
ಬೆಳಗಾವಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ ಹಾಗೂ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕಾರ್ ಪ್ರತಿಕ್ರಿಯಿಸಿದ್ದಾರೆ.
ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಘಟನೆ ಅಮಾನವೀಯ. ಯುವತಿ ಮೃತಪಟ್ಟ ಕೂಡಲೆ ಪೊಲೀಸರಿಂದಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯುವತಿಯ ಮುಖವನ್ನ ಆಕೆಯ ಕುಟುಂಬಸ್ಥರಿಗೆ ನೋಡುವುದಕ್ಕೆ ಬಿಟ್ಟಿಲ್ಲ. ಮುಖ ತೋರಿಸದೆ ಪೊಲೀಸರೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಉತ್ತರ ಪ್ರದೇಶ ಪೊಲೀಸರಿಗೆ ಮಾನವೀಯತೆ ಇದೆಯಾ? ಎಂದು ಲಕ್ಷ್ಮೀ ಹೆಬ್ಬಾಳ್ಕಾರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಘಟನೆ ನಡೆದ 8 ದಿನಗಳ ಬಳಿಕ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಯುವತಿ ಮೃತಪಟ್ಟ ಬಳಿಕ ಆಕೆಯ ಆಕೆಯ ಶವವನ್ನು ಎಂಟು ನಿಮಿಷವೂ UP ಪೊಲೀಸರು ಇಡಲಿಲ್ಲ. ಉತ್ತರ ಪ್ರದೇಶದಲ್ಲಿ ರಾಮ ಮಂದಿರವನ್ನ ಎಲ್ಲರೂ ಕಟ್ಟೋಣ. ಆದರೆ, ದಲಿತ ಮಹಿಳೆ ಎಂಬ ಕಾರಣಕ್ಕೆ UP ಸರ್ಕಾರ ಈ ಘಟನೆಗೆ ಸಾಕ್ಷಿಯಾಯ್ತಾ? ಎಂದು ಶಾಸಕಿ ಪ್ರಶ್ನಿಸಿದ್ದಾರೆ.
ನಿರ್ಭಯಾ ಕೇಸ್ ಸಮಯದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇತ್ತು. ಆಗ ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಸಿಂಗಾಪುರ್‌ಗೂ ಕಳುಹಿಸಿಕೊಟ್ಟಿದ್ದರು. ಆಕೆಯ ಅಂತ್ಯಕ್ರಿಯೆಯನ್ನು ಗೌರವದಿಂದ ನೆರವೇರಿಸಿದ್ದರು. ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಏನು? ಎಂಬುದು ನನ್ನ ಪ್ರಶ್ನೆ. ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರೇ, UP ಯಲ್ಲಿ ಮಹಿಳೆಯರನ್ನ ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯೇ? ಯುವತಿಯ ಅಂತ್ಯ ಸಂಸ್ಕಾರದ ವೇಳೆ ಪೊಲೀಸರು ನಗುತ್ತಿದ್ದರು. ಹೀಗೆ ಮಾಡುವುದು ರಾಮ ರಾಜ್ಯದಲ್ಲಿ ಶೋಭೆ ತರುತ್ತಾ? ಆರೋಪಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು, ಗಲ್ಲಿಗೇರಿಸಬೇಕು ಅಂತಾ ನಾವೆಲ್ಲಾ ಒತ್ತಾಯ ಮಾಡೋಣ ಎಂದು ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೋಸ್ಟ್ ಹಾಕಿದ್ದಾರೆ.