ISRO Opportunities: ಇಸ್ರೋದಲ್ಲಿ ವಿದ್ಯಾರ್ಥಿಗಳಿಗೆ ಆಕಾಶದೆತ್ತರಕ್ಕೂ ಇದೆ ಅವಕಾಶಗಳು, ಬಳಸಿಕೊಳ್ಳುವುದು ಹೇಗೆ?

ವಿಶ್ವಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿರುವ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ. ಈ ಅತ್ಯುತ್ತಮ ಬಾಹ್ಯಾಕಾಶ ಸಂಸ್ಥೆಯನ್ನು ಸೇರಿ ಸೇವೆ ಸಲ್ಲಿಸಬೇಕೆಂಬ ಕನಸು ಕಾಣುತ್ತಿರುವ ಕೋಟ್ಯಂತರ ವಿದ್ಯಾರ್ಥಿಗಳಿದ್ದಾರೆ. ಆದರೆ ಆ ಕನಸು ನನಸಾಗುವುದು ಸುಲಭವಲ್ಲ, ಹಾಗೆಂದು ಅಸಾಧ್ಯವೂ ಅಲ್ಲ. ಇಸ್ರೋ ಸ್ವತಃ ಪ್ರತಿಭಾವಂತರನ್ನು ಗುರುತಿಸುವ, ಪ್ರತಿಭಾವಂತರನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ISRO Opportunities: ಇಸ್ರೋದಲ್ಲಿ ವಿದ್ಯಾರ್ಥಿಗಳಿಗೆ ಆಕಾಶದೆತ್ತರಕ್ಕೂ ಇದೆ ಅವಕಾಶಗಳು, ಬಳಸಿಕೊಳ್ಳುವುದು ಹೇಗೆ?
Follow us
ಮಂಜುನಾಥ ಸಿ.
|

