JDSಗೆ ಮರುಜನ್ಮ ನೀಡಿದ್ದೆವು.. ಆದ್ರೆ ಅವರು ‘ಕೈ’ ಹಿಡಿದು ಹಾಳಾಗಿ ಹೋದ್ರು: ರೇಣುಕಾಚಾರ್ಯ ಟಾಂಗ್

ಕಾಂಗ್ರೆಸ್ ಮತ್ತೆ ಜೆಡಿಎಸ್ ಯಾವಾಗ ಲವ್ ಮಾಡ್ತಾರೆ, ಯಾವಾಗ ಕೂಡಿಕೆ ಮಾಡ್ಕೋತಾರೆ, ಯಾವಾಗ ಮದ್ವೆ ಆಗ್ತಾರೆ, ಯಾವಾಗ ತಾಳಿ ಕಟ್ತಾರೆ, ಯಾವಾಗ ಡಿವೋರ್ಸ್​ ಕೊಡ್ತಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು

JDSಗೆ ಮರುಜನ್ಮ ನೀಡಿದ್ದೆವು.. ಆದ್ರೆ ಅವರು ‘ಕೈ’ ಹಿಡಿದು ಹಾಳಾಗಿ ಹೋದ್ರು: ರೇಣುಕಾಚಾರ್ಯ ಟಾಂಗ್
ರೇಣುಕಾಚಾರ್ಯ, ಕುಮಾರಸ್ವಾಮಿ

Updated on: Dec 09, 2020 | 2:15 PM

ಬೆಂಗಳೂರು: ಕುಮಾರಸ್ವಾಮಿಯವರಿಗೆ ಮತ್ತು ಜೆಡಿಎಸ್ ಪಕ್ಷಕ್ಕೆ ಮರುಜೀವ ಕೊಟ್ಟಿದ್ದು ಬಿಜೆಪಿ. ಆದರೆ, ಅವ್ರು ಬಿಜೆಪಿಗೇ ಮೋಸ ಮಾಡಿದ್ರು. ಅದೇ ಶಾಪ ಅವರಿಗೆ ಇನ್ನೂ ತಟ್ತಾ ಇದೆ. ಆದ್ದರಿಂದಲೇ ಜೆಡಿಎಸ್​ 30-35 ಸ್ಥಾನಕ್ಕೆ ಕುಸಿದಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಜೆಡಿಎಸ್​ ಪಕ್ಷಕ್ಕೆ ಇದು ಆತ್ಮಾವಲೋಕನದ ಸಮಯ. 2004ರಲ್ಲಿ ಕಾಂಗ್ರೆಸ್​ಗೆ ಬೆಂಬಲ ಕೊಟ್ಟು ಎಡವಟ್ಟು ಮಾಡಿಕೊಂಡಿದ್ರು. ನಂತರ ಬಿಜೆಪಿಗೆ ಬೆಂಬಲ ಕೊಟ್ಟು ಮರುಜೀವ ಪಡೆದುಕೊಂಡ್ರು. ಆದ್ರೆ ಅದನ್ನ ಮರೆತು ನಮಗೆ ಮೋಸಮಾಡಿದ್ದೇ ಅವರಿಗೆ ಮುಳುವಾಯ್ತು. ಅದರ ಫಲ ಈಗ ಅನುಭವಿಸ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಅವ್ರು ಯಾವಾಗ ಹೇಗಿರ್ತಾರೆ ಅಂತ ಗೊತ್ತೇ ಆಗಲ್ಲ
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಯಾವ ರೀತಿಯಲ್ಲಿ ಜೆಡಿಎಸ್​ ಪಕ್ಷವನ್ನು ಒಡೆಯುತ್ತಿದೆ ಎನ್ನುವುದನ್ನು ಅವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅವರು ಅಪ್ಪಿತಪ್ಪಿ ಕಾಂಗ್ರೆಸ್ ಜೊತೆ ಇನ್ನೂ ಮುಂದುವರೆದ್ರೆ ಇಡೀ ಪಕ್ಷವೇ ಮುಳುಗಿ ಹೋಗುತ್ತೆ. ಆದ್ರೆ ಕಾಂಗ್ರೆಸ್ ಮತ್ತೆ ಜೆಡಿಎಸ್ ಯಾವಾಗ ಲವ್ ಮಾಡ್ತಾರೆ, ಯಾವಾಗ ಕೂಡಿಕೆ ಮಾಡ್ಕೋತಾರೆ, ಯಾವಾಗ ಮದ್ವೆ ಆಗ್ತಾರೆ, ಯಾವಾಗ ತಾಳಿ ಕಟ್ತಾರೆ, ಯಾವಾಗ ಡಿವೋರ್ಸ್​ ಕೊಡ್ತಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು ಎಂದು ಕಾಲೆಳೆದಿದ್ದಾರೆ.

