Pahalgam Attack: ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ; ಅಮಿತ್ ಶಾ ಖಡಕ್ ಎಚ್ಚರಿಕೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ಸಂಜೆ ಉಗ್ರರ ದಾಳಿ ನಡೆದಿದೆ. ಈ ಘಟನೆಯಲ್ಲಿ 12 ಪ್ರವಾಸಿಗರಿಗೆ ಗಾಯಗಳಾಗಿದ್ದು, ಕರ್ನಾಟಕದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬುವವರು ಮೃತಪಟ್ಟಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಿಂದಲೇ ಈ ಬಗ್ಗೆ ಮಾಹಿತಿ ಪಡೆದಿದ್ದು, ತುರ್ತು ಕ್ರಮಕ್ಕೆ ಆದೇಶಿಸಿದ್ದಾರೆ.

ನವದೆಹಲಿ, ಏಪ್ರಿಲ್ 22: ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿಯಲ್ಲಿ ಕರೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇಂದು ನಡೆದ ಉಗ್ರರ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ 12 ಜನರಿಗೆ ಗಾಯಗಳಾಗಿದ್ದು, ಓರ್ವ ಪ್ರವಾಸಿಗ ಮೃತಪಟ್ಟಿದ್ದಾರೆ. ಮೃತರಾದ ವ್ಯಕ್ತಿ ಶಿವಮೊಗ್ಗದವರು ಎಂದು ತಿಳಿದುಬಂದಿದೆ. ಕಾಶ್ಮೀರದ ಸೌಂದರ್ಯ ಸವಿಯಲು ತೆರಳಿದವರಿಗೆ ಈ ದಿನ ಅವರ ಜೀವನದ ಅತ್ಯಂತ ಕೆಟ್ಟ ದಿನವಾಗಿ ಪರಿವರ್ತನೆಯಾಗಿದೆ. ಈ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬದ ಸದಸ್ಯರ ಜೊತೆ ನಾವಿದ್ದೇವೆ. ಈ ಹೇಯ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇಂದು ಪಹಲ್ಗಾಮ್‌ನಲ್ಲಿ ನಡೆದ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋನ್ನಲ್ಲಿಯೇ ವಿವರಿಸಿದ್ದೇನೆ. ಸಂಬಂಧಿತ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದೇನೆ. ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶೀಘ್ರದಲ್ಲೇ ಶ್ರೀನಗರಕ್ಕೆ ತೆರಳುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
Anguished by the terror attack on tourists in Pahalgam, Jammu and Kashmir. My thoughts are with the family members of the deceased. Those involved in this dastardly act of terror will not be spared, and we will come down heavily on the perpetrators with the harshest consequences.…
— Amit Shah (@AmitShah) April 22, 2025
ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ; ಶಿವಮೊಗ್ಗದ ಪ್ರವಾಸಿಗ ಸಾವು
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿರುವ ಬೈಸರನ್‌ನಲ್ಲಿರುವ ರೆಸಾರ್ಟ್ ಪ್ರದೇಶದಲ್ಲಿ ಇಂದು ಸಂಜೆ ಭಯೋತ್ಪಾದಕರ ಗುಂಪೊಂದು ಗುಂಡು ಹಾರಿಸಿತು. ದಾಳಿಕೋರರು ಪ್ರವಾಸಿಗರ ಮೇಲೆ ಹತ್ತಿರದಿಂದ ಗುಂಡು ಹಾರಿಸಿದರು, ಇದರಿಂದಾಗಿ ಹಲವರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೈಸರನ್ ಹುಲ್ಲುಗಾವಲಿನಲ್ಲಿ ಈ ದಾಳಿ ನಡೆದಿದೆ. ಇದು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೇಲೆ ಮಾತ್ರ ತಲುಪಬಹುದಾದ ಒಂದು ಸುಂದರ ಸ್ಥಳವಾಗಿದ್ದು, ಆ ಸಮಯದಲ್ಲಿ ಪ್ರವಾಸಿಗರ ಗುಂಪೊಂದು ಭೇಟಿ ನೀಡುತ್ತಿತ್ತು. ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯ ಮಧ್ಯೆ ಈ ಘಟನೆ ನಡೆದಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಅವರು ಜಮ್ಮು ವಿಭಾಗದ ಮೇಲೆ ವಿಶೇಷ ಗಮನ ಹರಿಸಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆದೇಶಗಳನ್ನು ನೀಡಿದ್ದರು ಎಂಬುದು ಗಮನಾರ್ಹ ಸಂಗತಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