Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
ಅಜ್ಞಾತವಾಸಿ ಸಿನಿಮಾ ವಿಮರ್ಶೆ: ಹಿರಿಯ ನಟ ರಂಗಾಯಣ ರಘು ಅವರ ಅಭಿನಯದ ‘ಶಾಖಾಹಾರಿ’ ಸಿನಿಮಾ ವಿಮರ್ಶಕರಿಂದ ಫುಲ್ ಮಾರ್ಕ್ಸ್ ಪಡೆದಿತ್ತು. ಈ ಚಿತ್ರದಲ್ಲಿ ರಂಗಾಯಣ ರಘು ಅವರ ಪಾತ್ರ ಗಮನ ಸೆಳೆದಿತ್ತು. ಈಗ ಅವರು ಮುಖ್ಯಭೂಮಿಕೆಯಲ್ಲಿರುವ ‘ಅಜ್ಞಾತವಾಸಿ’ ಸಿನಿಮಾ ರಿಲೀಸ್ ಆಗಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.

ಸಿನಿಮಾ: ಅಜ್ಞಾತವಾಸಿ. ಪಾತ್ರವರ್ಗ: ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು. ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ. ನಿರ್ಮಾಣ: ಹೇಮಂತ್ ಎಂ. ರಾವ್. ರೇಟಿಂಗ್: 3.5/5
‘ಶಾಖಾಹಾರಿ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದ ರಂಗಾಯಣ ರಘು ಒಂದು ಕಡೆ, ‘ಗುಳ್ಟು’ ರೀತಿಯ ಚಿತ್ರ ಕೊಟ್ಟ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮತ್ತೊಂದು ಕಡೆ. ಇವರಿಬ್ಬರೂ ಸೇರಿ ‘ಅಜ್ಞಾತವಾಸಿ’ ಸಿನಿಮಾ ಮಾಡಿದ್ದಾರೆ. ಟ್ರೇಲರ್ ಮೂಲಕ ಸಿನಿಮಾ ಗಮನ ಸೆಳೆದಿತ್ತು. ಇಂದು (ಏಪ್ರಿಲ್ 11) ಚಿತ್ರ ರಿಲೀಸ್ ಆಗಿದೆ. ಟ್ರೇಲರ್ನಲ್ಲಿರೋ ಸ್ಪೈಸಿ ಅಂಶಗಳು ಸಿನಿಮಾದಲ್ಲೂ ಇವೆಯೇ? ನಿರೀಕ್ಷೆ ಇಟ್ಟುಕೊಂಡು ಹೋಗುವ ಪ್ರೇಕ್ಷಕನಿಗೆ ಥ್ರಿಲ್ ಸಿಗುತ್ತದೆಯೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅದೊಂದು ಊರು. ಸದಾ ಒಂಟಿತನದಲ್ಲೇ ಕಳೆಯುವ ರಸ್ತೆಗಳಿಗೆ ಆಗಾಗ ಬರೋ ಪೋಸ್ಟ್ಮ್ಯಾನ್ ಬಿಟ್ಟರೆ ಅವುಗಳ ಒಂಟಿತನ ದೂರ ಮಾಡಲು ಅಲ್ಯಾರೂ ಇಲ್ಲ. ಆ ಊರಿಗೆ ಪೊಲೀಸ್ ಠಾಣೆ ಬಂದು 25 ವರ್ಷ ಕಳೆದರೂ ಅಲ್ಲಿ ಒಂದೇ ಒಂದು ಕೇಸ್ ಇಲ್ಲ. ಕೊಲೆ ಹಾಗಿರಲಿ, ತಲೆ ಉಪಯೋಗಿಸಿ ಕಳ್ಳತನ ಮಾಡುವವರೂ ಇಲ್ಲ. ಪೋಸ್ಟ್ ಮ್ಯಾನ್ ಕೆಲಸ ಕದಿಯಲು ಕಂಪ್ಯೂಟರ್ ಬಂದರೆ, ಪೊಲೀಸರಿಗೆ ಕೆಲಸ ಕೊಡಲು ಹಳ್ಳಿಯಲ್ಲಿ ಒಂದು ಸಾವು ಸಂಭವಿಸುತ್ತದೆ. ಸುಮ್ಮನೆ ಓಡಾಡೋ ಕೋಳಿ, ಬೆಟ್ಟದ ಮೇಲೆ ಪಿಂಡ ತಿನ್ನೋಕೆ ಬರೋ ಕಾಗೆ, ದೂರದ ಅಮೆರಿಕದಿಂದ ಬರೋ ಇ-ಮೇಲ್, ಎತ್ತಲೋ ಓಡಾಡುವ ಆನೆ, ಚಿಕನ್ ಸಾರು, ಶ್ರಾದ್ಧಕ್ಕೆ ಮಾಡೋ ಪಾಯಸ, ಅಲ್ಲೆಲ್ಲೋ ಒಡೆದ ಮಡಿಕೆ ಹೀಗೆ ಯಾವ ವಿಚಾರವನ್ನೂ ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಇವುಗಳ ಮಧ್ಯೆ ಅಜ್ಞಾತವಾಸಿ.
