ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಕೈಸೇರಿಲ್ಲ ವೇತನ, ಹಣವಿಲ್ಲದೆ ಬಾಳೇ ಅತಂತ್ರ
ಹಾವೇರಿ: ಕೊರೊನಾ ಕರುನಾಡಿನ ಕೊರಳು ಬಿಗಿಯುತ್ತಿದೆ. ಸೋಂಕು ಹರಡದಂತೆ ತಡೆಯಲು ಕೊರೊನಾ ವಾರಿಯರ್ಸ್ ಕೆಲಸ ಮಾಡ್ತಿದ್ದಾರೆ. ಪೌರ ಕಾರ್ಮಿಕರು ಕೂಡ ಇದಕ್ಕೆ ಸಾಥ್ ನೀಡಿದ್ದು, ಬೆಳ್ಳಂಬೆಳಗ್ಗೆ ನಗರ-ಗ್ರಾಮವನ್ನು ಸ್ವಚ್ಛಗೊಳಿಸೋ ಮೂಲಕ ಕೊರೊನಾದಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲೆ ಎನ್ನುವಂತೆ ಕೆಲ ತಿಂಗಳುಗಳಿಂದ ಇವರಿಗೆಲ್ಲಾ ಸಂಬಳವೇ ಸಿಕ್ಕಿಲ್ಲವಂತೆ. ಹೀಗಾಗಿ ಕೂಲಿ ನಂಬಿ ಬದುಕುವವರ ಬಾಳಲ್ಲಿ ಬಿರುಗಾಳಿಯೇ ಎದ್ದಂತಾಗಿದೆ. ಪೌರಕಾರ್ಮಿಕರು ನಗರ, ಪಟ್ಟಣದ ಸ್ವಚ್ಛತೆಗೆ ಎಲ್ಲಿಲ್ಲದ ಶ್ರಮ ಹಾಕ್ತಾರೆ. ಬೆಳಗಾಗುತ್ತಲೇ ಪೊರಕೆ, ಬುಟ್ಟಿಗಳನ್ನ ಹಿಡಿದು ಪಟ್ಟಣ ಹಾಗೂ […]

ಹಾವೇರಿ: ಕೊರೊನಾ ಕರುನಾಡಿನ ಕೊರಳು ಬಿಗಿಯುತ್ತಿದೆ. ಸೋಂಕು ಹರಡದಂತೆ ತಡೆಯಲು ಕೊರೊನಾ ವಾರಿಯರ್ಸ್ ಕೆಲಸ ಮಾಡ್ತಿದ್ದಾರೆ. ಪೌರ ಕಾರ್ಮಿಕರು ಕೂಡ ಇದಕ್ಕೆ ಸಾಥ್ ನೀಡಿದ್ದು, ಬೆಳ್ಳಂಬೆಳಗ್ಗೆ ನಗರ-ಗ್ರಾಮವನ್ನು ಸ್ವಚ್ಛಗೊಳಿಸೋ ಮೂಲಕ ಕೊರೊನಾದಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲೆ ಎನ್ನುವಂತೆ ಕೆಲ ತಿಂಗಳುಗಳಿಂದ ಇವರಿಗೆಲ್ಲಾ ಸಂಬಳವೇ ಸಿಕ್ಕಿಲ್ಲವಂತೆ. ಹೀಗಾಗಿ ಕೂಲಿ ನಂಬಿ ಬದುಕುವವರ ಬಾಳಲ್ಲಿ ಬಿರುಗಾಳಿಯೇ ಎದ್ದಂತಾಗಿದೆ.
ಪೌರಕಾರ್ಮಿಕರು ನಗರ, ಪಟ್ಟಣದ ಸ್ವಚ್ಛತೆಗೆ ಎಲ್ಲಿಲ್ಲದ ಶ್ರಮ ಹಾಕ್ತಾರೆ. ಬೆಳಗಾಗುತ್ತಲೇ ಪೊರಕೆ, ಬುಟ್ಟಿಗಳನ್ನ ಹಿಡಿದು ಪಟ್ಟಣ ಹಾಗೂ ನಗರದ ಸ್ವಚ್ಛತಾ ಕಾರ್ಯದಲ್ಲಿ ಬ್ಯುಸಿಯಾಗಿ ಬಿಡ್ತಾರೆ. ಅದ್ರಲ್ಲೂ ಹೆಮ್ಮಾರಿ ‘ಕೊರೊನಾ’ದ ಆರ್ಭಟ ಶುರುವಾದ್ಮೇಲೆ ಪೌರಕಾರ್ಮಿಕರ ಕೆಲಸ ಶ್ಲಾಘನೀಯ. ಪೌರಕಾರ್ಮಿಕರು ಕೂಡ ಕೊರೊನಾ ವಾರಿಯರ್ಸ್. ಹೀಗೆ ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡ್ತಿರೋ ಪೌರ ಕಾರ್ಮಿಕರಿಗೆ ಸಂಬಳವೇ ಸಿಗುತ್ತಿಲ್ಲವಂತೆ.
