Political Analysis | ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಬಿಜೆಪಿಯ ಮುಂದಿನ ನಡೆ ಏನು?

Puducherry Politics: ನಾಮನಿರ್ದೇಶಿತ ಮೂವರು ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿಗೆ ಪುದುಚೇರಿಯಲ್ಲಿ ಯಾವುದೇ ಬೆಂಬಲವಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ಬಿಜೆಪಿ ಸದಾ ಕಣ್ಣಿಟ್ಟಿತ್ತು.

Political Analysis | ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಬಿಜೆಪಿಯ ಮುಂದಿನ ನಡೆ ಏನು?
ಪುದುಚೇರಿ ವಿಧಾನಸಭೆ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 22, 2021 | 8:27 PM

ದೆಹಲಿ: ಪುದುಚೇರಿಯಲ್ಲಿ ವಿ.ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಸೋಮವಾರ ಪತನಗೊಂಡಿದೆ. ಬಹುಮತ ಸಾಬೀತುಪಡಿಸಲು ವಿಫಲಗೊಂಡ ನಾರಾಯಣಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೇನು ವಿಧಾನಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಇದ್ದು, ಪುದುಚೇರಿಯಲ್ಲಿ ಶೀಘ್ರವೇ ರಾಷ್ಟ್ರಪತಿ ಆಡಳಿತ ಬರಲಿದೆ.

ಕಳೆದ ಕೆಲವು ವಾರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ 6 ಶಾಸಕರು (ಡಿಎಂಕೆಯ ಒಬ್ಬರು ಶಾಸಕರು) ರಾಜೀನಾಮೆ ನೀಡಿದ್ದರಿಂದ ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಕಳೆದ ವರ್ಷ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಓರ್ವ ಶಾಸಕರನ್ನು ಕಾಂಗ್ರೆಸ್ ಅನರ್ಹಗೊಳಿಸಿತ್ತು. ಹೀಗಾಗಿ ಒಟ್ಟು 33 ಸದಸ್ಯ ಬಲದ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ 26ಕ್ಕೆ ಕುಸಿದಿತ್ತು. ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟದಲ್ಲಿ 12 ಸದಸ್ಯರಷ್ಟೇ ಉಳಿದರು. ಈ ಪೈಕಿ 9 ಮಂದಿ ಕಾಂಗ್ರೆಸ್, ಡಿಎಂಕೆಯ ಇಬ್ಬರು ಮತ್ತು ಒಬ್ಬ ಸ್ವತಂತ್ರ ಶಾಸಕನ ಬೆಂಬಲ ಕಾಂಗ್ರೆಸ್ ಪಕ್ಷಕ್ಕಿತ್ತು. ಬಹುಮತ ಸಾಬೀತು ವೇಳೆ ಸಮಬಲವಾದರೆ ಮಾತ್ರ ಸ್ಪೀಕರ್ ವಿ.ಪಿ.ಶಿವಕೋಲುಂಧು ಬಹುಮತದ ವೇಳೆ ಮತದಾನ ಮಾಡಬಹುದಾಗಿತ್ತು.

ಅದೇ ವೇಳೆ ವಿಪಕ್ಷಕ್ಕೆ 14 ಸದಸ್ಯರ ಬೆಂಬಲ ಇದೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಎನ್.ಎನ್.ರಂಗಸ್ವಾಮಿ ನೇತೃತ್ವದ ಆಲ್ ಇಂಡಿಯಾ ಎನ್​ಆರ್ ಕಾಂಗ್ರೆಸ್ (AINRC) ಪಕ್ಷದ 7 ಸದಸ್ಯರು, ಎಐಎಡಿಎಂಕೆ-4 ಮತ್ತು ಬಿಜೆಪಿಯ ಮೂರು ನಾಮನಿರ್ದೇಶಿತ ಶಾಸಕರು ವಿಪಕ್ಷದಲ್ಲಿದ್ದಾರೆ.

