ಟೆಸ್ಟ್​ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ ದೇವರ ದಾಖಲೆ ಮುರಿಯುವ ಸಾಮರ್ಥ್ಯ ಜೋ ರೂಟ್​ಗಿದೆ, ಅಂಕಿ ಅಂಶ ಅದನ್ನೇ ಹೇಳುತ್ತಿದೆ..!

|

Updated on: Jan 28, 2021 | 2:11 PM

ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಜೋ ರೂಟ್​ ಇದುವರೆಗೆ 99 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 181 ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿರುವ ರೂಟ್​ 49.1 ರ ಸರಾಸರಿಯಲ್ಲಿ 8249 ರನ್​ ಬಾರಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ ದೇವರ ದಾಖಲೆ ಮುರಿಯುವ ಸಾಮರ್ಥ್ಯ ಜೋ ರೂಟ್​ಗಿದೆ, ಅಂಕಿ ಅಂಶ ಅದನ್ನೇ ಹೇಳುತ್ತಿದೆ..!
ಜೋ ರೂಟ್​ ಹಾಗೂ ಸಚಿನ್​ ತೆಂಡೂಲ್ಕರ್​
Follow us on

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕುವ ಸಾಮರ್ಥ್ಯ ಮತ್ತು ಪ್ರತಿಭೆ ಇಂಗ್ಲೆಂಡ್ ನಾಯಕ ಜೋ ರೂಟ್​ಗೆ ಇದೆ ಎಂದು ಇಂಗ್ಲೆಂಡ್​ ಇಂಡದ ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ.

ಬಾಯ್ಕಾಟ್ ಅವರ ಈ ಹೇಳಿಕೆ ಈಗ ಕ್ರಿಕೆಟ್‌ ವಲಯದಲ್ಲಿ ಬಾರಿ ಚರ್ಚೆ ಹುಟ್ಟು ಹಾಕಿದೆ. ಹಾಗೆಯೇ ಜೆಫ್ರಿ ಬಾಯ್ಕಾಟ್ ಅವರ ಹೇಳಿಕೆಯನ್ನು ಸಹ ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ಟೆಸ್ಟ್‌ ಕ್ರಿಕೆಟ್‌ನಲ್ಲಿ ತೋರುತ್ತಿರುವ ಅಧ್ಬುತ ಪ್ರದರ್ಶನ ಬಾಯ್ಕಾಟ್ ಅವರ ಹೇಳಿಕೆಗೆ ಪುಷ್ಠಿ ನೀಡುವಂತಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಇಂಗ್ಲೆಂಡ್​ ತಂಡ 2-0 ಯಿಂದ ಕ್ಲೀನ್​ ಸ್ವೀಪ್​ ಮಾಡಿತು. ಇದರಲ್ಲಿ ನಾಯಕ ಜೋ ರೂಟ್ ಒಟ್ಟು ನಾಲ್ಕು ಇನ್ನಿಂಗ್ಸ್​ಗಳಲ್ಲಿ 106.50 ಸರಾಸರಿಯಲ್ಲಿ 426 ರನ್ ಗಳಿಸಿದರು. ಇದರ ಜೊತೆಗೆ ಎರಡು ಶತಕಗಳು ಒಳಗೊಂಡಂತೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿ ಜೀವನದ ಅತ್ಯಧಿಕ 228 ರನ್ ಬಾರಿಸಿದರು. ರೂಟ್​ ಅವರ ಈ ಆಟ ಇಂಗ್ಲೆಂಡ್​ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಲು ಪ್ರಮುಖ ಪಾತ್ರವಹಿಸಿತು. ಹೀಗಾಗಿ ರೂಟ್​ ಅವರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೆ ರೀತಿಯ ಆಟವನ್ನು ಮುಂದುವರಿಸಿದರೆ ಸಚಿನ್​ ದಾಖಲೆಗಳು ಪುಡಿ ಪುಡಿಯಾಗಲಿವೆ ಎಂಬುದು ಕ್ರಿಕೆಟ್‌ ಪಂಡಿತರ ವಾದವಾಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್​ ತೆಂಡೂಲ್ಕರ್..
ಗಾಡ್​ ಆಫ್​ ಕ್ರಿಕೆಟ್‌ ಎಂದು ಪ್ರಸಿದ್ದರಾಗಿರುವ ಸಚಿನ್​ ತೆಂಡೂಲ್ಕರ್ ಟೀಂ ಇಂಡಿಯಾದ ಹೆಮ್ಮೆ ಎಂದರೆ ತಪ್ಪಾಗಲಾರದು. ಟೀಂ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿರುವ ಈ ಬ್ಯಾಟಿಂಗ್​ ದೈತ್ಯ ಟೀಂ ಇಂಡಿಯಾಕ್ಕಾಗಿ ಟೆಸ್ಟ್​ನಲ್ಲಿ 200 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 329 ಇನ್ನಿಂಗ್ಸ್ ಆಡಿರುವ ತೆಂಡೂಲ್ಕರ್ 53.79 ಸರಾಸರಿಯಲ್ಲಿ 15921 ರನ್​ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳಿದ್ದರೆ, 68 ಅರ್ಧ ಶತಕಗಳಿವೆ. ಅಲ್ಲದೆ ಸಚಿನ್​ 6 ಬಾರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 248 ಸಚಿನ್​ ಅವರು ಟೆಸ್ಟ್‌ವೊಂದರಲ್ಲಿ ಸಿಡಿಸಿರುವ ಅತ್ಯಧಿಕ ರನ್​ ಆಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್​..
ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಜೋ ರೂಟ್​ ಇದುವರೆಗೆ 99 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 181 ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿರುವ ರೂಟ್​ 49.1 ರ ಸರಾಸರಿಯಲ್ಲಿ 8249 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 49 ಅರ್ಧಶತಕ ಸೇರಿವೆ. ಜೊತೆಗೆ 4 ದ್ವಿಶತಕವನ್ನು ರೂಟ್​ ಬಾರಿಸಿದ್ದಾರೆ. 254 ರೂಟ್​ ಸಿಡಿಸಿರುವ ಅತ್ಯಧಿಕ ರನ್​ ಆಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್, ಸಚಿನ್​ ದಾಖಲೆ ಮುರಿಯಬಲ್ಲರಾ?
ಜೋ ರೂಟ್​ ಅವರ ಸದ್ಯದ ಆಟವನ್ನು ಗಮನಿಸಿದಾಗ, ಸಚಿನ್​ ದಾಖಲೆಯನ್ನು ಮುರಿಯುವ ಎಲ್ಲಾ ಸಾದ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಆದರೆ ರೂಟ್​ ಟೆಸ್ಟ್​ ಕ್ರಿಕೆಟ್​ಗೆ ಕಾಲಿರಿಸಿ ಈಗಾಗಲೇ 8 ವರ್ಷಗಳು ಬರ್ತಿಯಾಗಿವೆ. ಕ್ರಿಕೆಟ್‌ ಸಂಪೂರ್ಣವಾಗಿ ಫಿಟ್ನೆಸ್​ ಮೇಲಿಯ ಕೇಂದ್ರಿಕೃತವಾಗಿದೆ. ಹೀಗಾಗಿ ರೂಟ್​ ಎಲ್ಲಿಯವರೆಗೆ ತಮ್ಮ ಫಿಟ್ನೆಸನ್ನು ಹೀಗೆ ಉಳಿಸಿಕೊಳ್ಳಬಲ್ಲರು ಎಂಬುದು ಪ್ರಶ್ನೆಯಾಗಿದೆ. ಜೊತೆಗೆ ಜಂಟಲ್​ಮ್ಯಾನ್​ ಗೇಮಿನಲ್ಲಿ ಈಗಾಗಲೇ ಎಂಗ್​ಸ್ಟಾರ್ಸ್​ಗಳು ತಮ್ಮ ಅಧ್ಬುತ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿದ್ದಾರೆ.

