ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ ಎಂದ ಕರ್ನಾಟಕದ ಮಾಜಿ ಸಚಿವ, ಘರ್ ವಾಪಸಿಗೆ ತೆರೆಮರೆ ಸಿದ್ಧತೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 15, 2022 | 7:32 PM

ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ ಎಂದು ಕರ್ನಾಟಕದ ಮಾಜಿ ಸಚಿವರೊಬ್ಬರು ಹೇಳುವ ಮೂಲಕ ತೆರೆಮರೆಯಲ್ಲಿ ಘರ್ ವಾಪಸಿಗೆ ಸಿದ್ಧತೆ ನಡೆಸಿದ್ದಾರೆ.

ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ ಎಂದ ಕರ್ನಾಟಕದ ಮಾಜಿ ಸಚಿವ, ಘರ್ ವಾಪಸಿಗೆ ತೆರೆಮರೆ ಸಿದ್ಧತೆ
ಸಂಗ್ರಹ ಚಿತ್ರ
Follow us on

ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕ್ ಅವರು ಬಿಜೆಪಿ ತೊರೆದಿರುವ ಬಗ್ಗೆ  ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ. ಅಲ್ಲದೇ ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

ಕಾರವಾರದಲ್ಲಿ ಇಂದು(ಅಕ್ಟೋಬರ್ 15) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆನಂದ್ ಅಸ್ನೋಟಿಕರ್, ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ. ಬಿಜೆಪಿ ಬಿಡಲು ಕೆಲವು ರಾಜಕೀಯ ನಿರ್ಧಾರ ನನ್ನಿಂದ ತಪ್ಪಾಗಿದೆ. ವೈಯಕ್ತಿಕ ಕಾರಣಗಳು ಹಾಗೂ ಅಂತಹ ವಾತಾವರಣದಿಂದ ಬಿಜೆಪಿ ಬಿಡುವಂತಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ ಸುಳಿವು ಕೊಟ್ಟ ಬೊಮ್ಮಾಯಿ: ಸಚಿವಾಕಾಂಕ್ಷಿಗಳಲ್ಲಿ ಚಿಗುರಿದ ಕುರ್ಚಿ ಕನಸು

ನಾನು ಯಾವ ಪಕ್ಷಕ್ಕೂ ಟಿಕೆಟ್ ಕೇಳಲು ಹೋಗುವುದಿಲ್ಲ. ಮಾಜಿ ಸಚಿವರೊಬ್ಬರು ಒಂದು ತಿಂಗಳು ಕಾಯಿ ಎಂದಿದ್ದಾರೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಹಾಗೂ ಅವರ ಅಭಿಮಾನಗಳಲ್ಲಿ ಕುತೂಹಲ ಹುಟ್ಟುಹಾಕಿದರು.

ಬಿಜೆಪಿ ನಾಯಕರ ಬೆಂಬಲದಿಂದ ಹಾಗೂ ಅವರ ಆಶಿರ್ವಾದದಿಂದ ನಾನು ಇಂದು ಇಲ್ಲಿದ್ದೇನೆ. ರಾಜಕೀಯ ಪ್ರಮುಖರು, ಸಂಸದ ಅನಂತ ಕುಮಾರ್ ಹೆಗಡೆಯವರನ್ನು ಕೂಡಾ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ. ಒಂದು ತಿಂಗಳಲ್ಲಿ ನನ್ನ ರಾಜಕೀಯ ನಿರ್ದಾರ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈಮೂಲಕ ಪರೋಕ್ಷವಾಗಿ ಮತ್ತೆ ಬಿಜೆಪಿ ಸೇರ್ಪಡೆಯಾಗುವು ಸುಳಿವು ಕೊಟ್ಟಂತಿದೆ.

ಇನ್ನು ಮಾತು ಮುಂದುವರಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಅನ್ಯಾಯ ಆಗಲು ನಾನು ಸೇರಿ ಎಲ್ಲಾ ಪಕ್ಷದ ನಾಯಕರು ಕಾರಣ. ಬಿಜೆಪಿಯವರು ಚುನಾವಣೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲಾಭ ಪಡೆದುಕೊಳ್ಳುತಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿಯಲ್ಲಿ ಮಾಡುತಿದ್ದಾರೆ. ಸರ್ಕಾರ ಮನಸ್ಸು ಮಾಡಿದ್ರೆ ಎರಡು ತಿಂಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಬಹುದು. ಸರ್ಕಾರ ಮೋಸ ಮಾಡುತ್ತಿದೆ. ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡುತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾರವಾರದಲ್ಲಿ ಕೊಂಕಣಿ ನಾಮಫಲಕ ಅಳವಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಾರವಾರದಲ್ಲಿ ಕೊಂಕಣಿ ಲಿಪಿಯನ್ನು ದೇವನಾಗರಿ ಲಿಪಿಯನ್ನು ಬರೆಯುವುದು ತಪ್ಪಲ್ಲ. ಸಂವಿಧಾನದ ಪ್ರಕಾರ ಫಲಕಗಳಿಗೆ ಕೊಂಕಣಿಯಲ್ಲಿ ಬರೆಯಬಹುದು. ನಾನು ಆಯ್ಕೆಯಾಗಿ ಬಂದಲ್ಲಿ ಕಾರವಾರದಲ್ಲಿ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಫಲಕ ಬರೆಯಲು ಅವಕಾಶ ನೀಡುತ್ತೇನೆ. ಗಡಿಭಾಗವಾದ ಕಾರವಾರವನ್ನು ಮೀಸಲು ಪ್ರದೇಶವೆಂದು ಘೋಷಿಸಿ ಸರಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯತ್ತ ಆನಂದ್ ಅಸ್ನೋಟಿಕರ್?
ಆನಂತ್ ಕುಮಾರ್ ಹೆಗಡೆ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ತೆನೆ ಇಳಿಸಿ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಹಲವು ದಿನಗಳಿಂದ ರಾಜಕೀಯ ಗಟ್ಟಿ ನಿರ್ಧಾರಕ್ಕಾಗಿ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ನಿರ್ಧಾರ ಕೈಗೊಳ್ಳುವ ಕಾರ್ಯದಲ್ಲಿದ್ದರು. ಸದ್ಯ ಕೆಲ ದಿನಗಳಿಂದ ಬಿಜೆಪಿ ಸೇರಲು ಅಸ್ನೋಟಿಕರ್ ಸಿದ್ದತೆ ನಡೆಸಿದ್ದು, ಅದಕ್ಕಾಗಿಯೇ ಹಲವು ನಾಯಕರನ್ನ ಸಹ ಈಗಾಗಲೇ ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾರವಾರದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಹ ಬಿಜೆಪಿಯಲ್ಲಿ ಸಾಕಷ್ಟು ಪ್ರಭಾವಿ ನಾಯಕಿಯಾಗಿ ಬೆಳೆದಿದ್ದು ತನ್ನ ರಾಜಕೀಯ ಎದುರಾಳಿ ಅಸ್ನೋಟಿಕರ್ ಅವರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಒಂದೊಮ್ಮೆ ಅಸ್ನೋಟಿಕರ್‌ಗೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಗಳಾಗುವುದರಲ್ಲಿ ಅನುಮಾನವಿಲ್ಲ.