ಬೆಂಗಳೂರು: ರೈತರ ಫಲವತ್ತಾದ ಕೃಷಿ ಭೂಮಿಯನ್ನ ಸರ್ಕಾರ ಇದೀಗ ಅಕ್ಷರಶಃ ಮಾರಾಟಕ್ಕಿಟ್ಟಿದೆ. ಇಷ್ಟು ದಿನ ಭೂಸುಧಾರಣಾ ಕಾಯ್ದೆಯ ರಕ್ಷಣೆ ಅಡಿ ಸುರಕ್ಷಿತವಾಗಿದ್ದ ಗದ್ದೆ, ತೋಟ, ಜಮೀನುಗಳ ಮೇಲೆಲ್ಲಾ ಇದೀಗ ಫಾರ್ ಸೇಲ್ ಬೋರ್ಡ್ ಬೀಳಲಿದೆ.
ಕೃಷಿ ಭೂಮಿ.. ಪ್ರತಿಯೊಬ್ಬರಿಗೂ ಅನ್ನ ನೀಡೋ ಭೂಮ್ತಾಯಿ.. ಇದನ್ನ ನಂಬಿದವ್ರು, ಇಲ್ಲಿ ಕಷ್ಟಪಟ್ಟು ಬೆವರು ಸುರಿಸೋರು ತುತ್ತಿಗಾಗಿ ಪರದಾಡಿರೋ ಚರಿತ್ರೆನೇ ಇಲ್ಲ. ಕೃಷಿ ಭೂಮಿಯನ್ನ ಪೂಜಿಸಿ, ಅಲ್ಲಿರೋ ಬೆಳೆಯನ್ನ ಒಡಲಾಳದ ಪ್ರೀತಿಯಿಂದ ಸಾಕಿ ಸಲಹುವ ರೈತರು ನಮ್ಮಿಲ್ಲಿದ್ದಾರೆ. ಕೃಷಿ ಭೂಮಿಗಾಗಿ ಅದೆಷ್ಟೋ ಅನ್ನದಾತರು ತಮ್ಮ ಉಸಿರನ್ನೇ ಚೆಲ್ಲಿದ್ದಾರೆ. ಇಂತಹ ಕೃಷಿ ಭೂಮಿ ಬಗ್ಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಕೃಷಿಭೂಮಿಯನ್ನ ಯಾರಾದ್ರೂ ಖರೀದಿಸಬಹುದು!
ಹೌದು, ಕೃಷಿಭೂಮಿಯನ್ನ ಇನ್ಮುಂದೆ ಯಾರು ಬೇಕಾದ್ರೂ ಖರೀದಿಸಬಹುದು ಎಂದು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಇದ್ರ ಪ್ರಕಾರ ರಿಯಲ್ ಎಸ್ಟೇಟ್ ದಂಧೆ ಕೃಷಿ ಕ್ಷೇತ್ರಕ್ಕೂ ಕಾಲಿಡುತ್ತಾ ಅನ್ನೋ ಆತಂಕ ಶುರುವಾಗಿದೆ. ಅಂದ್ಹಾಗೇ, ಈ ಹಿಂದೆ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ & ಬಿ ಗಳ ಅಡಿ ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಸಬೇಕು ಅನ್ನೋ ನಿಯಮ ಇತ್ತು. ಆದ್ರೀಗ ಈ ಸೆಕ್ಷನ್ಗಳನ್ನ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದ್ರಿಂದ ನಮ್ಮ ರಾಜ್ಯದ ಕೃಷಿಭೂಮಿಯನ್ನ ಇನ್ಮುಂದೆ ಯಾವುದೇ ಊರಿನ ಅಥ್ವಾ ಯಾವುದೇ ದೇಶದ ಯಾರು ಬೇಕಾದ್ರೂ ಖರೀದಿಸಿ, ಬೇಲಿ ಹಾಕಿಕೊಳ್ಳಬಹುದು.
ಇನ್ನು ಈ ಹಿಂದೆ ವಾರ್ಷಿಕ 25 ಲಕ್ಷ ಕೃಷಿಯೇತರ ಆದಾಯ ಇರೋರು ಮಾತ್ರ ಡಿಸಿಯಿಂದ ಅನುಮತಿ ಪಡೆದು ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಆದ್ರೀಗ ಜಿಲ್ಲಾಧಿಕಾರಿಗಳ ಅನುಮತಿಯೇ ಬೇಕಿಲ್ಲ. ಇದನ್ನ ಸಮರ್ಥಿಸಿಕೊಂಡ ಮಾಧುಸ್ವಾಮಿ, ಈಗ ಎಲ್ಲೆಲ್ಲೂ ಕೃಷಿ ಬಗ್ಗೆ ಆಸಕ್ತಿ ಮೂಡಿದೆ. ಜನ ಕೃಷಿಗೆ ಬರಲು ಕಾಯ್ದೆ ತಡೆ ಆಗಿತ್ತು. ಆದ್ರೀಗ ಕಾಯ್ದೆಯನ್ನ ರದ್ದುಗೊಳಿಸೋಕೆ ಒಪ್ಪಿಗೆ ನೀಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಕಾಯ್ದೆಯನ್ನ ಮಂಡನೆ ಮಾಡಿ ನಂತ್ರ ಕಾನೂನು ಮಾಡ್ತೀವಿ ಅಂದ್ರು.
ಒಟ್ನಲ್ಲಿ ಮೊದಲೇ ರೈತ ಸಂಕಷ್ಟದಲ್ಲಿದ್ದಾನೆ. ಜೊತೆಗೆ ಕೃಷಿ ಕೂಡ ಲಾಭದಾಯಕ ಉದ್ಯಮವಾಗಿ ಬೆಳೆದಿಲ್ಲ. ಈ ಹಂತದಲ್ಲಿ ರಾಜ್ಯ ಸರ್ಕಾರ ರೈತರ ಭೂಮಿಯನ್ನು ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿಸಲು ಮುಂದಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ.
Published On - 6:57 am, Fri, 12 June 20