ಬಿಜೆಪಿಗೆ ಯಾವ ಬಿ ಟೀಮ್​ ಕೂಡ ಬೇಡ
ಕುಮಾರಸ್ವಾಮಿಯವರಿಗೆ ಈಗ ಬಿಜೆಪಿ ಜೊತೆ ಇದ್ರೆ ಗೌರವ ಹೆಚ್ಚುತ್ತೆ ಅಂತ ಅನ್ನಿಸಿದೆ. ಆದರೆ ಬಿಜೆಪಿ ಯಾವತ್ತೂ ಜೆಡಿಎಸ್​ ಪಕ್ಷವನ್ನು ಬಿ ಟೀಮ್ ಅಂತ ಪರಿಗಣಿಸಿಲ್ಲ. ಬಿಜೆಪಿ ಸ್ವಂತ ಶಕ್ತಿಯಿಂದ ಸರ್ಕಾರ ಮಾಡ್ತಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಮ್ಮ ಪ್ರಧಾನಿ ರೈತಪರ ಯೋಜನೆಗಳನ್ನು ತಂದಿದ್ದಾರೆ. ರೈತರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್, ಜೆಡಿಎಸ್ ಎರಡಕ್ಕೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದಲ್ಲಿ ರೈತರ ಆತ್ಮಹತ್ಯೆ ಆಗಿತ್ತು. ಆವಾಗ ಸಿದ್ದರಾಮಯ್ಯ ಯಾವ ರೈತರ ಮನೆಗಳಿಗೂ ಭೇಟಿ ನೀಡಿಲ್ಲ. ಕಾಂಗ್ರೆಸ್​ ಅವರು ಬರೀ ನಕಲಿ. ರಾಹುಲ್ ಗಾಂಧಿ ಚೆಕ್ ಕೊಟ್ಟಿದ್ದೂ ನಕಲಿ ಎಂದು ಟೀಕಿಸಿದ್ದಾರೆ.

ರೇಣುಕಾಚಾರ್ಯ

ನಿಜವಾದ ಹಿಂದೂಗಳು ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸುವುದಿಲ್ಲ
ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ಕಾಯ್ದೆ ಬಗ್ಗೆ ವಿರೋಧ ಮಾಡುವವರು ನಿಜವಾದ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿರುವ ರೇಣುಕಾಚಾರ್ಯ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಈ ಬಾರಿ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ. ಮುಂದಿನ ಅಧಿವೇಶನದಲ್ಲಿ ಲವ್​ ಜಿಹಾದ್​ ಸಂಬಂಧಿತ ಕಾಯ್ದೆ ತರುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಎರಡೂ ಬಿಲ್​ಗಳನ್ನು ಸ್ವಾಗತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋವನ್ನು ನಾವು ತಾಯಿಯಂತೆ ಪೂಜಿಸುತ್ತೇವೆ. ಗೋಹತ್ಯೆ ನಿಷೇಧ ಮಾಡುವ ಕುರಿತು ನಿಜವಾದ ಹಿಂದೂಗಳು ವಿರೋಧ ಮಾಡುವುದಿಲ್ಲ. ಅದೇರೀತಿ ಲವ್ ಜಿಹಾದ್ ಹೆಸರಿನಲ್ಲಿ ಕಾಂಗ್ರೆಸ್​ನವರ ಮನೆಯಲ್ಲಿ ಮೋಸ ನಡೆದ್ರೆ ಅವರಿಗೆ ನೋವು ಗೊತ್ತಾಗುತ್ತೆ. ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ. ಆದ್ರೆ ಈ ಎರಡೂ ಕಾಯ್ದೆಗಳು ಬರಲೇಬೇಕು ಎಂದು ಹೇಳಿದ್ದಾರೆ.

ಈ ಕಾಯ್ದೆಗಳ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸರಿಯಿಲ್ಲ. ಭಾರತಾಂಬೆಯ ಮಕ್ಕಳಾಗಿದ್ದರೆ, ಹಿಂದುತ್ವದ ಪರವಾಗಿದ್ದರೆ ಕಾಯ್ದೆಯನ್ನು ಬೆಂಬಲಿಸಿ. ಈ ಬಿಲ್ ವಿರೋಧ ಮಾಡುವವರು ನಿಜವಾದ ಭಯೋತ್ಪಾದಕರು ಹಾಗು ದೇಶದ್ರೋಹಿಗಳು ಎಂದು ಕಿಡಿಕಾರಿದ್ದಾರೆ.

ಇಂದಿನಿಂದ 7 ದಿನಗಳ ಕಾಲ ಚಳಿಗಾಲದ ಅಧಿವೇಶನ: ಮಂಡನೆಯಾಗತ್ತಾ ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆ?

Published On - 2:02 pm, Wed, 9 December 20