2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರ ಒತ್ತಾಯ; ಕರ್ನಾಟಕ ಸರಕಾರದ ಮುಂದಿನ ನಡೆ ಏನು?

| Updated By: ಸಾಧು ಶ್ರೀನಾಥ್​

Updated on: Feb 06, 2021 | 5:40 PM

Panchamasali Reservation: ಪಂಚಮಸಾಲಿ ಸಮುದಾಯ ಮೂರು ತಿಂಗಳುಗಳಿಂದ 2ಎ ಮೀಸಲಾತಿಗಾಗಿ ಒತ್ತಾಯಿಸುತ್ತಿದೆ. ಈ ಒಂದು ಹಕ್ಕೊತ್ತಾಯವಿಟ್ಟುಕೊಂಡು ಸಮುದಾಯದ ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಬೆಂಗಳೂರಿಗೆ ಬಂದು ಸರಕಾರದ ಜೊತೆ ಮಾತುಕತೆ ನಡೆಸಿದ್ದಾರೆ. ಈಗ ಚೆಂಡು ಸರಕಾರದ ಅಂಗಳದಲ್ಲಿದೆ.

2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರ ಒತ್ತಾಯ; ಕರ್ನಾಟಕ ಸರಕಾರದ ಮುಂದಿನ ನಡೆ ಏನು?
ಪ್ರಾತಿನಿಧಿಕ ಚಿತ್ರ
Follow us on

ಪಂಚಮಸಾಲಿ ಲಿಂಗಾಯತ ನಾಯಕರು ಮತ್ತು ಮಠಾಧಿಪತಿಗಳು ಪ್ರಾರಂಭಿಸಿದ ಕಾಲ್ನಡಿಗೆ ಬೆಂಗಳೂರು ತಲುಪಿ, ಅವರ ಬೇಡಿಕೆಯನ್ನುಕರ್ನಾಟಕ ಸರಕಾರ ಪರಿಗಣಿಸಿ, ಪ್ರತಿಸ್ಪಂದಿಸಿದ ಬೆಳವಣಿಗೆ ಶುಕ್ರವಾರ ನಡೆದಿದೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ತಮ್ಮ ಸಂಪುಟದಲ್ಲಿರುವ ಎರಡು ಪ್ರಮುಖ ಮಂತ್ರಿಗಳಾದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಅವರನ್ನು ಮಾತುಕತೆಗೆ ಕಳಿಸಿದ್ದರು. ಬೆಂಗಳೂರಿಗೆ ಬಂದ ಪಂಚಮಸಾಲಿ ಲಿಂಗಾಯತ ಮಠಾಧಿಪತಿಗಳನ್ನು ಭೇಟಿ ಮಾಡಿದ ಈರ್ವರು ಸಚಿವರು ಸರಕಾರದ ನಿಲುವನ್ನು ತಿಳಿಸಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. Panchamasali Reservation Demand

ಮೀಸಲಾತಿಯ ಬೇಡಿಕೆ ಇಟ್ಟುಕೊಂಡು ಪ್ರಾರಂಭಿಸಿದ ಈ ಚಳುವಳಿಯ ನೇತೃತ್ವ ವಹಿಸಿದ ಮಠಾಧಿಪತಿಗಳಿಗೆ ಸರಕಾರದ ಪ್ರತಿನಿಧಿಗಳು ಹೇಳಿದ್ದಿಷ್ಟು: ಒಂದು ಸಮಿತಿ ಮಾಡುತ್ತೇವೆ. ಅವರು ವರದಿ ಕೊಟ್ಟ ನಂತರ ಅದನ್ನು ಆಧರಿಸಿ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಈ ಭರವಸೆಯಿಂದ ಸ್ವಾಮೀಜಿಗಳಿಗೆ ಸಂತೃಪ್ತಿಯಾದಂತೆ ಕಾಣಲಿಲ್ಲ.

