ಬೆಂಗಳೂರು: ಮೊನ್ನೆಯಷ್ಟೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗಾಗಿ ಪಕ್ಷದ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಭೇಟಿ ನೀಡಿ ರಾಜ್ಯ ರಾಜಕೀಯ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಬಿಜೆಪಿ ಘಟಕದಲ್ಲಿ ತಲ್ಲಣ ಸೃಷ್ಟಿಸಿದ್ದ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ ಅವರು ಹೆಲಿ-ಪ್ರವಾಸ ಸೇವೆಗಳನ್ನು ಒದಗಿಸುವ ಬಗ್ಗೆ ಮಾತಾಡಿದ್ದು ಜಕ್ಕೂರು ವಿಮಾನ ನಿಲ್ದಾಣವನ್ನು ಈ ಸೇವೆಗಳಿಗೆ ಬಳಸಲಾಗುವುದೆಂದು ಹೇಳಿದ್ದಾರೆ. ‘ಜಕ್ಕೂರು ವಿಮಾನ ನಿಲ್ದಾಣವನ್ನು ಹೆಲಿಕ್ಯಾಪ್ಟರ್ಗಳ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಉದ್ದೇಶಗಳಿಗೆ ಬಳಸಲಾಗುವುದು. ಗೋವಾ. ತಮಿಳುನಾಡು, ಪಾಂಡಿಚೆರಿ, ಮತ್ತು ಕೇರಳ ಮೊದಲಾದ ರಾಜ್ಯಗಳಿಗೆ ಹೋಗಲಿಚ್ಛಿಸುವ ಪ್ರವಾಸಿಗರಿಗಾಗಿ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಒಂದು ಸರ್ಕ್ಯೂಟ್ ಅನ್ನು ತಯಾರಿಸಲಾಗುವುದು. ಹೆಲಿ-ಪ್ರವಾಸೋದ್ಯಮ ಸೇವೆಗಳನ್ನು ತುರ್ತು ಸಂದರ್ಭಗಳಲ್ಲಿ ಅತಿ ಗಣ್ಯ ವ್ಯಕ್ತಿಗಳು (ವಿವಿಐಪಿ) ಸಹ ಬಳಸಿಕೊಳ್ಳಬಹುದು,’ ಎಂದು ಸಚಿವರು ಹೇಳಿದರು.
ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಜಕ್ಕೂರು ವಿಮಾನ ನಿಲ್ದಾಣ ಮತ್ತು ಇತರ ಐದು ವಿಮಾನ ನಿಲ್ದಾಣಗಳನ್ನು ಹೆಲಿ-ಟೂರಿಸಂ ಉದ್ದೇಶಗಳಿಗೆ ಬಳಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಅನುಮತಿ ನೀಡಿವೆ.
ಬುಧವಾರದಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅವರು, ಜಕ್ಕೂರಿನಲ್ಲಿ ನಿರ್ಮಿಸಲಾಗುವ ಪ್ರಸ್ತಾಪಿತ ಹೆಲಿಪೋರ್ಟ್ ಹೆಲಿಪ್ಯಾಡ್ಗಳನ್ನು ಹೊಂದಲಿದ್ದು ಏಕಕಾಲಕ್ಕೆ 6 ಚಾಪರ್ಗಳಿಗೆ ಲ್ಯಾಂಡ್ ಮಾಡುವುದು ಮತ್ತು ಟೇಕ್-ಆಫ್ ಆಗುವುದು ಸಾಧ್ಯವಾಗುತ್ತದೆ ಎಂದರು. ‘ಸದ್ಯಕ್ಕೆ ಹೇಲಿ ಸೇವೆಗಳಿಗಾಗಿ ಮೂರು ಏಜೆನ್ಸಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ,’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಬೆಂಗಳೂರು ಅಲ್ಲದೆ, ಮೈಸೂರು, ಮಂಗಳೂರು, ಬಳ್ಳಾರಿ, ಧಾರವಾಡ ಮತ್ತು ಕಲಬುರಗಿಯಲ್ಲಿ ಹೆಲಿ-ಟೂರಿಸಂ ಸೇವೆ ಆರಂಭಿಸಲಾಗವುದೆಂದು ಸಚಿವರು ಹೇಳಿದರು.ಅಂತಿಮವಾಗಿ, ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಹೆಲಿ-ಪ್ರವಾಸೋದ್ಯಮದ ವಿಸ್ತರಿಸಲಾಗುವುದು ಎಂದು ಯೋಗೇಶ್ವರ್ ಹೇಳಿದರು.
ಕಳೆದ ಏಪ್ರಿಲ್ನಲ್ಲಿ ಹೆಲಿ-ಟೂರಿಸಂ ಸೇವೆಗಳನ್ನು ಮೈಸೂರಿನಲ್ಲಿ ಲಾಂಚ್ ಮಾಡುವ ಪ್ರವಾಸೋದ್ಯಮ ಇಲಾಖೆಯ ಯೋಜನೆ ವಿವಾದದ ರೂಪ ತಳೆದಿತ್ತು. ಸದರಿ ಯೋಜನೆಗಾಗಿ ಮೈಸೂರಿನ ಹೋಟೆಲೊಂದರ ಹತ್ತರದಲ್ಲಿರುವ ಗಿಡ-ಮರ ಕಡಿಯುವುದನ್ನು ಮೈಸೂರಿನ ಒಡೆಯರ್ ಅರಸೊತ್ತಿಗೆ ಮತ್ತು ಅಲ್ಲಿನ ಪರಿಸರವಾದಿಗಳು ತೀವ್ರವಾಗಿ ವಿರೋಧಿಸಿದ್ದರು.
ಮೈಸೂರಿನ ಲಲಿತ್ ಮಹಲ್ ಹೋಟೆಲ್ ಎದುರುಗಡೆಯಿರುವ ಕರುಬರಹಳ್ಳಿಯ ನಾಲ್ಕು ಎಕರೆ ಭೂಪ್ರದೇಶದಲ್ಲಿ ಸೊಂಪಾಗಿ ಬೆಳೆದಿರುವ ಸುಮಾರು 150 ಮರಗಿಡಗಳನ್ನು ಹೆಲಿ-ಟೂರಿಸಂ ಯೋಜನೆಗಾಗಿ ಕಡಿಯಲು ಪ್ರವಾಸೋದ್ಯಮ ನಿರ್ಧರಿಸಿದೆ ಎಂದು ಪರಿಸರ ಹೋರಾಟಗಾರರು ಹೇಳಿದ್ದಾರೆ. ಈ ಕುರಿತ ಬೆಳವಣಿಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು, ಲಲಿತ್ ಮಹಲ್ ಹೋಟೆಲ್ ಮುಂಭಾಗದಿಂದ ಆರಂಭಿಸಬೇಕೆಂದಿದ್ದ ಹೆಲಿ-ಟೂರಿಸಂ ಯೋಜನೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Politics: ಸಚಿವ ಸಿ ಪಿ ಯೊಗೇಶ್ವರ್ಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಜವಾಬ್ಧಾರಿ ಘೋಷಿಸಿದ ಸಿಎಂ ಯಡಿಯೂರಪ್ಪ