
ಬೆಂಗಳೂರು: ನನ್ನ ಹಣೆಬರಹ ಕೆಟ್ಟಿರಬೇಕು. ಅದಕ್ಕೆ ನಾನು ಮಂತ್ರಿಯಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ MTB ನಾಗರಾಜ್ ತಮ್ಮ ನೋವು ತೋಡಿಕೊಂಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿರನ್ನು ಭೇಟಿಯಾದ ಬಳಿಕ MTB ನಾಗರಾಜ್ ಹೀಗೆ ಹತಾಶೆಯ ಮಾತನ್ನಾಡಿದ್ದಾರೆ.
ನಾವು ಮಂತ್ರಿಯಾಗಿದ್ದವರು, ಈಗ ಶಾಸಕರಾಗಿದ್ದೇವೆ. ಈಗ ಶಾಸಕರಾಗಿರುವುದು ನಮಗೆ ಕಷ್ಟ. ರಮೇಶ್ ಜಾರಕಿಹೊಳಿ ಭೇಟಿಗೆ ಬೇರೆ ವಿಶೇಷ ಇಲ್ಲ. ನಾವೆಲ್ಲಾ 15 ದಿನ ಮುಂಬೈನಲ್ಲಿ ಒಟ್ಟಾಗಿ ಇದ್ದೆವು. ಹೀಗಾಗಿ ಕಷ್ಟ, ಸುಖ ಮಾತನಾಡಲು ಭೇಟಿಯಾಗಿದ್ದೆ ಎಂದು ನಾಗರಾಜ್ ಹೇಳಿದರು.
ಸಚಿವ ಸ್ಥಾನ ಕೊಡುತ್ತೇನೆ, ಸಚಿವರನ್ನಾಗಿ ಮಾಡುತ್ತೇನೆ ಎಂದು ಸಿಎಂ ಹೇಳುತ್ತಲೇ ಇದ್ದಾರೆ. ಅದ್ರೆ ಈವರೆಗೂ ಮಂತ್ರಿ ಮಾಡಿಲ್ಲ. ನಾವು ಈಗ ಮಂತ್ರಿ ಆಗುವವರೆಗೂ ಕಾಯಲೇಬೇಕು. ನಾನು ವಿಧಾನ ಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. 17 ಜನ ಒಟ್ಟಾಗಿ ಇದ್ದೆವು, ನಾವು ಇನ್ನೂ ಮಂತ್ರಿ ಆಗಿಲ್ಲ. ನಮ್ಮ ಹಣೆಬರಹ ಕೆಟ್ಟಿರಬೇಕು, ಹೀಗಾಗಿ ಮಂತ್ರಿ ಆಗಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಮೇಲೆ ನಮಗೆ ಅಸಮಾಧಾನವಿಲ್ಲ ಎಂದು ನಾಗರಾಜ್ ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ MTB ಇಂದು ಭೇಟಿ ಕೊಟ್ಟಿದ್ದರು. ಸಿಎಂ ಭೇಟಿ ಬಳಿಕ ನಾಗರಾಜ್ ಸದಾಶಿವನಗರದಲ್ಲಿರುವ ರಮೇಶ್ ನಿವಾಸಕ್ಕೆ ಭೇಟಿ ಕೊಟ್ಟರು. MTB ನಾಗರಾಜ್ ನಿನ್ನೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿಯೂ ಭಾಗಿಯಾಗಿದ್ದರು.