ಹುಟ್ಟೂರಿನಲ್ಲೇ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಅವರು ಒಮ್ಮೆ ಶಾಂತ ಚಿತ್ತನಾಗಿ, ಡಿಟೆಕ್ಟಿವ್ ಆಗಿ, ತಾಯಿ ಕಳೆದುಕೊಂಡ ಮಗನಾಗಿ, ಹೀಗೆ ಹಲವು ರೀತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುವ ಅವರು ಪಾತ್ರವನ್ನು ಜೀವಿಸಿದ್ದಾರೆ. ‘ರಂಗಿ ತರಂಗ’ ಮೂಲಕ ಜನಪ್ರಿಯತೆ ಪಡೆದ ಸಿದ್ದು ಮೂಲಿಮನಿ ಅವರಿಗೆ ಇಲ್ಲಿ ಒಂದು ಪ್ರಮುಖ ಪಾತ್ರ ಸಿಕ್ಕಿದ್ದು, ಅವರು ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಪಾವನಾ ಗೌಡ ಪ್ರೇಮಿಯಾಗಿ ಇಷ್ಟ ಆಗುತ್ತಾರೆ. ಶರತ್ ಲೋಹಿತಾಶ್ವ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಕೂಡ ತಮಗೆ ಸಿಕ್ಕ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ. 1995ರಲ್ಲಿ ಬಂದ ಅನಂತ್ ನಾಗ್ ನಟನೆಯ ‘ಬೆಳದಿಂಗಳ ಬಾಲೆ’ ಚಿತ್ರದಲ್ಲಿ ಒಂದು ಪಾತ್ರದ ಧ್ವನಿ ಮಾತ್ರ ಕೇಳುತ್ತದೆ, ಆದರೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇಲ್ಲಿಯೂ ನಿರ್ದೇಶಕರು ಅಂಥದ್ದೇ ಒಂದು ಪಾತ್ರ ಸೃಷ್ಟಿ ಮಾಡಿದ್ದಾರೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಟ್ಟ ನಿರ್ದೇಶಕರ ಜಾಣತನಕ್ಕೆ ಮೆಚ್ಚಲೇ ಬೇಕು.
ಜನಾರ್ಧನ್ ಚಿಕ್ಕಣ್ಣ ಅವರು ನಿರ್ದೇಶನದಲ್ಲಿ ಮತ್ತಷ್ಟು ಪಳಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕಥೆಯ ಮೇಲಿನ ಹಿಡಿತ, ಸಿನಿಮಾದ ನಿರೂಪಣೆ ಉತ್ತಮವಾಗಿ ಮಾಡಿದ್ದಾರೆ. ಚಿತ್ರಕಥೆ ಹೆಣೆದ ರೀತಿಯೂ ಭಿನ್ನವಾಗಿದೆ. ಮೊದಲ ಅರ್ಧ ಗಂಟೆ ತೆರೆಮೇಲೆ ಏನಾಗುತ್ತಿದೆ ಎಂಬ ಒಂದೇ ಒಂದು ಗುಟ್ಟನ್ನೂ ನಿರ್ದೇಶಕರು ಬಿಟ್ಟುಕೊಡುವುದಿಲ್ಲ. ನಂತರ ಎಲ್ಲವೂ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಟ್ರೇಲರ್ನಲ್ಲಿ ಒಂದು ಕೊಲೆ ನಡೆಯುತ್ತದೆ ಹಾಗೂ ಅದನ್ನು ಪೊಲೀಸರು ಹುಡುಕುತ್ತಾರೆ ಎಂಬುದನ್ನು ಮಾತ್ರ ತೋರಿಸಲಾಗಿದೆ. ಅಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಾ ಇರಲಿಲ್ಲ. ಇಲ್ಲಿ ಆಗುವುದು ಒಂದು ಕೊಲೆಯೇ ಆದರೂ, ಅದನ್ನು ಹೇಳುವ ರೀತಿ ಇದೆಯಲ್ಲ ಅದು ಭಿನ್ನ. ಕಾಡು ಇರಬೇಕು ಎಂದರೆ ಮನುಷ್ಯ ಸುಮ್ಮನಿರಬೇಕು, ಕೇವಲ ಕಮರ್ಷಿಯಲ್ ಬೆಳೆ ಹಿಂದೆ ಮಾತ್ರ ಹೋಗಬಾರದು ಎಂಬ ಸಂದೇಶವನ್ನು ಸೂಕ್ಷ್ಮವಾಗಿ ಹೇಳಲಾಗಿದೆ
