ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟ್; ವಿವಾದದ ಬಳಿಕ ಉಲ್ಟಾ ಹೊಡೆದ ಅರಣ್ಯ ಇಲಾಖೆ
ಬಂಡೀಪುರ ಅರಣ್ಯದಲ್ಲಿ ಮಲಯಾಳಂ ಚಿತ್ರದ ಶೂಟಿಂಗ್ ನಡೆದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಿಂದ ಅರಣ್ಯ ಇಲಾಖೆಯ ದ್ವಂದ್ವ ನೀತಿ ಬಯಲಾಗಿದೆ .

ಕಾಡು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮಧ್ಯೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಚಿತ್ರ (Malayalam Movie) ತಂಡವೊಂದು ಬೀಡು ಬಿಟ್ಟು ಸಿನಿಮಾ ಶೂಟ್ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ತಂಡದವರಿಗೆ ಅನುಮತಿ ಇದೆಯೋ ಇಲ್ಲವೋ ಎನ್ನುವ ಪ್ರಶ್ನೆಯೂ ಎದುರಾಗಿತ್ತು. ಈಗ ಅರಣ್ಯ ಇಲಾಖೆ ಅನುಮತಿ ನೀಡಿರುವ ಸಂಪೂರ್ಣ ಮಾಹಿತಿ ಟಿವಿ9ಗೆ ಲಭ್ಯ ಆಗಿದೆ.
‘ಪೆನ್ನು ಕೇಸ್’ ಎಂಬ ಹೆಸರಿನ ಚಿತ್ರತಂಡಕ್ಕೆ ಶೂಟಿಂಗ್ಗೆ ಅನುಮತಿ ನೀಡಲಾಗಿದೆ. ಅಶ್ವಥಿ ನಡುತೋಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಫೆಬಿನ್ ಸಿದ್ಧಾರ್ಥ್ ನಿರ್ದೇಶನದ ‘ಪೆನ್ನು ಕೇಸ್’ ಚಿತ್ರದಲ್ಲಿ ನಿಖಿಲ್ ವಿಮಲ್, ಹಕಿಮ್ ಶಜಹನ್ ಅಭಿನಯಿಸುತ್ತಿದ್ದಾರೆ. ಸಿನಿಮಾ ತಂಡದವರು ಬಂಡೀಪುರ ಟೈಗರ್ ಕನ್ಸರವೇಷನ್ ಫೌಂಡೇಷನ್ಗೆ 1 ಲಕ್ಷ ಹಣ ನೀಡಿದ್ದಾರೆ.
ಅರಣ್ಯಾಧಿಕಾರಿ ಪ್ರಭಾಕರನ್ ಶೂಟಿಂಗ್ಗೆ ಅನುಮತಿ ನೀಡಿದ್ದಾರೆ. ಈ ಮೊದಲು ಯಾವುದೇ ಮಾಹಿತಿ ನೀಡದೆ ಅರಣ್ಯ ಇಲಾಖೆ ಕಣ್ಣಾಮುಚ್ಚಾಲೆ ಆಡಿತ್ತು. ಈಗ ಎಲ್ಲಾ ದಾಖಲೆಗಳು ಲಭ್ಯವಾಗಿವೆ. ಟಿವಿ9 ವರದಿ ಬಳಿಕ ತರಾತುರಿಯಲ್ಲಿ ಅರಣ್ಯ ಇಲಾಖೆ ದಾಖಲೆ ಸೃಷ್ಟಿ ಮಾಡಿತಾ ಎಂಬ ಪ್ರಶ್ನೆಯೂ ಮೂಡುವಂತೆ ಆಗಿದೆ.
ವಿವಾದ ಏಕೆ?
ಹುಲಿ ಸಂರಕ್ಷಿತ ವಲಯದಲ್ಲಿ ಚಿತ್ರೀಕರಣ ಮಾಡಲು ಮಲಯಾಳಂ ಸಿನಿಮಾಗೆ ನೀಡಲು ಅವಕಾಶ ಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ. ನಿಷೇಧಿತ ವಲಯ ಎಂದು ಗೊತ್ತಿದ್ದರೂ ಸಹ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಚರ್ಚೆ ಹುಟ್ಟುಹಾಕಿದೆ. ಇದು ವಿವಾದಕ್ಕೆ ಮೂಲಕ ಕಾರಣ.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಸುಣ್ಣ, ಮಲಯಾಳಿಗಳಿಗೆ ಬೆಣ್ಣೆ, ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ವಿರೋಧ
ಡಬಲ್ ಸ್ಟ್ಯಾಂಡ್
ಬಂಡೀಪುರ ಅರಣ್ಯ ಮುಖ್ಯಸ್ಥ ಪ್ರಭಾಕರನ್ ಅವರು ಈವರೆಗೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ವಿವಾದವಾಗುತ್ತಿದ್ದಂತೆ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇರೋದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಈ ಭಾಗದಲ್ಲಿ ಸಿನಿಮಾ ಶೂಟ್ ಮಾಡುವಂತಿಲ್ಲ. ‘ಚಿತ್ರದ ಶೂಟಿಂಗ್ಗೆ ಅನುಮತಿ ಕೊಟ್ಟಿದ್ದು ನಿಜ. ಆದರೆ, ದೇವಾಲಯದ ಆವರಣದಲ್ಲಿ ಮಾತ್ರ ಶೂಟ್ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ಬಿಂಬಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.