ಉತ್ತರ ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾಗಿದ್ದ ವಿದ್ವಾಂಸ ಪಂ. ಜಯತೀರ್ಥ ಆಚಾರ್ಯ ಮಳಗಿ (73) ನಿಧನರಾಗಿದ್ದಾರೆ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿದ್ದ ಮಳಗಿ ಅವರು ವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರಾಗಿದ್ದರು. ಮಳಗಿ ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಧಾರವಾಡವನ್ನು ಮಾಧ್ವಸಿದ್ಧಾಂತದ ಕೇಂದ್ರವನ್ನಾಗಿ ರೂಪಿಸಿದ ಮಹನೀಯರು ಕೂಡ ರವಿವಾರ (ನ.20) ಸಂಜೆ ನಗರದ ಸ್ಮಶಾನದಲ್ಲಿ ಮಳಗಿಯವರ ಅಂತ್ಯಸಂಸ್ಕಾರ ನೆರವೇರಿತು.
ವಿದ್ವಾಂಸ ಪಂಡಿತ ಜಯತೀರ್ಥ ಆಚಾರ್ಯ ಮಳಗಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿ, ಪ್ರವಚನಕಾರರಾಗಿ ಮಾಧ್ವವಾಙ್ಮಯಕ್ಕೆ ವಿಶೇಷವಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡನಗರವನ್ನು ಮಾಧ್ವಸಿದ್ಧಾಂತದ ಮಹಾಕೇಂದ್ರವನ್ನಾಗಿ ರೂಪಿಸಿದ ಮಹನೀಯರಲ್ಲಿ ಪ್ರಮುಖರಾದ ಶ್ರೀಮಳಗಿ ಜಯತೀರ್ಥಾಚಾರ್ಯರು ಒಬ್ಬರು. ಜಯತೀರ್ಥ ಆಚಾರ್ಯರು ಜನಿಸಿದ್ದು 1949ರ ಜೂನ್ 5ರಂದು.
ಜವಾಹರಲಾಲ್ ಸಂಸ್ಕೃತವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿ, ಭಾರತೀಯ ವಿದ್ಯಾಭವನ, ಮುಂಬಯಿಯಿಂದ ಸಂಸ್ಕೃತಕೋವಿದ, ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ವೇದಾಂತ ಶಾಸ್ತ್ರಿ, ಧರ್ಮಶಾಸ್ತ್ರಾಚಾರ್ಯ, ಅಲಹಾಬಾದ್ ಹಿಂದಿ ವಿಶ್ವವಿದ್ಯಾಲಯದಿಂದ ದರ್ಶನವಿಶಾರದ, ಹಿಂದಿ ವಿಶಾರದ, ಹಿಂದಿ ಸಾಹಿತ್ಯರತ್ನ, ಭಾರತೀಯ ವಿದ್ಯಾಭವನದಿಂದ ವೇದಾಂತ ವಾಚಸ್ಪತಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪಡವಿ, ಪೂನಾ ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಶ್ರೀಮಳಗಿ ಜಯತೀರ್ಥ ಆಚಾರ್ಯ ಮುಂಬಯಿಯ ಶ್ರೀಸತ್ಯಧ್ಯಾನ ವಿದ್ಯಾಪೀಠದಲ್ಲಿ ವೇದಾಂತ, ನ್ಯಾಯ, ಮೀಮಾಂಸಾ, ಸಾಹಿತ್ಯ, ವ್ಯಾಕರಣ ಮೊದಲಾದ ಶಾಸ್ತ್ರಗಳ ಆಳವಾದ ಅಧ್ಯಯನವನ್ನು ನಡೆಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
