು 10 ವರ್ಷ ಕಡಿಮೆಯಾಗುತ್ತಿದೆ. ಒತ್ತಡ, ಸದ್ಯದ ವ್ಯವಸ್ಥೆಯಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ವೈದ್ಯರ ವಯಸ್ಸು ಕಡಿಮೆಯಾಗುತ್ತಿರುವುದು ಆತಂಕಕಾರಿ. ಎಲ್ಲದಕ್ಕೂ ವೈದ್ಯರನ್ನು ದೂರುವುದು ಸರಿಯಲ್ಲ.
ವೈದ್ಯರ ಮೇಲೆ ಜನರು ಹಲ್ಲೆ ಮಾಡುವುದು ಖಂಡನೀಯ. ಹೀಗೆ ಮಾಡಿದರೆ ವೈದ್ಯರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಗ್ರಾಮೀಣಭಾಗದಲ್ಲಿ ಕೆಲಸಮಾಡುವ ವೈದ್ಯರಿಗೆ ಸುರಕ್ಷತೆ ಇಲ್ಲ. ಹೀಗಾಗಿ ಗ್ರಾಮೀಣ ಭಾಗಕ್ಕೆ ಹೋಗಲು ಹಿಂದೇಟು ಹಾಕ್ತಾರೆ. ವೈದ್ಯರು ತಮ್ಮ ಮನೆಯಲ್ಲಿ ಪೂಜೆಯನ್ನು ಮಾಡದಿದ್ದರೂ. ರೋಗಿಗಳಿಗಾಗಿ ಮನಸಿನಲ್ಲಿ ಪೂಜೆ, ಹರಕೆಯನ್ನು ಹೊತ್ತಿದ್ದಾರೆ. ಯಾರೂ ತಮ್ಮ ಹುದ್ದೆಯಿಂದ ದೊಡ್ಡವರು ಆಗುವುದಿಲ್ಲ. ಅವರು ಮಾಡುವಂತಹ ಕೆಲಸದಿಂದ ದೊಡ್ಡವರಾಗುತ್ತಾರೆ ಎಂದು ಹೇಳಿದ್ರು.
ಸಾಮಾಜಿಕ ಜಾಲತಾಣ ಸಮಾಜದ ಆರೋಗ್ಯ ಕೆಡಿಸುತ್ತಿದೆ:
ಈಗ ಕಾಲ ಬದಲಾಗಿಲ್ಲ, ಜನರೇ ಬದಲಾಗಿದ್ದಾರೆ. ಜನರ ಮಧ್ಯೆ ಸಂಪರ್ಕ ಕಡಿಮೆಯಾಗಿದೆ. ಪಕ್ಕದ ಮನೆಯಲ್ಲಿ ಯಾರು ಇರುತ್ತಾರೆಂದು ಸಹ ಗೊತ್ತಿರಲ್ಲ. ನಮ್ಮ ದೇಹವನ್ನು ಒಳ್ಳೆಯ ಕೆಲಸಗಳಿಗಾಗಿ ಬಳಸಬೇಕು. ಸಾಮಾಜಿಕ ಜಾಲತಾಣ ಸಮಾಜದ ಆರೋಗ್ಯ ಕೆಡಿಸುತ್ತಿದೆ. ಸಾಮಾಜಿಕ ಜಾಲತಾಣಗಳು ಸಮಾಜವನ್ನು ಕಟ್ಟಬೇಕು.
ಸಮಾಜಕ್ಕೆ ಒಳಿತನ್ನು ಮಾಡಬೇಕು. ಸಮಾಜದ ಸೇತುವೆಯಾಗಬೇಕು, ಗೋಡೆಯಾಗಬಾರದು. ಇದು ಜನರನ್ನು ಅಡ್ಡದಾರಿಗೆ ಎಳೆಯುವಂತೆ ಆಗಬಾರದು. ಎಂದು ಸರಳ ದಸರಾ ಆಚರಣೆ ಮಾಡಿದ್ದಕ್ಕೆ ಮಂಜುನಾಥ್ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಕನ್ನಡ ಭಾಷೆ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು:
ಇನ್ನು ದಸರಾಗೆ ಚಾಲನೆ ನೀಡಿದ ನಂತರ ಡಾ.ಸಿ.ಎನ್.ಮಂಜುನಾಥ್ ಭಾಷಣ ಮಾಡುದ್ರು. ಈ ವೇಳೆ ಅವರು ದಸರಾ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ನೀಡಿದ್ದಾರೆ. ನಮಗೆ ಅವಕಾಶ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿಎಂಗೆ ಅಭಿನಂದನೆ ಸಲ್ಲಿಸಿದ್ರು. ಇದು ನಮಗೆ ರಾಜ್ಯ ಸರ್ಕಾರ ನೀಡಿದ ಅತ್ಯಂತ ದೊಡ್ಡ ಗೌರವ. ಈ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದ ಗೌರವವಾಗಿದೆ. ಯದುವಂಶದ ಅರಸರು ಜನರ ಅರಸರಾಗಿದ್ದರು. ನಾವು ಪ್ರೀತಿಸುವ ಭಾಷೆ ಕನ್ನಡ, ಮಾತನಾಡುವುದು ಕನ್ನಡ. ಆದರೆ ಇಂಗ್ಲಿಷ್ ಬದುಕುವ ಭಾಷೆಯಾಗಿದೆ. ಕನ್ನಡ ಭಾಷೆ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು.
Published On - 9:22 am, Sat, 17 October 20