ಇದೇ ತಿಂಗಳು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 1097 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ವೆಸ್ಟ್ ಇಂಡೀಸ್ನಿಂದ ಅತಿ ಹೆಚ್ಚು ಅಂದರೆ 56 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (42) ಮತ್ತು ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (38) ಇದೆ.
ನೋಂದಣಿಗೆ ಫೆ.4 ಕೊನೆಯ ದಿನಾಂಕವಾಗಿತ್ತು. ಹೆಸರು ದಾಖಲಿಸಿದವರ ಪೈಕಿ 207 ಅಂತಾರಾಷ್ಟ್ರೀಯ ಆಟಗಾರರು ಹಾಗೂ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡ 21 ಆಟಗಾರರು ಇದ್ದಾರೆ. ಉಳಿದಂತೆ, ರಾಷ್ಟ್ರೀಯ ತಂಡದಲ್ಲಿ ಆಡದೆ ಇರುವ 863 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಭಾರತೀಯರು 743 ಹಾಗೂ ವಿದೇಶದ 68 ಆಟಗಾರರು ಇದ್ದಾರೆ.
ಕಿಂಗ್ಸ್ ಇಲವೆನ್ ಪಂಜಾಬ್ ಬಳಿ ಅತಿ ಹೆಚ್ಚು ಅಂದರೆ, 53.20 ಕೋಟಿ ರೂಪಾಯಿ ಉಳಿದುಕೊಂಡಿದೆ. ನಂತರದಲ್ಲಿ ಆರ್ಸಿಬಿ (35.90 ಕೋಟಿ ರೂಪಾಯಿ), ರಾಜಸ್ಥಾನ್ ರಾಯಲ್ಸ್ (34.85 ಕೋಟಿ ರೂಪಾಯಿ), ಚೆನ್ನೈ ಸೂಪರ್ ಕಿಂಗ್ಸ್ (22.9 ಕೋಟಿ ರೂಪಾಯಿ) ಮುಂಬೈ ಇಂಡಿಯನ್ಸ್ (15.35 ಕೋಟಿ ರೂಪಾಯಿ), ಡೆಲ್ಲಿ ಕ್ಯಾಪಿಟಲ್ಸ್ (12.9 ಕೋಟಿ ರೂಪಾಯಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಬಳಿ ತಲಾ 10.75 ಕೋಟಿ ರೂಪಾಯಿ ಇದೆ.
ಕೊರೊನಾದಿಂದ ಕಳೆದ ಬಾರಿಯ ಐಪಿಎಲ್ ದುಬೈನಲ್ಲಿ ನಡೆದಿತ್ತು. ಈ ಬಾರಿ ಭಾರತದಲ್ಲಿಯೇ ಐಪಿಎಲ್ ನಡೆಯುವ ಸಾಧ್ಯತೆ ಇದೆ. ಚೆನ್ನೈನಲ್ಲಿ ಫೆಬ್ರವರಿ 18ರಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.