ಮೈಸೂರು: ಪ್ರತಿಭಟನಾನಿರತ ರೈತರಿಗೆ ಜಿಲ್ಲಾ ಪೊಲೀಸ್ SP ರಿಷ್ಯಂತ್ ಕೊರೊನಾ ಪಾಠ ಮಾಡಿದ್ದಾರೆ. ಜಿಲ್ಲೆಯ ನಂಜನಗೂಡಿನ ಮಿನಿ ವಿಧಾನಸೌಧದ ಕಚೇರಿಯ ಮುಂಭಾಗದಲ್ಲಿ ಘಟನೆ ನಡೆದಿದೆ.
ಪ್ರತಿಭಟನೆ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಪ್ರತಿಭಟನೆಯನ್ನು ಕಸಿದುಕೊಳ್ಳುವ ಅಥವಾ ಹತ್ತಿಕ್ಕುವ ಯಾವುದೇ ಪ್ರಯತ್ನ ನಮ್ಮದಲ್ಲ. ಕಾನೂನುಬಾಹಿರ ಪ್ರತಿಭಟನೆಗೆ ಕಡಿವಾಣ ಹಾಕುತ್ತೇವೆ. ಆದರೆ, ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸಿದರೆ ಸಹಕರಿಸುತ್ತೇವೆ ಎಂದು SP ರಿಷ್ಯಂತ್ ಹೇಳಿದರು.
ಜೀವ ಬದುಕಿದರೆ ಏನು ಬೇಕಾದರೂ ಸಾಧಿಸಬಹುದು. ಜೀವ ಕಳೆದುಕೊಂಡಾಗ ವ್ಯಥೆ ಪಡುವವರು ಕುಟುಂಬಸ್ಥರು. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ. ಕೊರೊನಾ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಎಷ್ಟೋ ಜನರ ಪ್ರಾಣವನ್ನು ಕೊರೊನಾ ನುಂಗಿದೆ.
ವಾಸ್ತವತೆ ಹೀಗಿರುವಾಗ ಎಚ್ಚರಿಕೆಯಿಂದ, ಜಾಗೃತಿಯಿಂದ ಕಾನೂನುಬದ್ಧವಾಗಿ ಪ್ರತಿಭಟನೆ ಮಾಡುವುದು ಒಳಿತು ಎಂದು ಪ್ರತಿಭಟನಾಕಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಹೇಳಿದರು. ಖುದ್ದು ಕೊರೊನಾ ಸೋಂಕಿತರಾಗಿ ಗುಣಮುಖರಾಗಿದ್ದ ಪೊಲೀಸ್ ವರಿಷ್ಠಾಧಿಕಾರಿ CB ರಿಷ್ಯಂತ್ ಮಾತಿಗೆ ಪ್ರತಿಭಟನಾಕಾರರು ಸಮ್ಮತಿಸಿದರು.