ಬಿಜೆಪಿ ಮತ್ತು ಕಿರಣ್ ಬೇಡಿಯಿಂದ ಸರ್ಕಾರಕ್ಕೆ ತೊಂದರೆ ಬಹುಮತ ಸಾಬೀತು ಮಾಡುವ ಮುನ್ನ ಸೋಮವಾರ ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಬಿಜೆಪಿ ಮತ್ತು ಕಿರಣ್ ಬೇಡಿ ಸರ್ಕಾರದ ಕಾರ್ಯಗಳಲ್ಲಿ ಮೂಗು ತೂರಿಸಿ ತೊಂದರೆ ಕೊಡುತ್ತಿದ್ದರು ಎಂದು ದೂರಿದ್ದಾರೆ.

ಫೆಬ್ರವರಿ 16ರಂದು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಕಿರಣ್ ಬೇಡಿ ಅವರು ನಮ್ಮ ಸರ್ಕಾರಕ್ಕೆ ತೊಂದರೆ ಕೊಡುತ್ತಿದ್ದರು ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಡಿಎಂಕೆ ಮತ್ತು ಸ್ವತಂತ್ರ ಶಾಸಕರ ಬೆಂಬಲದಿಂದ ನಾವು ಸರ್ಕಾರ ರಚಿಸಿದ್ದೆವು. ಪಾಂಡಿಚೇರಿಯ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದು ಸ್ಪಷ್ಟ. ಆದರೆ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕೇಂದ್ರ ಸರ್ಕಾರ ವಿಪಕ್ಷದೊಂದಿಗೆ ಸೇರಿ ಸರ್ಕಾರ ಪತನಗೊಳಿಸಲು ಯತ್ನಿಸಿತ್ತು. ಮೋದಿ ಸರ್ಕಾರ ಕೇಂದ್ರಾಡಳಿತ ಪ್ರದೇಶಕ್ಕೆ ಅನುದಾನ ನೀಡದೇ ಇರುವ ಕಾರಣ ಇಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ನಾವು ದ್ವಿಭಾಷಾ ನೀತಿ ಅನುಸರಿಸುತ್ತಿದ್ದೇವೆ ಆದರೆ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ.

ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಸತ್ಯ ಗೆದ್ದೇ ಗೆಲ್ಲುತ್ತದೆ. ಚುನಾಯಿತ ಸರ್ಕಾರವನ್ನು ಪತನಗೊಳಿಸಲು ಶಾಸಕರಿಗೆ ಹಣ ಕೊಟ್ಟು ಖರೀದಿಸುವುದು ರಾಜಕೀಯ ಹಾದರ. ಮುಂದಿನ ಚುನಾವಣೆಯಲ್ಲಿ ಪುದುಚೇರಿಯ ಜನರು ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ. ಬಹುಮತ ಯಾಚನೆಗೆ ಮುನ್ನವೇ ನಾರಾಯಣಸ್ವಾಮಿ ಮತ್ತು ಅವರ ಶಾಸಕರು ಸದನದಿಂದ ಹೊರನಡೆದಿದ್ದರು. ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಸ್ಪೀಕರ್ ಘೋಷಿಸಿದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದಾರೆ.

ಬಿಜೆಪಿಯ ಮುಂದಿನ ನಡೆ ಏನು? ನಾಮನಿರ್ದೇಶಿತ ಮೂವರು ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿಗೆ ಪುದುಚೇರಿಯಲ್ಲಿ ಯಾವುದೇ ಬೆಂಬಲವಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ಬಿಜೆಪಿ ಸದಾ ಕಣ್ಣಿಟ್ಟಿತ್ತು. ಜನವರಿಯಲ್ಲಿ ನಾರಾಯಣಸ್ವಾಮಿ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾದಾಗ ಬಿಜೆಪಿ ಅದನ್ನು ಉಪಯೋಗಿಸಿಕೊಂಡಿತು. ಸಚಿವ ನಮಸ್ಸಿವಾಯಂ ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದು ಇಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್. ಅಷ್ಟೇ ಅಲ್ಲದೆ ಪರ್ಯಾಯ ಸರ್ಕಾರ ರಚನೆಗಾಗಿ ಎಐಎನ್ಆರ್​ಸಿ ಮುಖ್ಯಸ್ಥ ಎನ್.ರಂಗಸ್ವಾಮಿ ಅವರನ್ನೂ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿತು.

ಕಿರಣ್ ಬೇಡಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ತೆರವುಗೊಳಿಸುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮಸ್ಸಿವಾಯಂ ಮತ್ತು ಪುದುಚೇರಿ ಬಿಜೆಪಿ ಅಧ್ಯಕ್ಷ ಸ್ವಾಮಿನಾಥನ್ ಅವರನ್ನು ಭೇಟಿಯಾಗಿದ್ದರು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

ಬಿಜೆಪಿ ಹಿರಿಯ ನಾಯಕ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಪುದುಚೇರಿ ರಾಜಕೀಯ ನಡೆಯನ್ನು ಗಮನಿಸುವಂತೆ ಪಕ್ಷ ಹೇಳಿತ್ತು. ಕರ್ನಾಟಕದ ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುವರ್ಣ ಅವರಿಗೆ ಪುದುಚೇರಿಯ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕಾರ್ಯ ವಹಿಸಲಾಗಿತ್ತು.

ನಾರಾಯಣಸ್ವಾಮಿ ಸರ್ಕಾರದ ಪತನವೇ ನಮ್ಮ ಆದ್ಯತೆ ಆಗಿತ್ತು. ಮುಂದಿನ ನಡೆ ಬಗ್ಗೆ ನಮ್ಮ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಪರ್ಯಾಯ ಸರ್ಕಾರ ರಚನೆ ಮಾಡಿದರೂ ಅದರ ಕಾಲಾವಧಿ ಕಡಿಮೆಯೇ ಇರುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ರಾಜ್ಯವೊಂದು ಸಿಕ್ಕಿ ಬಿಡುತ್ತದೆ. ಅದೇ ವೇಳೆ ಮುಂದಿನ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರು ಜನರ ಅನುಕಂಪ ಗಿಟ್ಟಿಸುವ ಸಾಧ್ಯತೆಯೂ ಇದೆ. ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಬಿಜೆಪಿಗೆ ಅನುಕೂಲವಾಗುತ್ತದೆ. ರಂಗಸ್ವಾಮಿ ಅವರ ಬೆಂಬಲಿಗರು ಪರ್ಯಾಯ ಸರ್ಕಾರವನ್ನು ಬಯಸುತ್ತಿದ್ದಾರೆ. ಯಾಕೆಂದರೆ ಈ ಮೂಲಕ ನಾರಾಯಣಸ್ವಾಮಿ ಅವರಿಗೆ ತಿರುಗೇಟು ಕೊಡುವುದು ಸುಲಭ. ರಂಗಸ್ವಾಮಿ ಅವರಿಗೆ ಹೆಚ್ಚಿನ ಸದಸ್ಯರ ಬೆಂಬಲವಿರುವುದರಿಂದ ನಾವು ಜಾಣ ನಡೆ ಸ್ವೀಕರಿಸಬೇಕು. ರಾಷ್ಟ್ರಪತಿ ಆಡಳಿತ ಬಂದರೆ ನಾರಾಯಣಸ್ವಾಮಿ ಅವರು ಜನರ ಅನುಕಂಪ ಗಿಟ್ಟಿಸುವುದನ್ನು ತಡೆಯಬಹುದು.

ತೆಲಂಗಾಣದ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರೀಗ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿ ವಹಿಸಿರುವುದರಿಂದ ಬಿಜೆಪಿಗೆ ಮತ್ತಷ್ಟು ಅನುಕೂಲವಾಗಿದೆ. ತಮಿಳಿಸೈ ಅವರು ತಮಿಳುನಾಡಿನವರು, ಅವರಿಗೆ ಅಲ್ಲಿನ ಸಂಸ್ಕೃತಿ ಗೊತ್ತು. ಅವರಿಗೆ ಸರ್ಕಾರವನ್ನು ನಿಭಾಯಿಸಲು ಸಾಧ್ಯ ಎಂಬುದು ಬಿಜೆಪಿಯ ದೃಢ ವಿಶ್ವಾಸ.

