ಬೆಂಗಳೂರು: ಮಂಡ್ಯ ಜಿಲ್ಲೆಯ ಎಸ್‌ಪಿಯಾಗಿ ನೇಮಕವಾಗಿದ್ದ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ಅವರಿಗೆ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 10 ದಿನಗಳಿಂದ ಮಂಡ್ಯ ಎಸ್ಪಿ ಸ್ಥಾನ ಖಾಲಿಯಾಗಿಯೇ ಉಳಿದಿತ್ತು. ಇದೀಗ 5 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಮಂಡ್ಯಕ್ಕೆ ಹೊಸ ಎಸ್ಪಿಯನ್ನು ನೇಮಕ ಮಾಡಿದೆ. ಸುಮನ್ ಡಿ. ಪನ್ನೇಕರ್, ಇಷಾ ಪಂತ್, ಯತೀಶ್ ಎನ್. ಸೇರಿದಂತೆ ಐವರು ಖಡಕ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತೀವ್ರ ವಿವಾದಕ್ಕೀಡಾಗಿದ್ದ ಮಂಡ್ಯ ಎಸ್ಪಿ ಸ್ಥಾನಕ್ಕೆ ಸುಮನ್ ಡಿ. ಪನ್ನೇಕರ್ ಅವರ ಬದಲು ಯತೀಶ್ ಎನ್. ಅವರನ್ನು ನೇಮಕ ಮಾಡಲಾಗಿದೆ. ಮಂಡ್ಯ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಸುಮನ್ ಡಿ. ಪನ್ನೇಕರ್ ಅವರನ್ನು ಉತ್ತರ ಕನ್ನಡದ ಎಸ್‌ಪಿಯಾಗಿ ಎತ್ತಂಗಡಿ ಮಾಡಲಾಗಿದೆ. ಮಂಡ್ಯ ನೂತನ ಎಸ್‌ಪಿಯಾಗಿ ಎನ್. ಯತೀಶ್, ಉತ್ತರ ಕನ್ನಡ ಎಸ್‌ಪಿಯಾಗಿ ಸುಮನ್ ಡಿ. ಪನ್ನೇಕರ್, ಕಲಬುರ್ಗಿ ಎಸ್‌ಪಿಯಾಗಿ ಇಷಾ ಪಂತ್, ಗದಗದ ಎಸ್‌ಪಿಯಾಗಿ ಎಸ್.ಪಿ. ದೇವರಾಜ್, ಮೈಸೂರಿನ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿಯಾಗಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ರಾಜಕೀಯ ಒತ್ತಡದಿಂದ ಮಂಡ್ಯದ ನೂತನ ಮಹಿಳಾ ಎಸ್ಪಿ ಸುಮನ್ ಡಿ. ಪನ್ನೇಕರ್ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಡ್ಯ ಎಸ್ಪಿ ನೇಮಕ ವಿಚಾರದಲ್ಲಿ ಯಾವುದೇ ಒತ್ತಡವಿಲ್ಲ. ಅನೇಕ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಅವರಿಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವುದಕ್ಕೆ ಸಮಯ ಇರುತ್ತದೆ. ಮಂಡ್ಯ ಎಸ್ಪಿ ಸುಮನ್ ಪನ್ನೇಕರ್ ಅಧಿಕಾರ ಸ್ವೀಕರಿಸಲು ಯಾವುದೇ ತಡೆಯಿಲ್ಲ ಎಂದಿದ್ದರು. ಆದರೆ, ಇದೀಗ ಮತ್ತೆ ಸುಮನ್ ಪನ್ನೇಕರ್ ಅವರನ್ನು ಉತ್ತರ ಕನ್ನಡದ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಅ. 20ರಂದು ಮಂಡ್ಯ ಎಸ್ಪಿ ಡಾ.ಎಂ. ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ಆ ಜಾಗಕ್ಕೆ ಸುಮನ್ ಡಿ. ಪನ್ನೇಕರ್ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ. ಪನ್ನೇಕರ್ ಅವರಿಗೆ ಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದರು. ಇದರಿಂದ ಸುಮಾರು 10 ದಿನಗಳಿಂದ ಮಂಡ್ಯ ಎಸ್ಪಿ ಸ್ಥಾನ ಖಾಲಿಯಿತ್ತು. ಇದೀಗ ವರ್ಗಾವಣೆಗೊಂಡಿರುವ ಐವರು ಐಪಿಎಸ್ ಅಧಿಕಾರಿಗಳಿಗೂ ತುರ್ತಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Mandya: ಮಂಡ್ಯ ಎಸ್ಪಿ ಹುದ್ದೆ ಹರಾಜಿಗಿದೆ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್