Maha Shivaratri 2021: ಶಿವ ಪಾರ್ವತಿಯ ವಿವಾಹ ಮಹೋತ್ಸವದ ಪವಿತ್ರ ದಿನವೇ ಶಿವರಾತ್ರಿ

|

Updated on: Mar 11, 2021 | 10:55 AM

Shivaratri Festival: ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಕಥೆ.

Maha Shivaratri 2021: ಶಿವ ಪಾರ್ವತಿಯ ವಿವಾಹ ಮಹೋತ್ಸವದ ಪವಿತ್ರ ದಿನವೇ ಶಿವರಾತ್ರಿ
ಧ್ಯಾನಸ್ಥನಾದ ಶಿವ (ಕೃಪೆ- ಫೇಸ್​ಬುಕ್)
Follow us on

ಕೈಲಾಸವಾಸಿ ಶಿವನಿಗೆ ಇಂದಿನ ದಿನ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.

ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಭಕ್ತರು ನೂರಾ ಒಂದು…ಇಲ್ಲವೆ ಸಾವಿರದ ಒಂದು…ಬಿಲ್ವ ಪತ್ರೆಗಳನ್ನು ಪಂಚಾಕ್ಷರಿ ಮಂತ್ರ ಪಠನದೊಂದಿಗೆ ಹರನಿಗೆ ಸಮರ್ಪಿಸುತ್ತಾರೆ. ಹೀಗೆ ಶಿವರಾತ್ರಿ ಕೇವಲ ಉಣ್ಣುವ, ಉಡುವ ತೊಡುವ ಹಬ್ಬ ಮಾತ್ರವಲ್ಲದೆ ನಮ್ಮ ಆಚಾರ-ವಿಚಾರಗಳು ಮಹಾ ಪರಿವರ್ತನೆಯ ಸಾಂಸ್ಕೃತಿಕ ಹಬ್ಬವೂ ದೌದು. ನಮ್ಮ ನಾಡಿನ ತಾಯ್ನೆಲದ ಭಾಷೆಯ ಮಣ್ಣಲ್ಲ ಮಹಾಲಿಂಗ…ಬೆವರಲ್ಲಿ…ಅಭಿಷೇಕ…ಕಲ್ಲಲ್ಲಿ ಕರ್ಪೂರ ಲಿಂಗ…ನುಡಿಯಲ್ಲಿ ನೈವೇದ್ಯ.

ಈ ಅಧ್ಯಾತ್ಮಿಕ ಸಂಸ್ಕಾರ ಹಾಗೂ ಸಾಂಸ್ಕೃತಿಕ ಜೀವನದ ಒಡಲಾಳದ ಮಹಾ ಶೋಧನೆಯ ಯಾತ್ರೆಯೇ ಮಹಾ ಶಿವರಾತ್ರಿ! ಹಿಂದುಗಳು ವರ್ಷದುದ್ದಕ್ಕೂ ಒಂದಲ್ಲ ಒಂದು ಹಬ್ಬ ಹಾಗೂ ವ್ರತ ಆಚರಿಸುತ್ತಾರೆ. ಇವುಗಳಿಗೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ. ಇವುಗಳಿಗೆ ಪುರಾಣದ ಹಿನ್ನೆಲೆ ಉಂಟು. ವಿಜ್ಞಾನ ಹಿನ್ನೆಲೆಯೂ ಇದೆ. ಇವುಗಳಲ್ಲಿ ಒಂದು ಶಿವರಾತ್ರಿಯ ಜಾಗರಣೆ ಆ ದಿನ ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪ್ರೋಶನ ಮಾಡಿದ ದಿನ. ಹಿಂದೆ ದೇವಾಸುರರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾದರು. ಮಂದರಪರ್ವತ ಕಡಗೋಲಾಯಿತು. ವಾಸುಕಿ ಹಗ್ಗವಾಯಿತು. ಮಥನಕಾರ್ಯ ರಭಸವಾಗಿ ನಡೆದಾಗ ಸರ್ಪವಾದ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು. ಅದರ ಬಾಧೆಗೆ ಎಲ್ಲರೂ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಕೂಡಲೇ ಪಾರ್ವತಿ ಮಾತೆ ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತಂತೆ. ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎನಿಸಿದನು. ಆ ದಿನವೇ ಮಾಘ ಕೃಷ್ಣ ಚತುರ್ದಶಿ. ಅಂದಿನಿಂದ ಪ್ರತಿ ವರ್ಷ ಶಿವರಾತ್ರಿಯ ಆಚರಣೆ ಪ್ರಾರಂಭವಾಯಿತು.

ಅಂದಿನಿಂದಲೂ ಶಿವರಾತ್ರಿಯಂದು ಪರಮಶಿವನನ್ನು ಭಜಿಸಿ, ಧ್ಯಾನಿಸಿ ಜೀವನ ಪಾವನಗೊಳಿಸುವ ಸದವಕಾಶ ನಮಗೆ ಲಭ್ಯವಾಯಿತು. ಹೀಗೆ ಶಿವರಾತ್ರಿಯ ಉಗಮದ ಹಿಂದೆ ಹಲವು ನಂಬಿಕೆಗಳಿವೆ..ಏನೇ ಆದರೂ..ಶಿವಭಕ್ತಿಯೊಂದೇ ಭಕ್ತರನ್ನು ಕಾಪಾಡುತ್ತದೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ
ಅಧ್ಯಾತ್ಮಿಕ ಚಿಂತಕರು. 9972848937

ಇದನ್ನೂ ಓದಿ: Maha Shivaratri 2021 ಶಿವ ಶಿವ ಎಂದು ಪರಮೇಶ್ವರನ ದರ್ಶನಕ್ಕೆ ಮುಗಿಬಿದ್ದ ಭಕ್ತರು.. ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ

Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?