
ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೂರೂ ಪಕ್ಷಗಳಿಂದ ಭಾರಿ ಹಣಾಹಣಿ ನಡೆಯುತ್ತಿದೆ. ಇದೀಗ, ಮೂರೂ ಪಕ್ಷಗಳು ಕ್ಷೇತ್ರದಲ್ಲಿರುವ ಮದಲೂರು ಕೆರೆಯನ್ನು ಚುನಾವಣೆಯ ಕೇಂದ್ರಬಿಂದು ಮಾಡಿಕೊಂಡಿವೆ. ಹೌದು, ಶಿರಾ ಕ್ಷೇತ್ರದ ಮತದಾರರನ್ನು ಸೆಳೆಯಲು ಮದಲೂರು ಕೆರೆಯೇ ಮೂಲಾಧಾರವಾಗಿದೆ. ಮೂರು ಪಕ್ಷಗಳ ಗೆಲುವಿನ ಕೀಲಿ ಕೈ ಆಗಿ ಮದಲೂರು ಕೆರೆ ಪರಿವರ್ತನೆಯಾಗಿದೆ.
ಸುಮಾರು 520 ಎಕರೆ ಪ್ರದೇಶದಲ್ಲಿರುವ ಈ ಕೆರೆ ಇಡೀ ಶಿರಾ ಉಪಚುನಾವಣೆಯ ಕೇಂದ್ರಬಿಂದು. ಮದಲೂರು ಕೆರೆ ನಡುವೆ ಕೃಷ್ಣಾ ಕೊಳ್ಳ- ಕಾವೇರಿ ಕೊಳ್ಳ ಗೊಂದಲ ಸೃಷ್ಟಿಯಾಗಿದೆ.
ಹೇಮಾವತಿ ನದಿಯಿಂದ ಮದಲೂರು ಕೆರೆಗೆ ಈ ಹಿಂದೆ ನೀರು ಹರಿಸಲಾಗಿತ್ತು. ಆದರೆ, ಹೇಮಾವತಿ ನದಿ ನೀರು ಕಾವೇರಿ ಕೊಳ್ಳದ ವ್ಯಾಪ್ತಿ ಎಂಬ ಕಾರಣಕ್ಕೆ ಅದನ್ನು ಅರ್ಧಕ್ಕೆ ಸ್ಥಗಿತ ಗೊಳಿಸಲಾಗಿತ್ತು.
ಇದೀಗ, ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲು ಯೋಜನೆ ರೂಪಿಸಲಾಗ್ತಿದೆ. ಈ ಹೆಗ್ಗಳಿಕೆಯನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿವೆ. ಶಿರಾದ ಜನರು ಮದಲೂರು ನೀರನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಮದಲೂರು ಕೆರೆಗೆ ನೀರು ಹರಿಸುವ ಕ್ರೆಡಿಟ್ ಪಡೆದುಕೊಳ್ಳಲು ಮೂರೂ ಪಕ್ಷಗಳು ನಾ ಮುಂದು ತಾ ಮುಂದು ಎಂದು ಸೆಣಸಾಡುತ್ತಿವೆ.
‘ಮದಲೂರಿನಲ್ಲೇ ಕಾರ್ಯಕ್ರಮ ಮಾಡ್ತಿರೋದು ಯಾಕಂದ್ರೆ’
ಜೆಡಿಎಸ್ಗೆ ಮತ ಹಾಕಿದ್ರೆ ಕುಮಾರಣ್ಣ ಸಿಎಂ ಆಗ್ತಾರಾ? ಆಗೋಲ್ಲ!
ಕಾಂಗ್ರೆಸ್ಗೆ ವೋಟು ಹಾಕಿದ್ರೆ ಡಿಕೆಶಿ ಸಿಎಂ ಆಗ್ತಾರಾ ಆಗಲ್ಲ? ಕಾಂಗ್ರೆಸ್ ಪಕ್ಷಕ್ಕೆ ಒಂದು ಸೀಟ್ ಹೆಚ್ಚಾಗಬಹುದು ಅಷ್ಟೇ.. ಕಾಂಗ್ರೆಸ್, JDSಗೆ 1 ವೋಟ್ ಹಾಕಿ ಯಾಕೆ ವೇಸ್ಟ್ ಮಾಡ್ತೀರಾ? ಎಂದು ಮದಲೂರಿನಲ್ಲಿ ಬಿಜೆಪಿ ಪ್ರಚಾರದ ವೇಳೆ ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ.