ಭತ್ಯೆ ಸಿಗದೆ ಅತಂತ್ರವಾಯ್ತು ಪೌರ ಕಾರ್ಮಿಕರ ಬದುಕು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪುರಸಭೆಯ 24 ಪೌರ ಕಾರ್ಮಿಕರಿಗೆ ಸಂಬಳವೇ ಸಿಗುತ್ತಿಲ್ಲ. ಕೆಲ ತಿಂಗಳುಗಳಿಂದ ಬಂಕಾಪುರ ಪುರಸಭೆಯ ಪೌರಕಾರ್ಮಿಕರಿಗೆ ಸಂಬಳ ದೊರೆತಿಲ್ಲ. ಹಾಗಂತ ಪೌರ ಕಾರ್ಮಿಕರು ಕೆಲಸ ಮಾಡೋದನ್ನ ನಿಲ್ಲಿಸಿಲ್ಲ. ವೇತನದ ಜೊತೆ ಕೆಲ ತಿಂಗಳಿಂದ ಉಪಹಾರದ ಭತ್ಯೆಯನ್ನ ಕೂಡ ನೀಡುತ್ತಿಲ್ಲವಂತೆ. ಸರ್ಕಾರದ ನಿಯಮದಂತೆ ಪೌರ ಕಾರ್ಮಿಕರನ್ನ ನೇರ ನೇಮಕಾತಿಗೆ ಪರಿಗಣಿಸಬೇಕಾಗಿದೆ ಹಾಗೇ ಈಗಾಗಲೇ ಕೆಲಸ ಮಾಡ್ತಿರೋ ಪೌರಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು. ಆದ್ರೆ ಬಂಕಾಪುರ ಪುರಸಭೆಯಲ್ಲಿ ಸರಕಾರದ ಆದೇಶ ಪಾಲಿಸದೇ ಈಗ ಕೆಲಸ ಮಾಡ್ತಿರೋ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಾರೋ ಮಾಡಿದ ತಪ್ಪಿನಿಂದಾಗಿ ಕೆಲ ತಿಂಗಳುಗಳಿಂದ ವೇತನವಿಲ್ಲದೆ ಕೆಲಸ ಮಾಡೋ ಸ್ಥಿತಿ ಎದುರಾಗಿದೆ.
ಹಾವೇರಿ, ರಾಣೆಬೆನ್ನೂರು, ಶಿಗ್ಗಾಂವಿ ಪುರಸಭೆ ಹಾಗೂ ಹಿರೇಕೆರೂರು ಪಟ್ಟಣ ಪಂಚಾಯ್ತಿಯಲ್ಲಿ ಲೋಡರ್ಸ್ ಅನ್ನ ನೇರ ನೇಮಕಾತಿ ಪಟ್ಟಿಯಲ್ಲಿ ತಿರಸ್ಕರಿಸಿದ್ದಾರೆ. ಆದ್ರೆ ಬಂಕಾಪುರ ಪುರಸಭೆಯಲ್ಲಿ 8 ಲೋಡರ್ಸ್ಗಳಲ್ಲಿ ನಾಲ್ವರನ್ನ ನೇರ ನೇಮಕಾತಿ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿದ್ದಾರೆ.
ಜೊತೆಗೆ ನೇರವೇತನ ಪಾವತಿ ಪಟ್ಟಿಯಲ್ಲಿ ಎಂಟೂ ಲೋಡರ್ಸ್ಗಳನ್ನ ಪರಿಗಣಿಸಿದ್ದಾರೆ. ಈ ಮೂಲಕ ಪುರಸಭೆಯಲ್ಲಿ ಹಲವು ವರ್ಷದಿಂದ ಕೆಲಸ ಮಾಡ್ತಿರೋ ಪೌರಕಾರ್ಮಿಕರಿಗೆ ಅನ್ಯಾಯ ಆಗಿದೆ ಅಂತಾ ಆರೋಪಿಸಲಾಗುತ್ತಿದೆ. ಹೀಗೆ ಜಿಲ್ಲೆಯಲ್ಲಿ ಎಲ್ಲೂ ಇಲ್ಲದ್ದನ್ನ ಬಂಕಾಪುರ ಪುರಸಭೆಯಲ್ಲಿ ಮಾತ್ರ ಮಾಡಿದ್ದು ಪೌರಕಾರ್ಮಿಕರಿಗೆ ಮಾಡಿರೋ ದೊಡ್ಡ ಅನ್ಯಾಯ ಅಂತಾ ಆರೋಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಬಳಿ ಈ ಬಗ್ಗೆ ಮನವಿ ಮಾಡಲಾಗಿದ್ದು, ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡ್ತಿದ್ದಾರೆ.
ಹಾವೇರಿಯ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಲೋಡರ್ಸ್ ಅನ್ನ ನೇರ ನೇಮಕಾತಿಯ ಪಟ್ಟಿಯಲ್ಲಿ ತಿರಸ್ಕರಿಸಿದ್ದರೆ ಬಂಕಾಪುರ ಪುರಸಭೆಯಲ್ಲಿ ಮಾತ್ರ ಲೋಡರ್ಸ್ ನೇರ ನೇಮಕಾತಿ ಮತ್ತು ನೇರವೇತನ ಪಾವತಿಗೆ ಪರಿಗಣಿಸಲಾಗಿದೆ. ಇದ್ರಿಂದ ಈಗ ಕೆಲಸ ಮಾಡ್ತಿರೋ ಪೌರ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ. ಇನ್ನೂ ಕೊರೊನಾ ಆರ್ಭಟ ಶುರುವಾದ ಬಳಿಕ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದ್ರೂ ಜಿಲ್ಲಾಡಳಿತ ಪೌರ ಕಾರ್ಮಿಕರ ಸಮಸ್ಯೆ ಪರಿಹರಿಸಿ, ಅವರಿಗೆ ಸಿಗಬೇಕಾದ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ಅಧಿಕಾರಿ ವರ್ಗ ಕಣ್ಣುಬಿಡಲಿ ಅನ್ನೋದೆ ನಮ್ಮ ಆಶಯ.
Published On - 7:46 am, Thu, 11 June 20