Deeply disheartened by the demise of Pt. Jayateerthacharya Malagi. A great scholar, an avid orator & an insightful writer. His speeches & articles have inspired many, His service to Sri Matha & Dwaita Vedanta will be cherished forever. Our prayers & condolences to his family ??. pic.twitter.com/fsnSheLk14
— Sri Uttaradi Math (@sriuttaradimath) November 20, 2022
ಮಾಧ್ವ ವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಶ್ರೀಮಳಗಿ ಜಯತೀರ್ಥ ಆಚಾರ್ಯರು ರಚಿಸಿರುವ ಗ್ರಂಥಗಳು 43ಕ್ಕೂ ಹೆಚ್ಚು ಎಂಬುದನ್ನು ಗಮನಿಸಿದಾಗ, ಶ್ರೀ ಆಚಾರ್ಯರ ಸಾರಸ್ವತ ಸೇವೆಯ ಪರಿಚಯ ನಮಗಾಗುತ್ತದೆ. ಶ್ರೀ ಸತ್ಯಧ್ಯಾನರು, ಶ್ರೀ ಸತ್ಯಧ್ಯಾನರ ನುಡಿಮುತ್ತುಗಳು, ಕುಲಪತಿ, ಕ್ಷೇಮೇಂದ್ರನ ಸುಭಾಷಿತಗಳು, ಲೇಖನ ತರಂಗಿಣಿ, ಷಟ್ ಪ್ರಶ್ನೋಪನಿಷತ್ತು, ಪ್ರಮೋದ ತರಂಗಿಣೀ, ಸತ್ಯಧ್ಯಾನ ಜೀವನ ರಶ್ಮಿ,ಸತ್ಯಧ್ಯಾನ ಚರಿತಾಮೃತ, ಶ್ರೀಮಧ್ವರು ನಿರೂಪಿಸಿದ ರಾಮ, ಮಧ್ವರು ನಿರೂಪಿಸಿದ ಶ್ರೀಸೀತಾ, ಮಾಧವತೀರ್ಥರು, ಉತ್ತರಾದಿ ಮಠದ ಇತಿಹಾಸ, ಹರಿದಾಸಸಾಹಿತ್ಯದ ಇತಿಹಾಸ, ಶ್ರೀಸತ್ಯಬೋಧತೀರ್ಥರು, ಶ್ರೀಸತ್ಯವೀರತೀರ್ಥರು, ಶ್ರೀಸತ್ಯಧ್ಯಾನತೀರ್ಥರು (ಇಂಗ್ಲೀಷ್), ಶ್ರೀಸತ್ಯಸಂಧರು, ಪ್ರಮೋದ ತರಂಗಿಣೀ (ಇಂಗ್ಲಿಷ್), ಹರಿದಾಸರ ಮುಂಡಿಗೆಗಳು, ಹರಿದಾಸರ ಮುಂಡಿಗೆಗಳು ಭಾಗ 2, ಶ್ರೀ ಜಯತೀರ್ಥ ವಿಜಯ, ಶ್ರೀ ಸತ್ಯಧ್ಯಾನ ವಾಣಿ, ಶ್ರೀವ್ಯಾಸ ಮಧ್ವರ ಭೀಮ, ಶ್ರೀಸತ್ಯಧ್ಯಾನ ಲೇಖನತರಂಗಿಣಿ (ಎರಡು ಭಾಗಗಳಲ್ಲಿ), ಶ್ರೀರಾಘವೇಂದ್ರ ವಿದ್ಯಾವೈಭವ, ಕನಕನ ಮುಂಡಿಗೆಗಳು, ಶ್ರೀಪದ್ಮನಾಭತೀರ್ಥರು, ದೇವಲಸ್ಮೃತಿ ಒಂದು ಅಧ್ಯಯನ, ತೊರವಿ ರಾಮಾಯಣ ಪ್ರಶಸ್ತಿ, ಗೋಪಾಲದಾಸರು ಕಂಡ ಗುರುರಾಜರು, ಶ್ರೀಸತ್ಯಜ್ಞಾನತೀರ್ಥರು, ಶ್ರೀಕೃಷ್ಣಾವತಾರ, ವಾಸ್ತುಶಾಸ್ತ್ರದ ಮಹತ್ತ್ವ, ಶ್ರೀಹನುಮಂತದೇವರು, ಶ್ರೀಕೃಷ್ಣ, ಶ್ರೀಜಯತೀರ್ಥರು, ಪೊಡವಿಗೊಡೆಯ ಕಡಗೋಲಶ್ರೀಕೃಷ್ಣ, ಬೆಳಕಿನ ಬರಹಗಳು.
