ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿರುವ ಬೆನ್ನಲ್ಲೇ ಮೂಢನಂಬಿಕೆಗಳು ಕಡಿಮೆ ಆಗುತ್ತಿವೆ. ಇನ್ನು, ನಾಲ್ಕು ಗೋಡೆಗಳಿಗಷ್ಟೇ ಮಹಿಳೆಯರು ಸೀಮಿತ ಎನ್ನುವ ಸ್ಥಿತಿ ಈಗ ಬದಲಾಗಿದ್ದು, ಅವರು ಕೂಡ ಪುರುಷರಂತೆ ಮನೆಯಿಂದ ಹೊರ ಹೋಗಿ ಉದ್ಯೋಗ ಮಾಡುತ್ತಿದ್ದಾರೆ. ಪುರುಷರಿಗೆ ಸಮನಾಗಿ ನಿಂತುಕೊಂಡಿದ್ದಾರೆ. ಆದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳು ಮಾತ್ರ ಹೆಚ್ಚುತ್ತಲೇ ಇವೆ. ಹೀಗಾಗಿ ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ.
ಮಹಿಳೆಯ ರಕ್ಷಣೆಗೆ ಈಗಾಗಲೇ ಸಾಕಷ್ಟು ಆ್ಯಪ್ಗಳು ಅನ್ವೇಷಣೆಗೊಂಡಿವೆ. ಏನಾದರೂ ತೊಂದರೆ ಎದುರಾದಾಗ ಕೇವಲ ಆ್ಯಪ್ ಬಳಕೆ ಮಾಡಿಕೊಂಡು ನಿಮ್ಮ ಸಂಬಂಧಿಕರಿಗೆ ಅಥವಾ ಪೊಲೀಸರಿಗೆ ಸಂದೇಶ ರವಾನೆ ಮಾಡಬಹುದು. ಅಂತಹ ಆ್ಯಪ್ಗಳ ಪಟ್ಟಿ ಇಲ್ಲಿದೆ.
ರಕ್ಷಾ:
ಹೆಸರೇ ಹೇಳುವಂತೆ ಇದು ಮಹಿಳೆಯರಿಗೆ ರಕ್ಷಣೆ ನೀಡುವ ಆ್ಯಪ್. ನೀವು ತೊಂದರೆಗೆ ಸಿಲುಕಿದ್ದಾಗ ಈ ಆ್ಯಪ್ ನಿಮ್ಮ ಆಪ್ತರಿಗೆ ಲೊಕೇಷನ್ ಕಳುಹಿಸೋಕೆ ಸಹಕಾರಿ. ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ Raksha ಎಂದು ಸರ್ಚ್ ಮಾಡಿ ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ. ಈ ಆ್ಯಪ್ನಲ್ಲಿ ನಿಮ್ಮ ಆಪ್ತರು ಮತ್ತು ನೀವು ಕರೆದಾಗ ಸಹಾಯಕ್ಕೆ ಬರುತ್ತಾರೆ ಎನ್ನುವ ನಂಬಿಕೆ ಇದ್ದವರ ಕಾಂಟ್ಯಾಕ್ಟ್ ನಂಬರ್ ಅನ್ನು ಈ ಆ್ಯಪ್ಗೆ ಸೇರಿಸಿ. ಈ ಆ್ಯಪ್ನಲ್ಲಿ ಸೇವ್ ಮಾಡಿದ ನಂಬರ್ನವರಿಗೆ ಸರಿಯಾಗಿ ಮೊಬೈಲ್ ಬಳಕೆ ಮಾಡಲು ಬರುವುದಿಲ್ಲ ಎಂದಾದರೆ, ತುರ್ತು ಸಂದರ್ಭದಲ್ಲಿ ಅವರಿಗೆ ಲೊಕೇಷನ್ ಹೋದರೂ, ಅದನ್ನು ನೋಡಲು ಅವರಿಂದ ಸಾಧ್ಯವಾಗುವುದಿಲ್ಲ. ಹೀಗಾದರೆ, ಈ ಆ್ಯಪ್ನ ಉದ್ದೇಶ ವ್ಯರ್ಥವಾಗುತ್ತದೆ.