ಹೀಗಾಗಿ ಒಂದೊಮ್ಮೆ ರೂಟ್​ ಕಳಪೆ ಪ್ರದರ್ಶನದಿಂದ ಅಥವಾ ಫಿಟ್ನೆಸ್​ ಸಮಸ್ಯೆಯಿಂದ ತಂಡದಿಂದ ಹೊರ ನಡೆದರೆ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸಬೇಕಾಗಿದೆ. ಜೋ ರೂಟ್​ಗೆ ಹೋಲಿಸಿದರೆ ಸಚಿನ್ ಅತಿ ಕಡಿಮೆ ವಯಸ್ಸಿನಲ್ಲೆ ಟೆಸ್ಟ್​ ಕ್ರಿಕೆಟ್‌ಗೆ ಕಾಲಿಟ್ಟವರು. ಸಚಿನ್​ ದೀರ್ಘಾವಧಿಯವರೆಗೆ ಟೆಸ್ಟ್​ ಕ್ರಿಕೆಟ್​ ಆಡಿ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಜೋ ರೂಟ್​, ಸಚಿನ್​ ದಾಖಲೆಯನ್ನು ಮುರಿಯುವುದು ಕೊಂಚ ಕಷ್ಟವಾದರೂ, ಕ್ರಿಕೆಟ್‌ನಲ್ಲಿ ಯಾವುದು ಅಸಾಧ್ಯವಲ್ಲ.

ಇಂಗ್ಲೆಂಡ್​ನ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಳ್ಳುವತ್ತ ಜೋ ರೂಟ್ ದಾಪುಗಾಲು