
ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ಬುಡಮೇಲು ಆಗಿತ್ತು, ಸ್ತಬ್ಧಗೊಂಡಿತ್ತು. ಅದರಲ್ಲೂ ಹೆಚ್ಚು ಜನ ಸೇರುವ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಜೀವ ಕಳೆ ಬರುತ್ತಿದೆ. ಅರೆ ಬರೆಯಾದರೂ ಚಿತ್ರಮಂದಿರಗಳು ಕಾರ್ಯೋನ್ಮುಖವಾಗಿವೆ. ಮುಂದೆಂದೂ ಇಂತಹ ಪರಿಸ್ಥಿತಿ ಬಾರದಿರಲಿ, ಮನರಂಜನೆ ನಿರಂತರವಾಗಿರಲಿ ಎಂದು ಆಶಿಸುತ್ತಾ ಚಿತ್ರ ಪ್ರೇಮಿಗಳು ಸಿನಿಮಾ ಹಾಲ್ಗಳತ್ತ ಮುಖಮಾಡಿದ್ದಾರೆ.
ಬಿಕೋ ಎನ್ನುತ್ತಿದ್ದ ಚಿತ್ರ ಮಂದಿರಗಳಲ್ಲಿ ಇನ್ನು ನಿರಂತರ ಚಿತ್ರ ಸಂತೆ:
ಕೊರೊನಾದಿಂದಾಗಿ ಸ್ಥಗಿತವಾಗಿದ್ದ ಸಿನಿಮಾ ಪ್ರದರ್ಶನ ಎಂಟು ತಿಂಗಳ ಬಳಿಕ ಮತ್ತೆ ಶುರುವಾಗಿದೆ. ಇಂದಿನಿಂದ ಥಿಯೇಟರ್, ಮಾಲ್ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಹೀಗಾಗಿ ನಗರದ ಬಹುತೇಕ ಮಾಲ್ಗಳಲ್ಲಿ ಚಿತ್ರಪ್ರದರ್ಶನದ ಅಬ್ಬರ ಜೋರಾಗಿದೆ. ಥಿಯೇಟರ್ ಗಿಂತ ಮಾಲ್ಗಳಲ್ಲೇ ಅಬ್ಬರ ಹೆಚ್ಚಾಗಿದೆ.
ಲವ್ ಮಾಕ್ ಟೈಲ್, ಶಿವಾಜಿ ಸುರತ್ಕಲ್ ಸೇರಿದಂತೆ ಹಲವು ಚಿತ್ರಗಳು ರೀ-ರಿಲೀಸ್ ಆಗುತ್ತಿವೆ. ಓರಾಯನ್ ಮಾಲ್, ಜಿಟಿ ವರ್ಲ್ಡ್ ಮಾಲ್, ವೈಷ್ಣವಿ ಮಾಲ್, ವೆಗಾಸಿಟಿ, ಗರುಡ ಮಾಲ್ನಲ್ಲಿ ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಏಳೆಂಟು ತಿಂಗಳಿನಿಂದ ಸಿನಿಮಾ ಮಿಸ್ ಮಾಡಿಕೊಂಡವರು, ಟಿಕೆಟ್ ಬುಕ್ಕಿಂಗ್ಗೆ ಮುಂದಾಗಿದ್ದಾರೆ.
ಕೊರೊನಾ ರೂಲ್ಸ್ಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿತ್ರ ಪ್ರದರ್ಶನಕ್ಕೆ ತಯಾರಿ ನಡೆದಿದೆ. ಹೀಗಾಗಿ ಪ್ರೇಕ್ಷಕರು ಯಾವುದೇ ಆತಂಕ, ಅನುಮಾನವಿಲ್ಲದೆ ಸಿನಿಮಾ ನೋಡಲು ಬರಬಹುದು ಎಂದು ಮಾಲ್ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪ್ರದರ್ಶನಕ್ಕೆ ಸಿಂಗಾರಗೊಳ್ಳುತ್ತಿವೆ ಗಾಂಧಿನಗರದ ಚಿತ್ರಮಂದಿರಗಳು