Puducherry: ಫೆ. 22ರಂದು ಬಹುಮತ ಸಾಬೀತು; ನಾಮನಿರ್ದೇಶಿತ ಶಾಸಕರು ಮತದಾನ ಮಾಡುವಂತಿಲ್ಲ: ನಾರಾಯಣಸ್ವಾಮಿ
Puducherry Floor Test: ಮುಖ್ಯ ಚುನಾವಣಾ ಆಯುಕ್ತರ ಮಾತನ್ನು ಉಲ್ಲೇಖಿಸಿದ ನಾರಾಯಣಸ್ವಾಮಿ, ನಾಮನಿರ್ದೇಶಿತ ಶಾಸಕರಿಗೆ ಮತದಾನದ ಹಕ್ಕು ಇದೆ .ಆದರೆ ಬಹುಮತ ಸಾಬೀತು ವೇಳೆ ಅವರಿಗೆ ಮತದಾನ ಚಲಾಯಿಸುವ ಹಕ್ಕು ಇರುವುದಿಲ್ಲ ಎಂದಿದ್ದಾರೆ.
ಪುದುಚೇರಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಶಾಸಕರು ರಾಜೀನಾಮೆ ನೀಡಿ ಹೊರನಡೆದ ಹಿನ್ನೆಲೆಯಲ್ಲಿ ಫೆಬ್ರವರಿ 22ರಂದು ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಆದೇಶಿಸಿದ್ದಾರೆ. ಈ ವೇಳೆ ನಾಮನಿರ್ದೇಶಿತ ಮೂವರು ಶಾಸಕರು ಮತದಾನ ಮಾಡುವಂತಿಲ್ಲ. ಈ ಬಗ್ಗೆ ನಾವು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬಹುಮತ ಸಾಬೀತು ಮಾಡುವ ಮುನ್ನ ಅಂದರೆ ಫೆಬ್ರವರಿ 21ರಂದು ಕಾಂಗ್ರೆಸ್ ಶಾಸಕರ ಸಭೆ ಕರೆದಿರುವುದಾಗಿ ಪುದುಚೇರಿ ಸಿಎಂ ನಾರಾಯಣಸ್ವಾಮಿ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ಮಾತನ್ನು ಉಲ್ಲೇಖಿಸಿದ ನಾರಾಯಣಸ್ವಾಮಿ, ನಾಮನಿರ್ದೇಶಿತ ಶಾಸಕರಿಗೆ ಮತದಾನದ ಹಕ್ಕು ಇದೆ. ಆದರೆ ಬಹುಮತ ಸಾಬೀತು ವೇಳೆ ಅವರಿಗೆ ಮತದಾನ ಚಲಾಯಿಸುವ ಹಕ್ಕು ಇರುವುದಿಲ್ಲ ಎಂದಿದ್ದಾರೆ. ಆದಾಗ್ಯೂ, ನಾಮನಿರ್ದೇಶಿತ ಶಾಸಕರಿಗೆ ಮತದಾನದ ಹಕ್ಕು ಇರುವುದಿಲ್ಲ ಎಂದು ನಾನು ನಂಬಿದ್ದೇನೆ. ವಿಪಕ್ಷದಲ್ಲಿ ಸಾಕಷ್ಟು ಸದಸ್ಯರು ಇಲ್ಲ ಎಂದಿದ್ದಾರೆ ನಾರಾಯಣಸ್ವಾಮಿ.
