ಮಂಡ್ಯ:ಆಟೋದಲ್ಲಿ ಸಾಗಿಸುತ್ತಿದ್ದ ಸುಮಾರು 50 ಕ್ಕೂ ಹೆಚ್ಚು ಕೋತಿಗಳನ್ನ ರಕ್ಷಣೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆರೆತೊಣ್ಣುರು ಗ್ರಾಮದ ಬಳಿ ನಡೆದಿದೆ.
ಗೂಡ್ಸ್ ಆಟೋವೊಂದರಲ್ಲಿ ಕೋತಿಗಳನ್ನ ಬೋನ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದನ್ನ ಗಮನಿಸಿದ ಸ್ಥಳೀಯರು, ಅನುಮಾನಗೊಂಡು ಹೋಗಿ ಆಟೋವನ್ನ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಹಿಂದೆ ಪಾಂಡವಪುರ ತಾಲೂಕಿನಲ್ಲಿ ಕೆರೆತಣ್ಣೂರಿನ ಗ್ರಾಮದ ಬಳಿಯಲ್ಲೇ 50 ಕ್ಕೂ ಹೆಚ್ಚು ಕೋತಿಗಳಿಗೆ ವಿಷ ಹಾಕಿ ಕೊಂದಿದ್ದ ಪ್ರಕರಣ ನಡೆದಿತ್ತು.
ಈಗ ಗೂಡ್ಸ್ ಆಟೋದಲ್ಲಿ ಕೋತಿಗಳನ್ನ ಸಾಗಿಸುತ್ತಿದ್ದನ್ನ ಗಮನಿಸಿದರೆ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಮತ್ತೊಂದು ಪ್ರಕರಣ ಮರುಕುಳಿಸುವುದರಲ್ಲಿತ್ತಾ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕೋತಿಗಳ ಸಾಗಾಣಿಕೆ ಬಗೆಗೆ ಆಟೋಚಾಲಕನನ್ನ ವಿಚಾರಿಸಿದರೆ ಮೈಸೂರಿನ ಉದಯಗಿರಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕೋತಿಗಳ ಹಾವಳಿ ತಪ್ಪಿಸಿಕೊಳ್ಳಲು ಅವುಗಳನ್ನು ಹಿಡಿಸಲಾಗಿತ್ತು ಎನ್ನಲಾಗಿದೆ.
ಹೀಗೆ ಹಿಡಿದ ಕೋತಿಗಳನ್ನು ಪಾಂಡವಪುರ ತಾಲೂಕಿನ ಮೇಲುಕೋಟೆ ಅರಣ್ಯಕ್ಕೆ ಬಿಡಲು ಆಟೋದಲ್ಲಿ ತರಲಾಗುತ್ತಿತ್ತು ಎಂದು ಆಟೋ ಚಾಲಕ ತಿಳಿಸಿದ್ದಾನೆ. ಆದ್ರೆ ಇದಕ್ಕೆ ಸಂಬಂಧ ಪಟ್ಟ ಯಾವುದೇ ದಾಖಲೆ ಆಟೋ ಚಾಲಕನ ಬಳಿ ಇಲ್ಲದ ಕಾರಣಕ್ಕೆ ಆಟೋ ಸಮೇತ ಚಾಲಕನನ್ನು ಪಾಂಡವಪುರ ವಲಯ ಅರಣ್ಯ ಇಲಾಖೆ ಅಧಿಕಾರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅಕ್ರಮವೆಂದು ಕಂಡು ಬಂದರೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.