ಹೀಗೆ ತಮ್ಮ ವಿದ್ವತ್ಪೂರ್ಣ ಗ್ರಂಥಗಳಿಂದ ಮಾಧ್ವವಾಙ್ಮಯವನ್ನು ಶ್ರೀಮಂತಗೊಳಿಸಿರುವ ಶ್ರೀ ಜಯತೀರ್ಥ ಆಚಾರ್ಯ ಉತ್ತರಾದಿಮಠದಿಂದ ಪ್ರಕಟವಾಗುತ್ತಿರುವ ಶ್ರೀಸುಧಾ ಮಾಸಿಕದ ಮುಖ್ಯ ಸಂಪಾದಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಧಾರವಾಡದ ಸತ್ಯಧ್ಯಾನ ಗ್ರಂಥಮಾಲೆ, ಟಿ.ಟಿ.ಡಿಯ ದಾಸಸಾಹಿತ್ಯ ಪ್ರಾಜೆಕ್ಟ್ನ ಗ್ರಂಥಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸುಗುಣಮಾಲಾ, ಹರಿದಾಸವಾಹಿನಿ, ಹರಿದಾಸ ಅಧ್ಯಾತ್ಮ ಪೀಠ, ಸತ್ಯಧ್ಯಾನವಿದ್ಯಾಪೀಠ, ವಿಶ್ವಮಾಧ್ವ ಮಹಾಪರಿಷತ್ತಿನ ಗ್ರಂಥಗಳ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ವಾಙ್ಮಯಸೇವೆಯನ್ನು ಸಲ್ಲಿಸಿದ ಶ್ರೀಜಯತೀರ್ಥಾಚಾರ್ಯರಿಗೆ ವಿವಿಧ ಮಾಧ್ವ ಮಠಾಧೀಶರು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿ, ಅನುಗ್ರಹಿಸಿದ್ದಾರೆ.
ಶ್ರೀಪಲಿಮಾರು ಶ್ರೀಗಳಿಂದ ‘ಪಂಡಿತರತ್ನಂ’, ಪ್ರಶಸ್ತಿ, ಸಚ್ಛಾಸ್ತ್ರವಿಚಕ್ಷಣರತ್ನಂ, ಶ್ರೀವಿದ್ಯಾಮಾನ್ಯ ಪ್ರಶಸ್ತಿ, ವಿದ್ಯಾನಿಧಿ ಪ್ರಶಸ್ತಿ, ಶ್ರೀಪೇಜಾವರ ಮಠಾಧೀಶರಿಂದ ‘ವಿಜಯಧ್ವಜ ಪ್ರಶಸ್ತಿ’, ಶ್ರೀ ಭಂಡಾರಕೇರಿ ಶ್ರೀಗಳಿಂದ ‘ವಾಗ್ವೈಖರಿಮಾನ್ಯ’ಪ್ರಶಸ್ತಿ ಹಾಗೂ ಶ್ರೀಉತ್ತರಾದಿಮಠಾಧೀಶರಿಂದ ‘ಧ್ಯಾನಪ್ರಮೋದ’ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವು. ಇದರೊಂದಿಗೆ ತಿರುಚಾನೂರಿನ SMSO ಸಭಾದಿಂದ ‘ಪ್ರಧಾನ ಧರ್ಮಾಧಿಕಾರಿ’ ಗೌರವ, ವಿದ್ಯಾವರ್ಧಕ ಸಂಘದಿಂದ ‘ಪ್ರವಚನ ಸಿಂಹ’ ಗೌರವಗಳಿಗೂ ಭಾಜನರಾಗಿದ್ದಾರೆ. ಶ್ರೀ ಮಳಗಿ ಜಯತೀರ್ಥ ಆಚಾರ್ಯರು ಅನೇಕ ನಿಯತಕಾಲಿಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಶ್ರೀಮಧ್ವಸಿದ್ಧಾಂತವನ್ನು ಕುರಿತ ಲೇಖನಗಳನ್ನು ಬರೆಯುವುದರೊಂದಿಗೆ ