‘ಸುರುಳಿ’ ಕಿರುಚಿತ್ರ ನಿರ್ಮಾಣ ಮಾಡಿದ ಹೇಮಂತ್ ರಾವ್; ಯೂಟ್ಯೂಬ್ನಲ್ಲಿ ಬಿಡುಗಡೆ
‘ಸುರುಳಿ’ ಕಿರುಚಿತ್ರದಲ್ಲಿ ನಿಧಿ ಹೆಗ್ಡೆ, ಹರ್ಷಿಲ್ ಕೌಶಿಕ್ ಮುಂತಾದವರು ಅಭಿನಯಿಸಿದ್ದಾರೆ. ಮನು ಅನುರಾಮ್ ನಿರ್ದೇಶನ ಮಾಡಿರುವ ಈ ಕಿರುಚಿತ್ರಕ್ಕೆ ಹೇಮಂತ್ ಎಂ. ರಾವ್ ಅವರು ಬಂಡವಾಳ ಹೂಡಿದ್ದಾರೆ. ‘ದಾಕ್ಷಾಯಣಿ ಟಾಕೀಸ್’ ಯೂಟ್ಯೂಬ್ ಮೂಲಕ ‘ಸುರುಳಿ’ ವೀಕ್ಷಣೆಗೆ ಲಭ್ಯವಾಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ನಿರ್ದೇಶಕ ಹೇಮಂತ್ ಎಂ. ರಾವ್ (Hemanth M Rao) ಅವರು ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಸಪ್ತ ಸಾಗರದಾಚೆ ಎಲ್ಲೋ’, ‘ಕವಲುದಾರಿ’ ಸಿನಿಮಾಗಳನ್ನು ನಿರ್ದೇಶಿಸಿ ಜನಮನ ಗೆದ್ದ ಅವರು ಈಗ ಬೇರೆ ನಿರ್ದೇಶಕರ ಸಿನಿಮಾಗಳಿಗೂ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದ ‘ಅಜ್ಞಾತವಾಸಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸಿನಿಮಾ ಮಾತ್ರವಲ್ಲದೇ ಕಿರುಚಿತ್ರಗಳನ್ನು (Kannada Short Films) ಕೂಡ ಹೇಮಂತ್ ರಾವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಸಿದ್ಧವಾಗಿರುವ ‘ಸುರುಳಿ’ (Suruli) ಶಾರ್ಟ್ ಫಿಲ್ಮ್ ಈಗ ಬಿಡುಗಡೆ ಆಗಿದೆ. ಹೇಮಂತ್ ರಾವ್ ಅವರ ‘ದಾಕ್ಷಾಯಣಿ ಟಾಕೀಸ್’ ಮೂಲಕ ಈ ಕಿರುಚಿತ್ರ ನಿರ್ಮಾಣ ಆಗಿದೆ.
‘ದಾಕ್ಷಾಯಿಣಿ ಟಾಕೀಸ್’ ಯೂಟ್ಯೂಬ್ ಚಾನೆಲ್ನಲ್ಲಿ ‘ಸುರುಳಿ’ ಶಾರ್ಟ್ ಫಿಲ್ಮ್ ರಿಲೀಸ್ ಆಗಿದೆ. ಇದರ ಅವಧಿ 33 ನಿಮಿಷ ಇದೆ. ಇದರಲ್ಲಿ ಒಂದು ಮಾನವೀಯ ಮೌಲ್ಯದ ಕಹಾನಿ ಇದೆ. ಯುವ ಸಿನಿಮಾ ಉತ್ಸಾಹಿಗಳ ಕನಸಿಗೆ ಹೇಮಂತ್ ಎಂ. ರಾವ್ ಅವರು ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿಯ ಹೆಸರಿನಲ್ಲಿ ‘ದಾಕ್ಷಾಯಣಿ ಟಾಕೀಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಭಿನ್ನವಾದ ಸಿನಿಮಾ ಮತ್ತು ಕಿರುಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ‘ಸುರುಳಿ’ ಕಿರುಚಿತ್ರ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಮನು ಅನುರಾಮ್ ಅವರು ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕಥೆ ಕೂಡ ಅವರೇ ಬರೆದಿದ್ದಾರೆ. ಕಾರ್ಪೋರೇಟ್ ಕೆಲಸದ ನಡುವೆ ಅವರು ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಶಾರ್ಟ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮನು ಅನುರಾಮ್ ಮತ್ತು ಹೇಮಂತ್ ರಾವ್ ಅವರ ಪರಿಚಯ ಆಗಿತ್ತು. ಈಗ ಅವರು ‘ಸುರುಳಿ’ ಕಿರುಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
ನಮ್ಮ ಬದುಕಿನಲ್ಲಿ ನಡೆಯುವ ಸಣ್ಣ ಘಟನೆಗಳು ನಮಗೆ ಗೊತ್ತಿಲ್ಲದ ಹಾಗೆ ಬೇರೆಯವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಅದರ ಸುಳಿವು ನಮಗೆ ಇರುವುದಿಲ್ಲ. ಅಂಥ ಕಹಾನಿಯನ್ನು ಮನು ಅನುರಾಮ್ ಅವರು ‘ಸುರುಳಿ’ ಮೂಲಕ ದೃಶ್ಯರೂಪಕ್ಕೆ ತಂದಿದ್ದಾರೆ.
‘ಸುರುಳಿ’ ಶಾರ್ಟ್ ಫಿಲ್ಮ್:
ಚರಣ್ ರಾಜ್ ಅವರು ಇದಕ್ಕೆ ಸಂಗೀತ ನೀಡಿದ್ದಾರೆ ಎಂಬುದು ವಿಶೇಷ. ಆ ಮೂಲಕ ಅವರು ಕಿರುಚಿತ್ರದ ಮೆರುಗು ಹೆಚ್ಚಿಸಿದ್ದಾರೆ. ಹರ್ಷಿಲ್ ಕೌಶಿಕ್, ನಿಧಿ ಹೆಗ್ಡೆ, ವಂಶಿಧಾರ್ ಭೋಗರಾಜು ಅವರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಅಮಲ್ ಅಂಬಿಕಾ ರಾಜೇಂದ್ರನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ಯಾಮ್ ವೆಂಕಟ್ ಮತ್ತು ವರುಣ್ ಗೋಲಿ ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.