ನೀವು ಯಾವುದೋ ತುರ್ತು ಸಂದರ್ಭದಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ಅಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸ್ವಿಚ್ಛ್ ಆಫ್ ಆಗಿ ಬಿಡುತ್ತದೆ. ಆದಾಗ್ಯೂ ನಿಮ್ಮ ಆಪ್ತರಕ್ಷಕರಿಗೆ ನೀವುರುವ ಲೊಕೇಷನ್ ಸೆಂಡ್ ಮಾಡುವ ಆಯ್ಕೆ ಇದೆ. ಒಂದೊಮ್ಮೆ ನಿಮ್ಮ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದರೂ, ವಾಲ್ಯೂಮ್ ಕೀ ಅನ್ನು ಮೂರು ಸೆಕೆಂಡ್ಗಳ ಕಾಲ ಒತ್ತಿ ಹಿಡಿದರೆ ಸಾಕು. ನಿಮ್ಮ ಆಪ್ತರಿಗೆ ಮೆಸೇಜ್ ಸೆಂಡ್ ಆಗಲಿದೆ. ಈ ಆ್ಯಪ್ನಲ್ಲಿ SOS ವ್ಯವಸ್ಥೆ ಕೂಡ ಇದೆ. ತುರ್ತು ಸಂದರ್ಭದಲ್ಲಿ ರಕ್ಷಾ ಆ್ಯಪ್ ಮೂಲಕ ಸಂದೇಶ ರವಾನೆ ಮಾಡಬಹುದು.
ವುಮನ್ ಸೇಫ್ಟಿ ಆ್ಯಪ್
Women Safety ಆ್ಯಪ್ ಇದು ರಕ್ಷಾ ಆ್ಯಪ್ ಮಾದರಿಯಲ್ಲೇ ಕೆಲಸ ಮಾಡುತ್ತದೆ. ಈ ಆ್ಯಪ್ನಲ್ಲಿ ನಿಮ್ಮ ಆಪ್ತರ ನಂಬರ್ಅನ್ನು ಸೇವ್ ಮಾಡಬೆಕು. ಸಂಕಷ್ಟದ ಸಮಯದಲ್ಲಿ ಈ ಆ್ಯಪ್ ಓಪನ್ ಮಾಡಿ ಅಲ್ಲಿರುವ ಬಟನ್ ಪ್ರೆಸ್ ಮಾಡಬೇಕು. ಇದರಿಂದ ನೀವು ಸೇವ್ ಮಾಡಿರುವ ಸಂಖ್ಯೆಗೆ ಲೊಕೇಷನ್ ಸಹಿತ ತುರ್ತು ಸಂದೇಶ ರವಾನೆ ಆಗುತ್ತದೆ. ಅಷ್ಟೇ ಅಲ್ಲ, ಸ್ವಯಂಚಾಲಿತವಾಗಿ ಫ್ರಂಟ್ ಕ್ಯಾಮೆರಾ ಓಪನ್ ಆಗಿ ಎರಡು ಫೋಟೋಗಳು ಕೂಡ ಸೆಂಡ್ ಆಗಲಿವೆ.
ಸ್ಮಾರ್ಟ್ 24×7
Smart24x7 ವಾರದ 24 ಗಂಟೆ ಕೆಲಸ ಮಾಡುವ ಆ್ಯಪ್. ಈ ಆ್ಯಪ್ಗೆ ಸಾಕಷ್ಟು ರಾಜ್ಯಗಳ ಪೊಲೀಸ್ ಇಲಾಖೆ ಬೆಂಬಲ ಸೂಚಿಸಿದೆ. ಈ ಆ್ಯಪ್ನಲ್ಲಿ ಒಂದು ಎಮರ್ಜೆನ್ಸಿ ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ನೀವು ಸೇವ್ ಮಾಡಿಟ್ಟವರಿಗೆ ಲೊಕೇಷನ್ ಸೆಂಡ್ ಆಗಲಿದೆ. ಅಷ್ಟೇ ಅಲ್ಲ, ನೀವು ವಾಯ್ಸ್ ನೋಟ್ ಹಾಗೂ ಫೋಟೋಗಳನ್ನು ಕೂಡ ಕಳುಹಿಸಬಹುದು. ಇದು ಪೊಲೀಸ್ ಠಾಣೆಗೂ ವರ್ಗಾವಣೆ ಆಗುತ್ತದೆ.
ಇದನ್ನೂ ಓದಿ: Women’s Day 2021: ಟೈಂ ಟೇಬಲ್ ಸುನೀತಾ; ಯಾವ ರೈಲು ಎಷ್ಟೊತ್ತಿಗೆ ಎಲ್ಲಿಗೆ ಬರಬೇಕು ನಿರ್ಧರಿಸೋದು ಇವರು..
Published On - 3:34 pm, Mon, 8 March 21