ಸಿನಿಮಾದ ಕಥೆ 70 ಹಾಗೂ 90ರ ದಶಕದಲ್ಲಿ ಸಾಗುತ್ತದೆ. ಮಲೆನಾಡಿನ ಹಳ್ಳಿಯಲ್ಲೇ ಕಥೆ ಸಾಗುವುದರಿಂದ ರೆಟ್ರೋ ಕಥೆ ಮಾಡಲು ಅಷ್ಟು ಸಮಸ್ಯೆ ಆಗಿಲ್ಲ. ಹಳೆಯ ಕಾಲದ ಕಂಪ್ಯೂಟರ್, ಸಿಡಿ 100 ಬೈಕ್, ಹಳೆ ಕಾಲದ ಸೈಕಲಿಂಗ್, ಸಿನಿಮಾದ ಕಲರಿಂಗ್, ಅದ್ವೈತ ಗುರಮೂರ್ತಿ ಅವರ ಛಾಯಾಗ್ರಹಣ ರೆಟ್ರೋ ರಂಗನ್ನು ಮತ್ತಷ್ಟು ಹೆಚ್ಚಿಸಿದೆ. ಚರಣ್ ರಾಜ್ ಸಂಗೀತ ಸಿನಿಮಾದ ಕಾಡುವಿಕೆಯನ್ನು ಹೆಚ್ಚಿಸಿದೆ. ಈ ರೀತಿಯ ಕಥೆ ಹಾಗೂ ಅದಕ್ಕೆ ಸೂಕ್ತವಾದ ಪ್ರತಿಭೆಗಳನ್ನು ಹುಡುಕಿ ಸಿನಿಮಾ ನಿರ್ಮಾಣ ಮಾಡಿದ ಹೇಮಂತ್ ರಾವ್ ಅವರಿಗೆ ವಿಶೇಷ ಶ್ಲಾಘನೆಯ ಅಗತ್ಯ ಇದೆ.
ಹಾಗಾದರೆ ಸಿನಿಮಾ ಪರ್ಫೆಕ್ಟಾ? ಖಂಡಿತವಾಗಿಯೂ ಇಲ್ಲ. ಸಿನಿಮಾದಲ್ಲಿ ನಿರ್ದೇಶಕರು ಉದ್ದೇಶ ಪೂರ್ವಕವಾಗಿ ಕೆಲವು ದೃಶ್ಯಗಳನ್ನು ಎರಡೆರಡು ಬಾರಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮೆರಾ ಆ್ಯಂಗಲ್ ಬದಲಿಸಿದ್ದರೆ ಅದು ಹೊಸ ದೃಶ್ಯದ ರೀತಿ ಭಾಸವಾಗುತ್ತಿತ್ತು ಮತ್ತು ನಿರ್ದೇಶಕನ ಉದ್ದೇಶವೂ ಈಡೇರುತ್ತಿತ್ತು. ತಾವು ಪೊಲೀಸ್ ಎಂಬುದನ್ನೇ ಮರೆತ ಅನಂತ್ (ರವಿ ಗೌಡ) ಒಂದು ಹಂತದಲ್ಲಿ ಶರ್ಲಾಕ್ ಹೋಮ್ಸ್ ತರ ಆಡುತ್ತಾರೆ. ಪಾತ್ರವೊಂದು ಅಷ್ಟು ವೇಗ ಪಡೆದುಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಈ ರೀತಿಯ ಕೆಲವೇ ಕೆಲವು ಸಣ್ಣ ಪುಟ್ಟ ದೋಷಗಳನ್ನು ಮರೆತರೆ ಸಿನಿಮಾ ಇಷ್ಟವಾಗುತ್ತದೆ.
ಇದನ್ನೂ ಓದಿ: ಆಕರ್ಷಕವಾಗಿದೆ ‘ಅಜ್ಞಾತವಾಸಿ’ ಟ್ರೇಲರ್; ‘ಗುಳ್ಟು’ ನಿರ್ದೇಶಕನಿಗೆ ಹೇಮಂತ್ ರಾವ್ ಸಾಥ್
ಮಲಯಾಳಂ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾಗಳು ಬಂದರೆ ಜನರು ಅದನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದರು ಮತ್ತು ಕನ್ನಡಿಗರೂ ಅದನ್ನು ನೋಡಿ ಹೋಗಳುತ್ತಿದ್ದರು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗ ನಡೆದಿದೆ. ಒಟಿಟಿಯಲ್ಲಿ ನೋಡಿ ‘ನಾನು ಈ ಚಿತ್ರವನ್ನು ಥಿಯೇಟರ್ನಲ್ಲೇ ನೋಡಬೇಕಿತ್ತು’ ಎಂದು ಮರುಗೋ ಬದಲು…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:09 am, Fri, 11 April 25