ಬೆಂಗಳೂರು: ನಾನು ಕುಟುಂಬ ರಾಜಕಾರಣದ ಹೊರತಾಗಿ ಮಾತಾಡಿದ್ದೇನೆ. ಪಕ್ಷದ ಸೈದ್ಧಾಂತಿಕ ನಿಲುವು ಪರ ನಾನು ಮಾತಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಜೊತೆಗೆ, ಪ್ರಧಾನಿ ಕುಟುಂಬದಲ್ಲೇ ಕಾರ್ಪೊರೇಷನ್ ಸೀಟ್ ಕೊಟ್ಟಿಲ್ಲ. ವಡೋದರದಲ್ಲಿ ಕುಟುಂಬದಲ್ಲಿ ಯಾರಿಗೂ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದರು.
ಒಂದು ಕುಟುಂಬದಲ್ಲಿ ಒಬ್ಬರೇ ರಾಜಕಾರಣದಲ್ಲಿ ಇರಬೇಕು. ಬರೀ ಕುಟುಂಬಸ್ಥರಿಗೆ ಟಿಕೆಟ್ ಕೊಟ್ರೆ ಉಳಿದವರು ಹಮಾಲಿ ಕೆಲಸ ಮಾಡ್ಬೇಕಾ? ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿದರು. ಕೊಡ್ರಿ ಕಾರ್ಯಕರ್ತರಿಗೆ ಟಿಕೆಟ್ ಎಂದು ಶಾಸಕ ಯತ್ನಾಳ್ ಗುಡುಗಿದರು. ಕೇವಲ ಮನೆ ಮಕ್ಕಳಿಗೆಲ್ಲಾ ಯಾಕೆ ಟಿಕೆಟ್ ಕೊಡಬೇಕು? ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದರು.
‘ಮೂವರು CDಮ್ಯಾನ್ಗಳು ಸಂಪುಟದಲ್ಲಿದ್ದಾರೆ’
ಯಡಿಯೂರಪ್ಪನವರ ಸಂಪುಟದಲ್ಲಿ ಮೂವರು CDಮ್ಯಾನ್ಗಳಿದ್ದಾರೆ. ಮೂವರು CD ಮ್ಯಾನ್ಗಳು ಒಳಗಿದ್ದಾರೆ. ಸಮಯ ನೋಡಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
‘ಯತ್ನಾಳ್ಗೆ ನೀಡಿರುವ ನೋಟಿಸ್ ವಾಪಸ್ಗೆ ಆಗ್ರಹಿಸುವೆ’
ಇನ್ನು, ಯತ್ನಾಳ್ಗೆ ನೋಟಿಸ್ ನೀಡಿರುವುದಕ್ಕೆ ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಹೋರಾಟದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಶಾಸಕ ಯತ್ನಾಳ್ ಹೋರಾಟಕ್ಕೆ ಚಾಲನೆ ನೀಡಿದ್ದರು. ವಿಧಾನಸಭೆಯಲ್ಲಿ ಮೊದಲ ಬಾರಿಗೆ ಯತ್ನಾಳ್ ಗುಡುಗಿದ್ದರು. ಪಂಚಮಸಾಲಿ, ಹಾಲುಮತ, ವಾಲ್ಮೀಕಿ ಸಮಾಜದ ಹೋರಾಟದ ಬಗ್ಗೆ ಸದನದಲ್ಲಿ ಗುಡುಗಿದ್ದರು ಎಂದು ಶ್ರೀಗಳು ಹೇಳಿದರು.
ಬಿಜೆಪಿ ವರಿಷ್ಠರು ಕೂಡಲೇ ಪರಿಶೀಲಿಸಲು ಮನವಿ ಮಾಡುವೆ. ಯತ್ನಾಳ್ಗೆ ನೀಡಿರುವ ನೋಟಿಸ್ ವಾಪಸ್ಗೆ ಆಗ್ರಹಿಸುವೆ. ಬಿಜೆಪಿಯ ಕೆಲವು ಮುಖಂಡರಿಂದ ಒಳಸಂಚು ನಡೆಯುತ್ತಿದೆ. ನಮ್ಮ ಸಮುದಾಯದ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಯತ್ನಾಳ್, ಕಾಶಪ್ಪನವರ್ ಹತ್ತಿಕ್ಕಿದ್ರೆ ಹೋರಾಟ ನಿಲ್ಲುವ ಭ್ರಮೆಯಿದೆ. ಆದರೆ, ಯಾರು ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇರೆಯವರ ಮೂಲಕ ಹೇಳಿಕೆ ಕೊಡಿಸುವ ಕೆಲಸ ನಡೀತಿದೆ. ನಮ್ಮ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮುದಾಯ ಶಾಸಕ ಯತ್ನಾಳ್ ಜೊತೆ ಇದೆ. ಅನೇಕ ಸಮುದಾಯದ ಹೋರಾಟದಲ್ಲಿ ಸಚಿವರು ಭಾಗಿಯಾಗಿದ್ದಾರೆ. ಭಾಗಿಯಾಗಿದ್ದವರಿಗೆ ಯಾಕೆ ನೋಟಿಸ್ ನೀಡಿಲ್ಲವೆಂದು ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.
‘ನೋಟಿಸ್ ಹಿಂದೆ ಬಿಜೆಪಿ ಮುಖಂಡರ ಪುತ್ರನ ಕೈವಾಡವಿದೆ’
ನೋಟಿಸ್ ಹಿಂದೆ ಬಿಜೆಪಿ ಮುಖಂಡರ ಪುತ್ರನ ಕೈವಾಡವಿದೆ ಎಂದು ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಕೂಡಲೇ ಯತ್ನಾಳ್ಗೆ ನೀಡಿರುವ ನೋಟಿಸ್ ಹಿಂಪಡೆಯಿರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುತ್ತಿಗೆ ಪ್ರಯತ್ನ ಕೈಬಿಟ್ಟಿದ್ದೇವೆ. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ಧಗಂಗಾ ಮಠದಲ್ಲಿ ಬಸವ ಜಯಮೃತ್ಯುಂಜಯಶ್ರೀ ಎಚ್ಚರಿಕೆ ಕೊಟ್ಟರು.
Published On - 8:50 pm, Fri, 12 February 21