ಶಾ ದೂರವಾಣಿ ಕರೆ: ಲಿಂಗಾಯತ ಮೀಸಲಾತಿ ಮುಂದೂಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಸಜ್ಜಾದ CM
ಲಿಂಗಾಯತ ಸಮುದಾಯದಲ್ಲಿ ಸೂಪರ್ ಹೀರೊ ಆಗಿ ಮಿಂಚಲು ಹೈ ಸ್ಪೀಡ್ ನಲ್ಲಿ ಹೊರಟಿದ್ದ ಸಿಎಂ ಯಡಿಯೂರಪ್ಪಗೆ ಬೆಳ್ಳಂ ಬೆಳಗ್ಗೆ ಕರೆ ಮಾಡಿದ ಅಮಿತ್ ಶಾ, ಸದ್ಯಕ್ಕೆ ಒಬಿಸಿ ವಿಷಯವನ್ನು ಕೈಬಿಡುವಂತೆ ಸೂಚನೆ ನೀಡಿದ್ರು ಎನ್ನಲಾಗಿದೆ.

ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಬಿಂಬಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಇದಕ್ಕೆ ಇಂಬು ನೀಡಲು ಇತ್ತೀಚೆಗೆ ತರಾತುರಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ನಿಗಮ ರಚನೆ ಮಾಡಿದ್ರು. ಮಾತ್ರವಲ್ಲ, ನಿಗಮಕ್ಕೆ ಅಷ್ಟೇ ತರಾತುರಿಯಲ್ಲಿ 500 ಕೋಟಿ ರೂ. ಅನುದಾನವನ್ನೂ ತಕ್ಷಣವೇ ಮಂಜೂರು ಮಾಡಿದ್ರು.
ಇದಕ್ಕೆ ಒಪ್ಪಿಗೆ ಬೀಳುತ್ತಿದ್ದಂತೆ ಸಿಎಂ ಒಂದು ಹೆಜ್ಜೆ ಮುಂದೆ ಹೋಗಿ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಪ್ಲ್ಯಾನ್ ಸಹ ಮಾಡಿದ್ರು. ಅಷ್ಟೇ ವೇಗದಲ್ಲಿ ಇವತ್ತು ಶುಕ್ರವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯ ಅಜೆಂಡಾದಲ್ಲೂ ಈ ವಿಷಯವನ್ನು ಸೇರ್ಪಡೆ ಆಗುವಂತೆ ನೋಡಿಕೊಂಡ್ರು. ಜತೆಗೆ, ಇವತ್ತು ಸಂಪುಟ ಸಭೆಯ ನಂತರ ತಾವೇ ಪತ್ರಿಕಾಗೋಷ್ಠಿ ನಡೆಸಲೂ ಸಜ್ಜಾಗಿದ್ರು.
ಹೀಗೆ ಹೈ ಸ್ಪೀಡ್ ನಲ್ಲಿ ಹೊರಟಿದ್ದ ಸಿಎಂಗೆ ಬೆಳ್ಳಂ ಬೆಳಗ್ಗೆ ಕರೆ ಮಾಡಿದ ಅಮಿತ್ ಶಾ, ಸದ್ಯಕ್ಕೆ ಒಬಿಸಿ ವಿಷಯವನ್ನು ಕೈಬಿಡುವಂತೆ ಸೂಚನೆ ನೀಡಿದ್ರು ಎನ್ನಲಾಗಿದೆ.
ಹೀಗೆ ಲಿಂಗಾಯತ ಸಮುದಾಯದಲ್ಲಿ ಸೂಪರ್ ಹೀರೊ ಆಗಿ ಮಿಂಚಲು ಮುಂದಾಗಿದ್ದ ಯಡಿಯೂರಪ್ಪ, ಮುಂದೆ ಇದೇ ಕಾರಣಕ್ಕೆ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರೆ ಪಕ್ಷಕ್ಕೆ ಬಿಸಿ ತುಪ್ಪ ಆಗಬಹುದು ಎಂಬ ಲೆಕ್ಕಾಚಾರ ಹಾಕಿ ಒಬಿಸಿ ವಿಷಯವನ್ನು ಅಮಿತ್ ಶಾ ಡ್ರಾಪ್ ಮಾಡಿಸಿದ್ರು ಎನ್ನಲಾಗಿದೆ. ಅಂದಹಾಗೆ, ಹೈಕಮಾಂಡ್ ಗೆ ಸೈಡ್ ಹೊಡೆಯಲು ಯಡಿಯೂರಪ್ಪ ಮುಂದಾಗಿದ್ದೇ ಒಬಿಸಿ ವಿಷಯ ಇವತ್ತು ಸಂಪುಟ ಸಭೆಯಿಂದ ನೆನೆಗುದಿಗೆ ಬಿತ್ತು ಎಂದೂ ಬಿಜೆಪಿ ವಲಯದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ.