Updated on:May 02, 2024 | 2:05 PM

ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಭಾರತವನ್ನು ವಿಶ್ವದ ಶಕ್ತಿಯುತ ರಾಷ್ಟ್ರಗಳಲ್ಲಿ ಒಂದಾಗುವಂತೆ ಮಾಡುವಲ್ಲಿ ಇಸ್ರೋದ ಕಾಣಿಕೆ ದೊಡ್ಡದು. ರಾಷ್ಟ್ರವೊಂದರ ಸಾಮರ್ಥ್ಯವನ್ನು ಅದರ ಬಾಹ್ಯಾಕಾಶ ಸಂಶೋಧನೆಗಳು, ಬಾಹ್ಯಾಕಾಶ ಸಾಧನೆಗಳ ಮೂಲಕ ಅಳೆಯಲಾಗುತ್ತಿರುವ ಈ ಕಾಲಘಟ್ಟದಲ್ಲಿ ಇಸ್ರೋ ಭಾರತಕ್ಕೆ ಸತತ ಕೀರ್ತಿಯನ್ನು ತರುತ್ತಲೇ ಇದೆ. ಇಂಥಹಾ ಅತ್ಯುನ್ನತ ಸಂಸ್ಥೆಯ ಭಾಗವಾಗುವುದು ಭಾರತದ ಕೋಟ್ಯಂತರ ಯುವಕರ, ವಿದ್ಯಾರ್ಥಿಗಳ ಕನಸು. ಆದರೆ ಆ ಕನಸು ನನಸಾಗುವುದು ಸುಲಭವಲ್ಲ, ಹಾಗೆಂದು ಅಸಾಧ್ಯವೂ ಅಲ್ಲ. ಸ್ವತಃ ಇಸ್ರೋ ಪ್ರತಿಭಾವಂತರನ್ನು ಹೆಕ್ಕಿಕೊಳ್ಳುವ ಜೊತೆಗೆ ಪ್ರತಿಭಾವಂತರನ್ನು ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಲೇ ಬಂದಿದೆ. ಭವಿಷ್ಯದ ವಿಜ್ಞಾನಿಗಳನ್ನು ತಯಾರಿಸಲು ಇಸ್ರೋ ಹಲವು ಕಾರ್ಯಕ್ರಮಗಳನ್ನು ಕಾಲ-ಕಾಲಕ್ಕೆ ನಡೆಸುತ್ತದೆ. ಇಲ್ಲಿದೆ ಅದರ ಮಾಹಿತಿ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಹಾಗೂ ಯುವ ವಿಜ್ಞಾನಿಗಳನ್ನು ತಯಾರಿಸುವ ನಿಟ್ಟಿನಲ್ಲಿ ‘ಯುವಿಕಾ’ (YUVIKA) ಎಂಬ ಕಾರ್ಯಕ್ರಮವನ್ನು ಇಸ್ರೋ ಪ್ರಾರಂಭ ಮಾಡಿ ನಡೆಸಿಕೊಂಡು ಬರುತ್ತಿದೆ. ದೇಶದ 28 ರಾಜ್ಯ, ಎಂಟು ಕೇಂದ್ರಾಡಳಿತ ಪ್ರದೇಶಗಳ ಅರ್ಹ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಒಂದು ತಿಂಗಳ ಕಾಲ. ಇಸ್ರೋನ ಪ್ರಮುಖ ವಿಜ್ಞಾನಿಗಳು ವಿವಿಧ ವಿಭಾಗಗಳ ಬಗ್ಗೆ ಉಪನ್ಯಾಸ, ತರಬೇತಿ, ವಿಷಯ ಪ್ರಾತ್ಯಕ್ಷತೆಗಳನ್ನು ನೀಡುತ್ತಾರೆ. ಯುವಿಕಾ ಕಾರ್ಯಕ್ರಮಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿಗಳು ಮಾತ್ರವೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಇಸ್ರೋ ನಡೆಸುವ ಪರೀಕ್ಷೆ ಎದುರಿಸಿ ಉತ್ತೀರ್ಣಗೊಂಡ ನಂತರ ನಡೆವ ಸಂದರ್ಶನದಲ್ಲಿ ಪಾಸ್ ಆದವರಷ್ಟೆ ಈ ಒಂದು ತಿಂಗಳ ಕಾರ್ಯಕ್ರಮಕ್ಕೆ ಪ್ರವೇಶ ಗಿಟ್ಟಿಸುತ್ತಾರೆ. 2024ನೇ ಸಾಲಿನ ಯುವಿಕಾ ಕಾರ್ಯಕ್ರಮಕ್ಕೆ 353 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ. ಇದರಲ್ಲಿ ಕರ್ನಾಟಕದ 11 ವಿದ್ಯಾರ್ಥಿಗಳು ಆಯ್ಕೆ ಆಗಿದ್ದರು.

ಇದರ ಹೊರತಾಗಿ ಜೆಇಇ ಅಡ್ವಾನ್ಸ್ ಕ್ಲಿಯರ್ ಮಾಡಿದ ವಿದ್ಯಾರ್ಥಿಗಳಿಗೆ ಜೂನಿಯರ್ ರಿಸರ್ಚ್ ಫೆಲೋಶಿಪ್ ನೀಡಿ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ. ಜೆಇಇ ಅಡ್ವಾನ್ಸ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿದ ಪ್ರತಿಭಾವಂತರಿಗೆ ಇಸ್ರೋ ಶೈಕ್ಷಣಿಕ-ಆರ್ಥಿಕ ಸಹಾಯ ಮಾಡುತ್ತದೆ. ಅವರ ಭವಿಷ್ಯ ರೂಪಿಸುವ ಕಾರ್ಯಕ್ರಮವನ್ನು ಮಾಡುತ್ತದೆ. ಭೌತಶಾಸ್ತ್ರ, ಗಣಿತ, ಕಂಪ್ಯೂಟರ್ ತಂತ್ರಜ್ಞಾನ ಕಲಿತ, ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಸ್ರೋನಲ್ಲಿ ಪ್ರಥಮ ಆದ್ಯತೆ. ಇಸ್ರೋನಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಬೇಕೆಂದರೆ ಭೌತಶಾಸ್ತ್ರ ಹಾಗೂ ಗಣಿತ ವಿಷಯಗಳ ಕಲಿಕೆ, ಜ್ಞಾನ ಕಡ್ಡಾಯ. ವಿಜ್ಞಾನ ವಿಷಯಗಳಲ್ಲಿ ಪರಿಣಿತಿ ಹೊಂದಿದವರು, ಏರೋ ಡೈನಮಿಕ್ಸ್ ಇನ್ನಿತರೆ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರ್​ಗಳು ಇಸ್ರೋನಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸಬಹುದು.