ಪಂಚಮಸಾಲಿ ನಾಯಕರ ವಾದ ಏನು?
ಉಳಿದ ಲಿಂಗಾಯತ ಉಪ ಜಾತಿಗಳ ಜನಸಂಖ್ಯೆಗೆ ಹೋಲಿಸಿದರೆ, ಪಂಚಮಸಾಲಿ ಲಿಂಗಾಯತರು ಹೆಚ್ಚಿದ್ದಾರೆ. ಸ್ವಾಮೀಜಿಗಳು ಹೇಳುವ ಪ್ರಕಾರ ಈ ಸಂಖ್ಯೆ 90 ಲಕ್ಷದಿಂದ 1 ಕೋಟಿ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಸಮುದಾಯದ ಜನಸಂಖ್ಯೆ ಸುಮಾರು 40-50 ಲಕ್ಷ. ತಾವು ಮೂಲಭೂತವಾಗಿ ರೈತಾಪಿ ವರ್ಗದಿಂದ ಬಂದಿದ್ದು ಮತ್ತು ತಮ್ಮ ಜನಾಂಗದ ಬಹಳ ಜನ ಹಿಂದುಳಿದಿರುವುದರಿಂದ ತಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬುದು ಅವರ ಬೇಡಿಕೆ.

ಸದ್ಯಕ್ಕೆ ಪಂಚಮಸಾಲಿ ಜನಾಂಗ ಸರಕಾರ ನೀಡುತ್ತಿರುವ 3ಬ ಪ್ರವರ್ಗ (3B category) ದಲ್ಲಿ ಬರುತ್ತಾರೆ. ಒಟ್ಟು 5 ಪ್ರತಿಶತ ಮೀಸಲಾತಿ ಇರುವ ಈ 3ಬ ಪ್ರವರ್ಗದಡಿ ಮರಾಠಾ, ವೈಷ್ಣವ, ಒಕ್ಕಲಿಗ, ಕ್ಷತ್ರೀಯ ಮತ್ತು ಬಂಟ್ ಸಮುದಾಯಗಳು ಇವೆ. ಉಳಿದ ಮುಂದುವರಿದ ಸಮುದಾಯಗಳ ಜೊತೆ ಸ್ಪರ್ಧಿಸಿ ಸರಕಾರಿ ನೌಕರಿ ಮತ್ತು ಶಾಲಾ ಕಾಲೇಜು ಪ್ರವೇಶ ಪಡೆಯುವ ಸ್ಥಿತಿ ಇದೆ. ಇವರ ಒತ್ತಾಯವೇನೆಂದರೆ ತಮ್ಮನ್ನು 2 ಅ (2 A category) ಪ್ರವರ್ಗಕ್ಕೆ ಸೇರಿಸಬೇಕು.

ತಾವು ಹಿಂದುಳಿದವರಾದ್ದರಿಂದ 2 ಅ ಪ್ರವರ್ಗಕ್ಕೆ (ಹಿಂದುಳಿದ ವರ್ಗ) ಸೇರಿಸಿದರೆ ಈ ಪ್ರವರ್ಗಕ್ಕೆ ಮೀಸಲಾಗಿರುವ 15 ಪ್ರತಿಶತ ಮೀಸಲಾತಿಯಿಂದ ತಮ್ಮ ಸಮುದಾಯದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಸ್ವಾಮೀಜಿಗಳ ವಾದ. ಆದರೆ ಅಲ್ಲಿ ಈಗಾಗಲೇ 102 ಸಮುದಾಯಗಳು ಇವೆ ಎಂಬುದನ್ನು ಮರೆಯಬಾರದು.