ಪುದುಚೇರಿಯಲ್ಲಿ ಈವರೆಗಿನ ರಾಜಕೀಯ ಬೆಳವಣಿಗೆ ಜನವರಿ 25: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ವಜಾಗೊಂಡ ಕೆಲವೇ ಗಂಟೆಗಳಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಎ.ನಮಸ್ಸಿವಾಯಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕ ಇ. ತೀಪೈದನ್ ಕೂಡಾ ರಾಜೀನಾಮೆ. ಮರುದಿನ ಇವರಿಬ್ಬರೂ ಬಿಜೆಪಿ ಸೇರಿದ್ದರು.

ಫೆಬ್ರವರಿ 15: ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣರಾವ್ ರಾಜೀನಾಮೆ. ರಾವ್ ಅವರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 11ಕ್ಕೆ ಇಳಿದಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಇನ್ನೊಬ್ಬ ಶಾಸಕ ಎನ್. ಧನವೇಲು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅನರ್ಹಗೊಂಡಿದ್ದರು.

ಫೆಬ್ರವರಿ 16: ಶಾಸಕ ಎ.ಜಾನ್ ಕುಮಾರ್ ರಾಜೀನಾಮೆ. ಮರುದಿನವೇ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ಪದಚ್ಯುತಿ. ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ.

ಫೆಬ್ರವರಿ 17: ಎನ್.ರಂಗಸ್ವಾಮಿ ನೇತೃತ್ವದ ವಿಪಕ್ಷಗಳು ಆಡಳಿತಾರೂಢ ಪಕ್ಷ ಬಹುಮತ ಸಾಬೀತುಪಡಿಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಸಲ್ಲಿಕೆ. ಆಡಳಿತಾರೂಢ ಪಕ್ಷವು ಅಲ್ಪಮತಕ್ಕೆ ಕುಸಿದಿದ್ದು ಎರಡೂ ಪಕ್ಷಗಳು ಈಗ 14 ಸದಸ್ಯರನ್ನು ಹೊಂದಿದ್ದಾರೆ.

ಫೆಬ್ರವರಿ 18: ತಮಿಳಿಸೈ ಸೌಂದರರಾಜನ್ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕಾರ. ಫೆಬ್ರವರಿ 22, ಸಂಜೆ 5ರಂದು ಬಹುಮತ ಸಾಬೀತುಪಡಿಸುವಂತೆ ಆಡಳಿತ ಪಕ್ಷಕ್ಕೆ ಆದೇಶ. ಸೋಮವಾರ ವಿಶೇಷ ಅಧಿವೇಶನ ನಡೆಸುವ ಬಗ್ಗೆ ಶಾಸನ ಸಭೆ ಕಾರ್ಯದರ್ಶಿ ಹೇಳಿಕೆ.

ಫೆಬ್ರವರಿ 21: ಕಾಂಗ್ರೆಸ್ ಪಕ್ಷದ ಕೆ. ಲಕ್ಷ್ಮಿನಾರಾಯಣನ್ ಮತ್ತು ಡಿಎಂಕೆ ಪಕ್ಷದ ವೆಂಕಟೇಶನ್ ರಾಜೀನಾಮೆ. ನಾರಾಯಣ ಸ್ವಾಮಿ ಅವರಿಂದ ಎರಡನೇ ಬಾರಿ ಶಾಸಕರ ಭೇಟಿ.

ಫೆಬ್ರವರಿ 22: ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲ

ಇದನ್ನೂ ಓದಿ: Puducherry Floor Test: ಪುದುಚೇರಿ: ಬಹುಮತ ಸಾಬೀತು ಪಡಿಸಲು ವಿಫಲ, ನಾರಾಯಣ ಸ್ವಾಮಿ ಸರ್ಕಾರ ಪತನ

Published On - 8:24 pm, Mon, 22 February 21