ಬಾಹ್ಯಾಕಾಶ ವಿಜ್ಞಾನ ಕಲಿಸುವ ಕೆಲವು ಅತ್ಯುತ್ತಮ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಭಾರತದಲ್ಲಿವೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸ್ಪೇಸ್ ಆಂಡ್ ಸೈನ್ಸ್ ಟೆಕ್ನಾಲಜಿ (IIST), ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS), ಆರ್ಯಭಟ ರಿಸರ್ಚ್ ಇನ್​ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್ (ARIES), ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್, ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (IISc), ಇಂಟರ್ ಯೂನಿವರ್ಸಟಿ ಸೆಂಟರ್ ಆಫ್ ಆಸ್ಟ್ರೋನಮಿ ಆಂಡ್ ಆಸ್ಟ್ರೋ ಫಿಸಿಕ್ಸ್ (IUCA), ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರಾನಮಿ, ಅಹಮದಾಬಾದ್​ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ, ಬೆಂಗಳೂರಿನ ರಾಮನ್ ರಿಸರ್ಚ್ ಇನ್​ಸ್ಟಿಟ್ಯೂಟ್ ಇವು ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಇನ್ನೂ ಕೆಲವು ಸಂಸ್ಥೆಗಳು ಬಾಹ್ಯಾಕಾಶದ ವಿವಿಧ ವಿಭಾಗಗಳ ಬಗ್ಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬಾಹ್ಯಾಕಾಶ ವಿಜ್ಞಾನ ಕಲಿಕೆಯಿಂದ ಹಲವು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ.

ಕೇವಲ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮಾಡಿದವರಿಗೆ ಮಾತ್ರವೇ ಅಲ್ಲದೆ. ಐಟಿಐ, ಡಿಪ್ಲಮೊ ವಿದ್ಯಾರ್ಥಿಗಳಿಗೆ ತಂತ್ರಜ್ಞರಾಗಿ ಸೇವೆ ಸಲ್ಲಿಸುವ ಅವಕಾಶ ಇಸ್ರೋನಲ್ಲಿದೆ. ಐಟಿಐ, ಡಿಪ್ಲಮೊಗಳಲ್ಲಿ ಶೈಕ್ಷಣಿಕವಾಗಿ ಹಾಗೂ ಪ್ರಾಯೋಗಿಕವಾಗಿ ಉತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಪ್ರತಿಭಾವಂತರನ್ನು ಆಯ್ಕೆ ಮಾಡಿ ಇಸ್ರೋನಲ್ಲಿ ತಂತ್ರಜ್ಞರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ವಿಜ್ಞಾನಿಗಳಷ್ಟೆ ಮಹತ್ವದ ಕಾರ್ಯವನ್ನು ತಂತ್ರಜ್ಞರು ನಿರ್ವಹಣೆ ಮಾಡುತ್ತಾರೆ. ಇಸ್ರೋನ ರಾಕೆಟ್ ಉಡಾವಣೆ ಸೇರಿದಂತೆ ವಿವಿಧ ವೈಜ್ಞಾನಿಕ ಯೋಜನೆಗಳಿಗೆ ಗ್ರೌಂಡ್ ಹಂತದಲ್ಲಿ ಕೆಲಸ ಮಾಡಿ ಅದನ್ನು ಯಶಸ್ವಿಯಾಗುವಂತೆ ಮಾಡುವವರು ಇದೇ ತಂತ್ರಜ್ಞರು.