ಜೊತೆಗೆ, ನಾವು ಮದಲೂರಿನಲ್ಲೇ ಕಾರ್ಯಕ್ರಮ ಮಾಡ್ತಿರೋದು ಯಾಕಂದ್ರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಕಾರಣದಿಂದ ಮದಲೂರು ಕೆರೆ ಭರ್ತಿಯಾಗಲಿದೆ ಎಂಬ ಸಂದೇಶ ನೀಡಲು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
‘ಮದಲೂರು ಕೆರೆಗೆ ನೀರು ತರುತ್ತೇವೆ ಎಂದು ಹೇಳುತ್ತಿದ್ದರು’
ಮದಲೂರಿನಲ್ಲಿ ರಾಜ್ಯ BJP ಉಪಾಧ್ಯಕ್ಷ ವಿಜಯೇಂದ್ರ ಮದಲೂರು ಕೆರೆಗೆ ನೀರು ತರುತ್ತೇವೆ ಎಂದು ಹೇಳುತ್ತಿದ್ದರು. ಎರಡೂ ಪಕ್ಷಗಳಿಗೆ ಬಹಿರಂಗ ಸವಾಲು ಹಾಕ್ತೇನೆ ಚರ್ಚೆಗೆ ಬನ್ನಿ. ಶಾಸಕರಾದ್ರಿ, ಮಂತ್ರಿಯಾದ್ರಿ ನೀರು ತರೋದಕ್ಕೆ ಆಯ್ತಾ? ಆಗಿಲ್ಲ.
ಜನರ ನೀರಿನ ಬವಣೆ ನೀಗಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗಲಿಲ್ಲ. ಹತಾಶರಾಗಿ ಕಣ್ಣೀರು ಹಾಕುವ ಕೆಲಸ ಮಾಡುತ್ತಾರೆ ಎಂದು ಕಟಕಿಯಾಡಿದರು. ಆದರೆ ಬಿಜೆಪಿ ಇಲ್ಲಿಗೆ ಕಣ್ಣೀರು ಹಾಕೋದಕ್ಕೆ ಬಂದಿಲ್ಲ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದಕ್ಕೆ ಬಂದಿದ್ದೇವೆ ಎಂದು ಹೇಳಿದರು.
‘ಇನ್ನೊಂದು 6 ತಿಂಗಳಲ್ಲಿ ಮದಲೂರು ಕೆರೆಗೆ ನೀರು’
ಈ ನಡುವೆ, ಮದಲೂರು ಕೆರೆಗೆ 30 ವರ್ಷಗಳಿಂದ ಕೆರೆಗೆ ನೀರು ತುಂಬಿಲ್ಲ. 300 ಜನ ರೈತರು ಸಿಎಂಗೆ ನಾವು ಹಿಂದೆಯೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಇನ್ನೊಂದು 6 ತಿಂಗಳಲ್ಲಿ ಮದಲೂರು ಕೆರೆಗೆ ನೀರು ತುಂಬುವ ಕೆಲಸ ಯಡಿಯೂರಪ್ಪ ಮಾಡಲಿದ್ದಾರೆ. ನೂರಾರು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಡಿಯೂರಪ್ಪರಿಂದ ಮಾತ್ರ ಸಾಧ್ಯ. ಹಿಂದೆ, ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಈ ಯೋಜನೆಗೆ ಅವರೇ ಚಾಲನೆ ನೀಡಿದ್ರು. ಇದೀಗ, ಯಡಿಯೂರಪ್ಪ ಪಾದಾರ್ಪಣೆ ಮಾಡಿದ್ದಾರೆ ಅಂದ್ರೆ ಕೆರೆಗೆ ನೀರು ತುಂಬುವುದು ಖಂಡಿತ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
‘6 ತಿಂಗಳಲ್ಲಿ ಕೆರೆ ತುಂಬಿಸಿ, ಉದ್ಘಾಟನೆ ಮಾಡ್ತೇನೆ’
ಮದಲೂರು ಕೆರೆ ತುಂಬಿಸಬೇಕು ಬಹಳ ವರ್ಷಗಳ ಕನಸು. ನನಸಾಗಬೇಕು ಅಂತ ಹೇಳ್ತಿದ್ದೀರಿ. ನಾನು ಹಿಂದೆ ಸಿಎಂ ಆದಾಗ ಮದಲೂರು ಕೆರೆ ಕಾಲುವೆ ನಿರ್ಮಾಣಕ್ಕೆ ಹಣ ನೀಡಿದ್ದೆ. ಇನ್ನು ಆರು ತಿಂಗಳ ಒಳಗಾಗಿ ಮದಲೂರು ಕೆರೆಯನ್ನು ತುಂಬಿಸಿ ನಾನೇ ಬಂದು ಉದ್ಘಾಟನೆ ಮಾಡ್ತೇನೆ. ನಿಮ್ಮ ಯಡಿಯೂರಪ್ಪ ಒಂದು ಸಾರಿ ಭರವಸೆ ಕೊಟ್ಟರೆ ಅದು ಇದುವರೆಗೆ ಹುಸಿಯಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಇದೀಗ ಹೇಳಿದ್ದಾರೆ.