ಚೆನ್ನೈ: ಭಾರತ- ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಸರಣಿಗಾಗಿ ಚೆನ್ನೈನ ಛೆಪಾಕ್ ಕ್ರಿಕೆಟ್ ಮೈದಾನದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಶುಕ್ರವಾರದಿಂದ (ಫೆ.5) ಪ್ರಾರಂಭವಾಗುವ ಟೆಸ್ಟ್ಗಾಗಿ ಟೀಂ ಇಂಡಿಯಾದ 15 ಆಟಗಾರರನ್ನೊಳಗೊಂಡ ಸ್ಕ್ವಾಡ್ ಸಹ ರೆಡಿಯಾಗಿದೆ. ಬಿಸಿಸಿಐ ರೆಡಿ ಮಾಡಿರುವ ಈ ಪಟ್ಟಿಯಲ್ಲಿ ಆಸಿಸ್ ಸರಣಿಯಿಂದ ಹೊರಗುಳಿದಿದ್ದ ಸ್ಟಾರ್ ಆಟಗಾರರು ತಂಡಕ್ಕೆ ವಾಪಾಸ್ಸಾಗಿದ್ದಾರೆ. ಆದರೆ ವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರನ್ನು ಇಂಗ್ಲೆಂಡ್ ಸರಣಿಯ ಮೊದಲಾರ್ಧದಿಂದ ಹೊರಗಿಡಲಾಗಿದೆ.
ಬಲಿಷ್ಠ ತಂಡದೊಂದಿಗೆ ಭಾರತಕ್ಕೆ ಬಂದಿರುವ ಇಂಗ್ಲೆಂಡ್ ತಂಡ ಈಗಾಗಲೇ ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತವಾಗಿದೆ. ಕಳೆದ ಶ್ರೀಲಂಕಾ ಸರಣಿಯಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಈ ಸರಣಿಯಲ್ಲೂ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರೆಸುವ ತವಕದಲ್ಲಿದ್ದಾರೆ. ಅಲ್ಲದೆ ಜೋ ರೂಟ್, ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ಮಾಡಿರುವ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಕ್ರಿಕೆಟ್ ಪಂಡಿತರ ಹೊಗಳಿಕೆ ಜೋ ರೂಟ್ಗೆ ಆನೆಬಲ ತಂದಿದೆ.
ನಾಳೆಯಿಂದ ಆರಂಭಗೊಳ್ಳಲಿರುವ ಪಂದ್ಯದ ವಿವರಗಳು ಇಲ್ಲಿದೆ..
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಫೆ.5-9ರ ನಡುವೆ ನಡೆಯಲಿದೆ. ಮೊದಲ ಟೆಸ್ಟ್ ಭಾರತೀಯ ಕಾಲಮಾನ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಪ್ರಕ್ರಿಯೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ (star sports network) ಪ್ರಸಾರವಾಗಲಿದೆ. ಜೊತೆಗೆ ಹಾಟ್‌ಸ್ಟಾರ್ ಡಿಸ್ನಿ (Hotstar Disney) + ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲೂ ಸಹ ನೇರ ಪ್ರಸಾರ ವೀಕ್ಷಿಸಬಹುದು.
Published On - 4:11 pm, Thu, 4 February 21