ಅಮಿತ್ ಶಾ ಹಾಕಿದ ಸಡನ್ ಬ್ರೇಕ್ ನಿಂದ ಮುಗ್ಗರಿಸಿದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದ ಸಿಎಂ, ಪತ್ರಿಕಾಗೋಷ್ಠಿ ರದ್ದು ಮಾಡಿದ್ರು. ಸಂಪುಟ ಸಭೆಗೆ ಹೋಗುವ ಮುನ್ನವೇ, ಒಬಿಸಿ ವಿಷಯವಾಗಿ ಮಾತನಾಡಿ- ಈ ಬಗ್ಗೆ ದಿಲ್ಲಿ ನಾಯಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಅಂತ ತೇಪೆ ಹಾಕಿದ್ರು.
ಇದೇ ಸಂದರ್ಭ ಉಪಯೋಗಿಸಿಕೊಂಡು ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಮುಂದಾಗಿದ್ದಾರೆ. ಮೀಸಲಾತಿ ವಿಷಯ ಚರ್ಚೆಗಾಗಿ ದೆಹಲಿಗೆ ಹೋಗಲಿರುವ ಯಡಿಯೂರಪ್ಪ, ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರುವವರ ಪಟ್ಟಿಗೆ ಅಂಕಿತ ಹಾಕಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ಸರ್ಜರಿಗೆ ಒಪ್ಪಿಗೆ ಕೊಡಿ ಎಂದು ಕೇಳಿದ್ದರೂ ಏನೂ ಪ್ರಯೋಜನ ಆಗಿರಲಿಲ್ಲ. ನಡ್ಡಾ ತಿರುಗಿ ಫೋನ್ ಮಾಡಿರಲಿಲ್ಲ.
ಹಾಗಾಗಿ ಸಿಟ್ಟಾಗಿದ್ದ ಯಡಿಯೂರಪ್ಪ ಮುಯ್ಯಿಗೆ ಮುಯ್ಯಿ ಎಂಬಂತೆ ತಮಗೆ ಬೇಕಾದವರಿಗೆ ವಿವಿಧ ನಿಗಮ/ಮಂಡಲಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ನೋಡಿ ಹೈ ಕಮಾಂಡ್ ಸುಮ್ಮನೆ ಕುಳಿತುಕೊಳ್ಳುವಂತೆ ಆಯಿತು. ಅಷ್ಟೇ ಅಲ್ಲ, ಮೂರೋ ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವ ವಿಚಾರದಲ್ಲಿದ್ದರು. ಯಾವಾಗ ಲಿಂಗಾಯತ ಮೀಸಲಾತಿ ವಿಚಾರ ಎತ್ತಿ ಸಂಪುಟದಲ್ಲಿಟ್ಟು ಅಂಗೀಕರಿಸಲು ಮುಂದಾದರೋ ಆಗ ಹೈ ಕಮಾಂಡ್, ಅಮಿತ್ ಶಾ ಮೂಲಕ ಬ್ರೇಕ್ ಹಾಕಿಸಿದರು.
ಬಿಜೆಪಿ ಮೂಲಗಳ ಪ್ರಕಾರ, ಈಗ ಹೈ ಕಮಾಂಡ್ ಕೊಡು-ಕೊಳ್ಳುವಿಕೆಗೆ ಮುಂದೆ ಬರುವ ಲಕ್ಷಣ ಕಾಣುತ್ತಿದೆ. ಸಂಪುಟ ಪುನಾರಚನೆ/ ವಿಸ್ತರಣೆಗೆ ಒಪ್ಪಿಗೆ ಕೊಟ್ಟು ಯಡಿಯೂರಪ್ಪ ಸಿಟ್ಟನ್ನು ಕಡಿಮೆ ಮಾಡಿ ಕಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.