ಇಸ್ರೋನ ಹಲವು ವಿಭಾಗಗಳಲ್ಲಿ ವಿಜ್ಞಾನಿಗಳು, ಎಂಜಿನಿಯರ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿಯೂ ಕಾರ್ಯನಿರ್ವಹಲು ಆರಂಭಿಸಿರುವ ಇಸ್ರೋಗೆ ಹೆಚ್ಚಿನ ವಿಜ್ಞಾನಿಗಳು, ತಂತ್ರಜ್ಞರು, ಎಂಜಿನಿಯರ್​ಗಳ ಅಗತ್ಯತೆ ಇದೆ. ಖಾಸಗಿಯವರ, ವಿದೇಶಗಳ ಸ್ಯಾಟಲೈಟ್​ಗಳನ್ನು ಸಹ ಇಸ್ರೋ ಲಾಂಚ್ ಮಾಡಿಕೊಡುತ್ತಿದೆ ಹಾಗಾಗಿ ಹಿಂದೆಂದಿಗಿಂತಲೂ ಮಾನವ ಸಂಪನ್ಮೂಲದ ಅವಶ್ಯಕತೆ ಹೆಚ್ಚಿಗಿದೆ ಎನ್ನುತ್ತಾರೆ ಇಸ್ರೋದ ಸಾರ್ವಜನಿಕ ಸಂಪರ್ಕ ಮುಖ್ಯಾಧಿಕಾರಿ ಡಾ ಮಹೇಶ್ ಕುಮಾರ್ ಎಸ್.

ಇಸ್ರೋನ ‘ಸ್ಟೂಡೆಂಟ್ ಸ್ಯಾಟಲೈಟ್’ (ವಿದ್ಯಾರ್ಥಿ ಸ್ಯಾಟಲೈಟ್) ಕಾರ್ಯಕ್ರಮ ಬಹಳ ಅಪರೂಪದ್ದು, ಮತ್ತು ದೂರದೃಷ್ಟಿಯದ್ದು. ದೇಶದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿಜ್ಞಾನ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಗುರುಗಳು ಹಾಗೂ ಇಸ್ರೋದ ಮಾರ್ಗದರ್ಶನದಲ್ಲಿ ಸ್ಯಾಟಲೈಟ್​ಗಳನ್ನು ನಿರ್ಮಿಸುತ್ತಾರೆ ಆ ಸ್ಯಾಟಲೈಟ್ ನಿರ್ಮಾಣ ಮಾಡುತ್ತಾರೆ. ವಿದ್ಯಾರ್ಥಿಗಳಿಂದ ನಿರ್ಮಾಣವಾದ ಆ ಸ್ಯಾಟಲೈಟ್​ಗಳನ್ನು ಇಸ್ರೋ ಉಡಾವಣೆ ಮಾಡಿಕೊಡುತ್ತದೆ. ಈ ಕಾರ್ಯಕ್ರಮಕ್ಕೆ ಭಾರಿ ಯಶಸ್ಸು ಲಭಿಸಿದೆ. ಇಸ್ರೋ, ಉನ್ನತಿ (UNNATI) ಹೆಸರಿನ ತರಬೇತಿ ಕಾರ್ಯಕ್ರಮವನ್ನೂ ಸಹ ನಡೆಸುತ್ತಿದೆ. ಎರಡು ತಿಂಗಳು ನಡೆವ ಈ ತರಬೇತಿ ಕಾರ್ಯಾಗಾರದಲ್ಲಿ ನ್ಯಾನೋ ಸ್ಯಾಟಲೈಟ್​ಗಳ ನಿರ್ಮಾಣ ಹಾಗೂ ಜೋಡಿಸುವಿಕೆ ಕುರಿತು ತರಬೇತಿ ನೀಡುತ್ತದೆ. 2018ರಿಂದ ಇಸ್ರೋ ಈ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಂಡು ಬರುತ್ತಿದೆ. ಎರಡು ತಿಂಗಳು ನಡೆವ ಈ ಕಾರ್ಯಾಗಾರದಲ್ಲಿ ಭಾರತದ ವಿದ್ಯಾರ್ಥಿಗಳ ಜೊತೆಗೆ 33 ದೇಶಗಳ 60 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ವಿಜ್ಞಾನಿಗಳ, ಎಂಜಿನಿಯರ್​ಗಳ ನೇಮಕಕ್ಕೆ ಇಸ್ರೋ ಪ್ರತ್ಯೇಕ ಮಂಡಳಿಯನ್ನೇ ಹೊಂದಿದೆ. ಇಸ್ರೋದ ಕೇಂದ್ರೀಕೃತ ನೇಮಕಾತಿ ಮಂಡಳಿ (ISRO Centralized Recruitment Board ) ನೇಮಕಾತಿಗಳನ್ನು ನಡೆಸುತ್ತದೆ. ಪ್ರತಿ ವರ್ಷವೂ ಇಸ್ರೋ ಪರೀಕ್ಷೆಗಳನ್ನು ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಸೂಕ್ತ ತಯಾರಿಗಳೊಂದಿಗೆ ವಾರ್ಷಿಕವಾಗಿ ನಡೆಯುವ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಇಸ್ರೋದಲ್ಲಿ ಮಾತ್ರವಲ್ಲದೆ ಇಡೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಅಭ್ಯರ್ಥಿಗಳು ಸಜ್ಜುಗೊಳ್ಳುತ್ತಾರೆ. ಈ ಪರೀಕ್ಷೆಯು ಅಭ್ಯರ್ಥಿಯ ಗಣಿತ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನವನ್ನು ಮೌಲ್ಯಮಾಪನ ಮಾಡುತ್ತದೆ. ಪ್ರತಿ ವರ್ಷ ಈ ಪರೀಕ್ಷೆ ನಡೆಯಲಿದ್ದು, ಪ್ರತಿ ವರ್ಷ ಹಲವು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ.

ಇಸ್ರೋ ಸ್ಟಾರ್ಟ್​ ಅಪ್ ಸಂಸ್ಕೃತಿಗೂ ಸಹಾಯ ಮಾಡುತ್ತಿದ್ದು, ಸ್ಟಾರ್ಟ್​ ಅಪ್​ಗಳೊಟ್ಟಿಗೆ ಸಹಯೋಗ, ಸಹಕಾರ ನೀಡುತ್ತಿದೆ. ಸ್ಟಾರ್ಟ್​ ಅಪ್​ಗಳನ್ನು ಹೊಸ ಯುಗದ ಉದ್ಯಮ ಪಾಲುದಾರರ ರೀತಿ ನೋಡುವುದಾಗಿ ಇಸ್ರೋ ಹೇಳಿದ್ದು, ಜನ, ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೊಸ ರೀತಿಯ ಆಲೋಚನೆಗಳ ಮೂಲಕ ಪರಿಹಾರವನ್ನು ಸ್ಟಾರ್ಟ್​ ಅಪ್​ಗಳು ನೀಡುತ್ತಿವೆ ಎಂದಿದೆ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಸ್ಟಾರ್ಟ್-ಅಪ್ ಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಇಸ್ರೋ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಕೆಲವು ಹೊಸ ಸ್ಟಾರ್ಟ್​ ಅಪ್​ಗಳ ಜೊತೆಗೆ ಇಸ್ರೋ ಈಗಾಗಲೇ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚು ಮಾಡಲಿದೆ ಇಸ್ರೋ.

ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 2030ರ ವೇಳೆಗೆ 20 ಲಕ್ಷ ಕೋಟಿ ತಲುಪಲಿದೆ. ಈ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ ಶೇ. 10 ರಷ್ಟು ಪಾಲನ್ನು ಭಾರತ ವಶಪಡಿಸಿಕೊಳ್ಳುವ ಗುರಿ ಹೊಂದಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿದೆ. ಹಲವು ದಿಕ್ಕುಗಳಲ್ಲಿ, ಹಲವು ವಿಭಾಗಗಳಲ್ಲಿ, ಹಲವು ಹೊಸ ಸಂಸ್ಥೆಗಳೊಟ್ಟಿಗೆ, ಕೆಲವು ಮುಂದುವರೆದ ದೇಶಗಳೊಂದಿಗೆ ಇಸ್ರೋ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಬಾಹ್ಯಾಕಾಶ ವಾಣಿಜ್ಯೀಕರಣದಲ್ಲಿ ವೇಗವಾಗಿ ಹೆಜ್ಜೆಗಳನ್ನು ಇಡುತ್ತಿದೆ. 2020 ರಲ್ಲಿ 9.6 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಗೆ 2 % -3 % ಕೊಡುಗೆಯನ್ನು ಇಸ್ರೋ ನೀಡಿದೆ. 2025ರ ವೇಳೆಗೆ 10 ಲಕ್ಷ ಕೋಟಿ ಆರ್ಥಿಕತೆಯನ್ನು ಜಾಗತಿಕ ಬಾಹ್ಯಾಕಾಶ ಕ್ಷೇತ್ರ ತಲುಪುವ ಸಾಧ್ಯತೆ ಇದ್ದು, ಅದಕ್ಕೆ ದೊಡ್ಡ ಕೊಡುಗೆ ಕೊಡುವ ಗುರಿಯನ್ನು ಇಸ್ರೋ ಹೊಂದಿದೆ.

ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ಹಿರಿದುಗೊಳಿಸುತ್ತಾ ಸಾಗುತ್ತಿದೆ ಇಸ್ರೋ. ವಿದೇಶಿ ಉಪಗ್ರಹಗಳನ್ನು ಸಹ ಉಡಾವಣೆ ಮಾಡುತ್ತಿದೆ. ವಾಣಿಜ್ಯ ಉಡಾವಣೆಯನ್ನೂ ಸಹ ಇಸ್ರೋ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹಲವು ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಪ್ರಾರಂಭ ಮಾಡಿದೆ. ಇದಕ್ಕಾಗಿ ಹೆಚ್ಚಿನ ಮಾನವ ಸಂಪನ್ಮೂಲ, ಅದರಲ್ಲೂ ಪ್ರತಿಭಾನ್ವಿತ ವಿಜ್ಞಾನಿಗಳು, ಎಂಜಿನಿಯರ್​ಗಳ ಅವಶ್ಯಕತೆ ಹೆಚ್ಚಿಗಿದೆ. ಹಾಗಾಗಿ ಈ ಪ್ರತಿಭಾನ್ವಿತರನ್ನು ತಯಾರು ಮಾಡುವ ಹಾಗೂ ಗುರುತಿಸುವ ಹಲವು ಕಾರ್ಯವನ್ನು ಇಸ್ರೋ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸುವ ಆಲೋಚನೆಯನ್ನೂ ಹೊಂದಿದೆ ಎಂದು ಇಸ್ರೋದ ಸಾರ್ವಜನಿಕ ಸಂಪರ್ಕ ಮುಖ್ಯಾಧಿಕಾರಿ ಡಾ ಮಹೇಶ್ ಕುಮಾರ್ ಹೇಳಿದ್ದಾರೆ.

Published On - 2:34 pm, Tue, 30 April 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