ಈಗ ಸರಕಾರ ಏನು ಮಾಡಬಹುದು?
ಕಾನೂನಿನ ಪ್ರಕಾರ ಸರಕಾರ ಮೊದಲು ಇದನ್ನು ಸರಕಾರಿ ಆದೇಶದ ಮೂಲಕ ಖಾಯಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಸ್ತಾಂತರಿಸಬೇಕು. ಅದಾದ ಮೇಲೆ ಖಾಯಂ ಹಿಂದುಳಿದ ವರ್ಗಗಳ ಆಯೋಗ ಇದನ್ನು ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಕಳಿಸಿ ಅಧ್ಯಯನ ಮಾಡಿಸಬೇಕಾಗುತ್ತದೆ. ಸಾಮಾನ್ಯವಾಗಿ ಮೈಸೂರಿನಲ್ಲಿರುವ ಮಾನವ ಕುಲಶಾಸ್ತ್ರ ಅಧ್ಯಯನ ಸಂಸ್ಥೆ ಇಂಥ ಅಧ್ಯಯನವನ್ನು ಕೈಗೊಳ್ಳುತ್ತದೆ.

ಆದರೆ, ಈ ಸಂಸ್ಥೆ ಈಗಾಗಲೇ ಕುಂಚಟಿಗರ ಕುಲಶಾಸ್ತ್ರ ಅಧ್ಯಯನಕ್ಕಿಳಿದಿರುವುದರಿಂದ ಬೇರೆ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಕೊಡಬೇಕಾಗಿ ಬರಬಹುದು ಎಂದು ಹಿಂದುಳಿದ ವರ್ಗ ಇಲಾಖಾ ಮೂಲಗಳು ತಿಳಿಸಿವೆ. ಈ ಮಧ್ಯೆ ಸರಕಾರ ಹಣ ಬಿಡುಗಡೆ ಮಾಡಿ ಸಂಶೋಧನೆಗೆ ಅನುವು ಮಾಡಿಕೊಡಬೇಕು.

ಇಂತಿಷ್ಟೇ ದಿನಗಳಲ್ಲಿ ಈ ಸಂಶೋಧನೆಯನ್ನು ಮುಗಿಸಿ ಎಂದು ಹೇಳಲಾಗದು. ರಾಜ್ಯದ ಎಲ್ಲಾ ಭಾಗದಲ್ಲಿರುವ ಪಂಚಮಸಾಲಿ ಜನರ ಭೇಟಿ ಮಾಡಬೇಕು ಮತ್ತು ಅವರ ಆರ್ಥಿಕ-ಸಮಾಜ ಶಾಸ್ತ್ರೀಯ ಅಧ್ಯಯನ ನಡೆಯಬೇಕು. ಅದರ ಜೊತೆಗೆ ಪಂಚಮಸಾಲಿಗಳ ಕುಲಶಾಸ್ತ್ರ ಅಧ್ಯಯನ ನಡೆಯಬೇಕು. ಸರಕಾರ ಈ ಎಲ್ಲ ಕಾರಣದಿಂದ ಗಡುವು ನೀಡಲಾಗದು ಎಂದು ಮೂಲಗಳು ತಿಳಿಸಿವೆ. ಶಾಸ್ತ್ರೀಯ ಅಧ್ಯಯನದ ವರದಿ ನೇರವಾಗಿ ಸರಕಾರಕ್ಕೆ ಹೋಗದು.

ವರದಿಯನ್ನು ಖಾಯಂ ಹಿಂದುಳಿದ ವರ್ಗಗಳ ಆಯೋಗ ಮೊದಲು ಅಧ್ಯಯನ ಮಾಡಿ ಆ ನಂತರವೇ ಅದು ಸರಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆಯು ಆಯೋಗ ಕೊಟ್ಟ ವರದಿ ಅಧ್ಯಯನ ಮಾಡಿ ಕೊನೆಗೆ ಅದನ್ನು ಸಂಪುಟದ ಮುಂದೆ ತರಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಆದ್ದರಿಂದ ಈ ಸಮಸ್ಯೆಗೆ ತಕ್ಷಣಕ್ಕೆ ಒಂದು ಪರಿಹಾರ ಕಂಡುಕೊಳ್ಳಲಾಗದು ಎಂದು ಮೂಲಗಳು ತಿಳಿಸಿವೆ.