ನವದೆಹಲಿ: ಶೀನಾ ಬೋರಾ ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ತನ್ನ ಮಗಳನ್ನು ಕೊಂದ ಆರೋಪದಲ್ಲಿ ಮಾಜಿ ಮಾಧ್ಯಮ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಲಾಗಿತ್ತು. ಕಳೆದ ಆರೂವರೆ ವರ್ಷಗಳಿಂದ ಶೀನಾ ಬೋರಾ ಹತ್ಯೆ (Indrani Mukerjea Murder) ಪ್ರಕರಣದಲ್ಲಿ ಜೈಲಿನಲ್ಲಿದ್ದ ಇಂದ್ರಾಣಿ ಮುಖರ್ಜಿ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ. “ನಾವು ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆ ವರ್ಷಗಳು ತುಂಬಾ ದೀರ್ಘ ಸಮಯವಾಗಿದ್ದು, ಇಷ್ಟು ವರ್ಷ ಜೈಲು ಶಿಕ್ಷೆ ಅನುಭವಿಸಿದ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.
ಇಂದ್ರಾಣಿ ಮುಖರ್ಜಿ 2012ರಲ್ಲಿ 25 ವರ್ಷದ ಶೀನಾ ಬೋರಾ ಅವರ ಕೊಲೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರು. 2012ರಲ್ಲಿ ನಡೆದ 25 ವರ್ಷದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಆಕೆಯ ತಾಯಿ ಇಂದ್ರಾಣಿ ಮುಖರ್ಜಿ 2015ರಿಂದ ಮುಂಬೈನ ಬೈಕುಲ್ಲಾ ಜೈಲಿನಲ್ಲಿದ್ದರು. ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಲಾಗಿತ್ತು. ಇಂದ್ರಾಣಿ ಮುಖರ್ಜಿ ತನ್ನ ಪತಿ ಪೀಟರ್ ಮುಖರ್ಜಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಪೀಟರ್ಗೆ ಜಾಮೀನು ಸಿಕ್ಕಿತ್ತು. ಜೈಲಿನಲ್ಲಿದ್ದಾಗಲೇ ಇಂದ್ರಾಣಿ ತನ್ನ ಗಂಡ ಪೀಟರ್ಗೆ ಡೈವೋರ್ಸ್ ನೀಡಿದ್ದರು.
ಇದನ್ನೂ ಓದಿ: Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿಯ ಮನೆ ಕಾರು ಚಾಲಕ ಶ್ಯಾಮ್ವರ್ ರೈ ಮತ್ತು ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಅವರ ಸಹಾಯದಿಂದ ಮೊದಲ ಮದುವೆಯ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಇಂದ್ರಾಣಿಯನ್ನು 2015ರಲ್ಲಿ ಬಂಧಿಸಲಾಗಿತ್ತು. ಮೊದಲ ಗಂಡನಿಂದ ಜನಿಸಿದ ಶೀನಾ ಬೋರಾ ತನ್ನ ಪತಿ ಪೀಟರ್ ಮುಖರ್ಜಿಯ ಮಗ ರಾಹುಲ್ ಮುಖರ್ಜಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದರಿಂದ ಇಂದ್ರಾಣಿ ಕೋಪಗೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇಂದು ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ವಿಶೇಷ ಸಿಬಿಐ ನ್ಯಾಯಾಲಯದಿಂದ ಹಲವು ಬಾರಿ ಜಾಮೀನು ನಿರಾಕರಿಸಲಾಗಿತ್ತು. ಆದರೆ, ಇಂದ್ರಾಣಿ ಜೈಲಿನಲ್ಲಿ ಈಗಾಗಲೇ ಬಹಳ ಕಾಲ ಕಳೆದಿರುವುದರಿಂದ ಜಾಮೀನು ಪಡೆಯಲು ಆಕೆ ಅರ್ಹಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಥ್ರಿಲ್ಲರ್ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !
ಮೂರು ತಿಂಗಳಿಂದ ಶೀನಾ ಬೋರಾ ನಾಪತ್ತೆಯಾಗಿದ್ದಳು. ಇಂದ್ರಾಣಿ ಎಲ್ಲರ ಬಳಿಯೂ ಶೀನಾಳನ್ನು ತನ್ನ ತಂಗಿ ಎಂದು ಹೇಳಿಕೊಂಡಿದ್ದಳು. ಆಕೆ ಇಂದ್ರಾಣಿಯ ಮಗಳೆಂಬುದು ಯಾರಿಗೂ ಗೊತ್ತಿರಲಿಲ್ಲ. ಆಕೆ ನಾಪತ್ತೆಯಾದ ಬಳಿಕ ಇಂದ್ರಾಣಿ ಮುಖರ್ಜಿ ಅವರ ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಶೀನಾಳ ಅರ್ಧ ಸುಟ್ಟ ದೇಹವನ್ನು ಮುಂಬೈ ಸಮೀಪದ ಅರಣ್ಯದಿಂದ ಹೊರಗೆ ತೆಗೆಯಲಾಗಿತ್ತು. ಶೀನಾ ಬೋರಾಳನ್ನು ಆಕೆಯ ತಾಯಿ ಕಾರಿನೊಳಗೆ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಚಾಲಕ ಆರೋಪಿಸಿದ್ದ.
2017ರಲ್ಲಿ ಆರಂಭವಾದ ವಿಚಾರಣೆಯಲ್ಲಿ ಸುಮಾರು 60 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು, ಜೈಲಿನಲ್ಲಿದ್ದಾಗ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ತಮ್ಮ 17 ವರ್ಷಗಳ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದರು. ಅವರಿಬ್ಬರೂ 2019ರಲ್ಲಿ ವಿಚ್ಛೇದನವನ್ನು ಪಡೆದರು.
ಈ ವರ್ಷದ ಆರಂಭದಲ್ಲಿ ಇಂದ್ರಾಣಿ ಮುಖರ್ಜಿ ಅವರು ಶೀನಾ ಬೋರಾ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದರು. ಆದರೆ, ಅದು ಅಸಾಧ್ಯ ಎಂದು ಸಿಬಿಐ ಆಕೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Wed, 18 May 22