ನವದೆಹಲಿ: ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೇರಿ ಸಾಕಷ್ಟು ಕೇಂದ್ರ ಸಚಿವರು ಇಂದು ಕೂ (Koo) ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾರೆ. ಅಷ್ಟೇ ಅಲ್ಲ, ಈ ಜಾಲತಾಣಕ್ಕೆ ಸೇರ್ಪಡೆ ಆಗುವಂತೆ ಸಾರ್ವಜನಿಕರಿಗೂ ಆಹ್ವಾನ ನೀಡಿದ್ದಾರೆ. ಇನ್ನು, ಸಾಕಷ್ಟು ಸಚಿವಾಲಯಗಳು ಕೂಡ ಕೂ ಆ್ಯಪ್ಗೆ ಸೇರ್ಪಡೆ ಆಗಿವೆ. ಅಷ್ಟಕ್ಕೂ ಏನಿದು ಈ ಹೊಸ ಆ್ಯಪ್? ಇದನ್ನು ಮೊಟ್ಟ ಮೊದಲ ಬಾರಿಗೆ ಹುಟ್ಟು ಹಾಕಿದವರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೂ ಆ್ಯಪ್ ಮೊಟ್ಟ ಮೊದಲ ಬಾರಿಗೆ ಲಾಂಚ್ ಆಗಿದ್ದು 2020 ಮಾರ್ಚ್ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್-ಅಪ್. ಭಾರತದಲ್ಲಿ ಟ್ವಿಟ್ಟರ್ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ. ಆತ್ಮನಿರ್ಭರ ಆ್ಯಪ್ ಚಾಲೆಂಜ್ ಅನ್ನು ಕೂ ಗೆದ್ದಿದೆ. ಹೀಗಾಗಿ ಸರ್ಕಾರದಿಂದ ಈ ಆ್ಯಪ್ಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇದೆ. ಇಂಗ್ಲಿಷ್ ಮಾತ್ರ ಅಲ್ಲದೆ, ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.
I am now on Koo.
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
? Join me: https://t.co/zIL6YI0epM pic.twitter.com/REGioTdMfm
— Piyush Goyal (@PiyushGoyal) February 9, 2021
ಕೂ ಹುಟ್ಟು ಹಾಕಿದವರಾರು?
ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್ ಬಿದ್ವಕ್ತ ಅವರು 2020ರಲ್ಲಿ ಕೂ ಅನ್ನು ಹುಟ್ಟು ಹಾಕಿದ್ದರು. Bombinate Technologies Pvt Ltd ಈ ಆ್ಯಪ್ ಮಾಲಿಕತ್ವ ಹೊಂದಿದೆ. ಇತ್ತೀಚೆಗೆ ಈ ಆ್ಯಪ್ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದೆ.
ಅಪ್ರಮೇಯ ಹಾಗೂ ಮಯಾಂಕ್ ಯಾರು?
ಅಪ್ರಮೇಯ ರಾಧಾಕೃಷ್ಣ Bombinate technologiesನ ಸಿಇಒ. ಐಐಟಿ ಅಹಮದಾಬಾದ್ನ ಪದವೀಧರರೂ ಕೂಡ ಹೌದು. ಅಪ್ರಮೇಯ ಕೂ ಗೂ ಮೊದಲು ಕ್ಯಾಬ್ ಬುಕ್ಕಿಂಗ್ ಸೇವೆ ನೀಡುವ TaxiForSure ಕೋ ಫೌಂಡರ್ ಆಗಿದ್ದರು. 2015ರಲ್ಲಿ ಇದನ್ನು ಓಲಾ ಸಂಸ್ಥೆಗೆ ಮಾರಾಟ ಮಾಡಲಾಯಿತು. 2017ರಲ್ಲಿ Quoraದ ಬದಲಿಯಾಗಿ Vokalಅನ್ನು ಹುಟ್ಟು ಹಾಕಿದರು. ಇನ್ನು, ಮಯಾಂಕ್ ಏಷಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಪದವಿ ಪಡೆದಿದ್ದಾರೆ. ಇವರು Goodboxನ ಸಹ ಸಂಸ್ಥಾಪಕರು. Loca Ridea ಮತ್ತು Third Wave Coffeeಗೆ ಹೂಡಿಕೆ ಮಾಡಿದ್ದಾರೆ.
ಗೂಗಲ್ ಪ್ಲೇಸ್ಟೋರ್ನಲ್ಲಿ ಕೂ ಇದೆಯಾ?
ಹೌದು, ಕೂ ಆ್ಯಪ್ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, 4.7 ರೇಟಿಂಗ್ ಕೂಡ ನೀಡಲಾಗಿದೆ. ಭಾರತದ ಭಾಷೆಗಳಲ್ಲಿ ಬಳಕೆ ಆಗಲು ಇದು ಸಹಕಾರಿಯಾಗಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಕೂ ಆ್ಯಪ್ಅನ್ನು ಭಾರತದಲ್ಲಿ ಸುಮಾರು 25 ಲಕ್ಷ ಜನ ಡೌನ್ಲೋಡ್ ಮಾಡಿದ್ದಾರೆ. ಪೀಯೂಶ್ ಗೋಯಲ್ ಜತೆಗೆ ಐಟಿ ಸಚಿವ ರವಿ ಶಂಕರ್ ಪ್ರಸಾಸ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಕೂಡ ಕೂ ಬಳಸುತ್ತಿದ್ದಾರೆ.
ಸರ್ಕಾರದವರು ಕೂ ಗೆ ಬರೋಕೆ ಕಾರಣವೇನು?
ಟ್ವಿಟ್ಟರ್ ಹಾಗೂ ಭಾರತ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಿದೆ. ರೈತರ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ 257 ಖಾತೆಗಳನ್ನು ರದ್ದು ಮಾಡುವಂತೆ ಭಾರತ ಸರ್ಕಾರ ಟ್ವಿಟ್ಟರ್ಗೆ ಸೂಚಿಸಿತ್ತು. ಈ ಖಾತೆಗಳನ್ನು ರದ್ದು ಮಾಡಿ ಕೆಲವೇ ಹೊತ್ತಿನಲ್ಲಿ ಬ್ಯಾನ್ ಹಿಂಪಡೆದಿತ್ತು. ಇದು ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಟ್ವಿಟ್ಟರ್ ಬದಲಿಗೆ ಕೂ ಬಳಸುವ ಆಲೋಚನೆ ಸರ್ಕಾರದ್ದು ಎನ್ನಲಾಗಿದೆ.
ಟ್ವಿಟ್ಟರ್ಗೂ ಕೂ ಗೂ ಏನು ವ್ಯತ್ಯಾಸ?
ಟ್ವಿಟ್ಟರ್ ಹಾಗೂ ಕೂ ಎರಡಕ್ಕೂ ಸಾಮ್ಯತೆ ಇದೆ. ಕೂನಲ್ಲಿ ಹಿಂದಿ ಸೇರಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ನೀವು ಪೋಸ್ಟ್ ಮಾಡಬಹುದು. ಇದಕ್ಕಾಗಿಯೇ ಇದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