ಪುದುಚೇರಿ ವಿಧಾನ ಸಭೆಯಲ್ಲಿ 30 ಚುನಾಯಿತ ಸೀಟು ಮತ್ತು ಮೂರು ನಾಮನಿರ್ದೇಶಿತ ಸೀಟುಗಳಿವೆ. ನಾಮ ನಿರ್ದೇಶಿತ ಶಾಸಕರು ಬಿಜೆಪಿಗೆ ಸೇರಿದವರಾಗಿದ್ದಾರೆ. ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದರಿಂದ ಮತ್ತು ಒಬ್ಬರು ಸದಸ್ಯರು ಅನರ್ಹಗೊಂಡ ಕಾರಣ ವಿಧಾನಸಭಾ ಸದಸ್ಯರ ಸಂಖ್ಯೆ 28ಕ್ಕೆ ಇಳಿದಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ -10 ( ಸ್ಪೀಕರ್ ಸೇರಿ) ಡಿಎಂಕೆ- 3, ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್-7 , ಎಐಎಡಿಎಂಕೆ- 4 , ಬಿಜೆಪಿ-3(ನಾಮನಿರ್ದೇಶಿತ) ಮತ್ತು ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಒಬ್ಬರು ಸ್ವತಂತ್ರ ಸದಸ್ಯರಿದ್ದಾರೆ. ಬಹುಮತ ಸಂಖ್ಯೆ 15 ಆಗಿದೆ. ನಾರಾಯಣಸ್ವಾಮಿ ಅವರ ಆಪ್ತ ಜಾನ್ ಕುಮಾರ್ ಶಾಸಕ ರಾಜೀನಾಮೆ ನೀಡಿದ ಬೆನ್ನಲ್ಲೇ ನಾರಾಯಣಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಒತ್ತಾಯಿಸಿತ್ತು.
ವಿಪಕ್ಷ ಹಾಗೂ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ( ಎಐಎನ್ಆರ್ಸಿ ) ಮುಖ್ಯಸ್ಥ ಎನ್. ರಂಗಸ್ವಾಮಿ ಅವರು ನಾರಾಯಣ ಸ್ವಾಮಿ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಲು ಲೆಫ್ಟಿನೆಂಟ್ ಗವರ್ನರ್ ಗೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಈ ಮನವಿ ಮೇರೆಗೆ ಸರ್ಕಾರ ಫೆ.22ರಂದು ಬಹುಮತ ಸಾಬೀತುಪಡಿಸಬೇಕು ಎಂದು ಗವರ್ನರ್ ಆದೇಶಿಸಿದ್ದಾರೆ.
ಕಿರಣ್ ಬೇಡಿಯವರನ್ನು ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರನ್ನೇ ಪ್ರಭಾರ ಲೆಫ್ಟಿನೆಂಟ್ ಗವರ್ನರ್ರನ್ನಾಗಿ ಇಲ್ಲಿಗೆ ನೇಮಕ ಮಾಡಲಾಗಿದೆ. ಈ ಮಧ್ಯೆ ಆಡಳಿತ ರೂಢ ಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ 14ಕ್ಕೆ ಕುಸಿದಿದೆ. ಪುದುಚೇರಿ ವಿಧಾನಸಭೆ 30 ಸದಸ್ಯ ಬಲ ಹೊಂದಿದ್ದು, ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೆ 15 ಸದಸ್ಯರ ಬಲ ಇರಬೇಕು. ಕಾಂಗ್ರೆಸ್ 18 ಶಾಸಕರ ಬಲದೊಂದಿಗೆ ಪುದುಚೇರಿ ಆಡಳಿತ ಹಿಡಿದಿತ್ತು. ಆದರೆ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿಯವರ ನಡುವಿನ ವಿವಾದದಿಂದ ಈಗ ಅಲ್ಲಿನ ರಾಜಕೀಯದಲ್ಲಿ ಏಕಾಏಕಿ ಬೆಳವಣಿಗೆಗಳು ನಡೆದಿವೆ. ನಾಲ್ವರು ರಾಜೀನಾಮೆ ನೀಡಿದ್ದರೂ, ನಮಗೆ ಸಂಖ್ಯಾಬಲ ಇದೆ ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ವಾದಿಸುತ್ತಿದ್ದಾರೆ.
Published On - 12:20 pm, Fri, 19 February 21