ಬೆಂಗಳೂರು: ಕೊರೊನಾ ಮಹಾಮಾರಿ ಜನರಿಂದ ಅವರ ಕೆಲಸ, ಸಂತೋಷ, ಊಟ ಎಲ್ಲವನ್ನೂ ಕಿತ್ತುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ಬದುಕು ನಡೆಸುವುದೇ ಸಾಹಸವಾಗಿದೆ. ಈಗ ಕುಂಬಾರರ ಬದುಕು ಸಹ ಬೀದಿಗೆ ಬಂದಿದೆ.
ಮಣ್ಣಿನಿಂದ ಮಡಿಕೆ, ವಿಗ್ರಹಗಳನ್ನು ಮಾಡಿ ಅದನ್ನು ಮಾರಿ ಬಂದ ಹಣದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕುಂಬಾರರು ಕಣ್ಣೀರಿನಲ್ಲೇ ಬಾಳಬೇಕಾದ ಪರಿಸ್ಥಿತಿ ಎದುರಾಗಿದೆ. ಪಾಟರಿ ಟೌನ್ನಲ್ಲಿ 300 ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇವರೆಲ್ಲಾ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಫೆಬ್ರವರಿಯಲ್ಲೇ ಗಣೇಶನ ವಿಗ್ರಹಗಳನ್ನ ತಯಾರಿಸಿದ್ದಾರೆ. ಆದ್ರೆ ಕೊರೊನಾ ಇರೋ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಕುಂಬಾರರು ಸಿಎಂ ಮೊರೆ ಹೋಗಿದ್ದಾರೆ. ನಮಗೂ ವ್ಯಾಪಾರ ಮಾಡೋಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿ ಮನೆಯಲ್ಲೇ ಪ್ರತಿಷ್ಠಾಪಿಸಲು ಚಿಕ್ಕ ಚಿಕ್ಕ ಮಣ್ಣಿನ ಗಣೇಶನನ್ನ ತಯಾರಿಸಿದ್ದೀವಿ. ಆದ್ರೆ ಇದುವರೆಗೂ ಯಾರೂ ಆರ್ಡರ್ ಮಾಡಿಲ್ಲ. ಇಷ್ಟೊತ್ತಿಗಾಗಲೇ ಸಿಕ್ಕಾಪಟ್ಟೆ ಆರ್ಡರ್ಸ್ ಬರ್ತಾ ಇತ್ತು. ಸರ್ಕಾರವೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ವ್ಯಾಪಾರ ಮಾಡೋಕೆ ಅನುಮತಿ ಕೊಡಬೇಕು. ಇಲ್ಲವಾದ್ರೆ ಪರಿಹಾರ ಘೋಷಣೆ ಮಾಡ್ಬೇಕು ಅಂತಾ ಕುಂಬಾರರು ಒತ್ತಾಯ ಮಾಡಿದ್ದಾರೆ.
Published On - 2:38 pm, Wed, 29 July 20