ಮುಂಬೈ: ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಬಿಎಸ್ಇ ಲಿಸ್ಟೆಡ್ ಷೇರುಗಳು 3.72 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದ್ದು, ಹೂಡಿಕೆದಾರರ 3.7 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತು ಕೊಚ್ಚಿ ಹೋಗಿದೆ.
ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ, ಎರಡನೇ ಅಲೆಯ ಆತಂಕದಲ್ಲಿ ಹೂಡಿಕೆದಾರರು ಇದ್ದಾರೆ. ಆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 1,145 ಪಾಯಿಂಟ್ ಅಥವಾ 2.25 ಪರ್ಸೆಂಟ್ ಕೆಳಗಿಳಿದು, 49,744.32 ಪಾಯಿಂಟ್ ನಲ್ಲಿ ವ್ಯವಹಾರ ಮುಗಿಸಿದೆ.
ನಿಫ್ಟಿ 306 ಪಾಯಿಂಟ್ ಅಥವಾ 2.04 ಪರ್ಸೆಂಟ್ ಇಳಿಕೆಯಾಗಿ, 14,675.70 ಪಾಯಿಂಟ್ನೊಂದಿಗೆ ವಹಿವಾಟು ಮುಗಿಸಿದೆ. ಒಟ್ಟಾರೆಯಾಗಿ ಬಿಎಸ್ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ 203.98 ಲಕ್ಷ ಕೋಟಿ ರೂಪಾಯಿಯಿಂದ 200.26 ಲಕ್ಷ ಕೋಟಿಗೆ ಇಳಿದಿದ್ದು, ಹೂಡಿಕೆದಾರರು 3.7 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಡಿಸೆಂಬರ್ 21, 2020ರಂದು 1407 ಪಾಯಿಂಟ್ ಕುಸಿತ ಕಂಡಿತ್ತು ಸೆನ್ಸೆಕ್ಸ್. ಆ ನಂತರ ಒಂದು ದಿನದಲ್ಲಿ ಕಾಣುತ್ತಿರುವ ಅತಿ ದೊಡ್ಡ ಇಳಿಕೆ ಇದಾಗಿದೆ. 2015ರಿಂದ ಈಚೆಗೆ 18 ಬಾರಿ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ ಕುಸಿದಿದೆ. ಅದರಲ್ಲೂ 1979ರ ನಂತರ ಒಂದೇ ದಿನದಲ್ಲಿ ಮಾರ್ಕೆಟ್ ಅತಿ ಹೆಚ್ಚು ನಷ್ಟ ಕಂಡಿದ್ದು ಮಾರ್ಚ್ 23, 2020ರಲ್ಲಿ.
ದಿನಾಂಕ | ಕುಸಿತ |
23/3/2020 | 3,934.72 |
12/3/2020 | 2,919.26 |
16/3/2020 | 2713.41 |
4/5/2020 | 2002.27 |
9/3/2020 | 1941.67 |
18/3/2020 | 1709.58 |
24/8/2015 | 1624.51 |
28/2/2020 | 1448.37 |
21/1/2008 | 1408.35 |
21/12/2020 | 1406.73 |
ಸೋಮವಾರ ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಕಂಪೆನಿಗಳು
ಮಹೀಂದ್ರಾ ಅಂಡ್ ಮಹೀಂದ್ರಾ – ಶೇ 4.79
ಡಾ. ರೆಡ್ಡೀಸ್ ಲ್ಯಾಬ್ಸ್ – ಶೇ 4.53
ಟೆಕ್ ಮಹೀಂದ್ರಾ – ಶೇ 4.35
ಐಟಿಸಿ – ಶೇ 4.12
ಇಂಡಸ್ ಇಂಡ್ ಬ್ಯಾಂಕ್ – ಶೇ 4.03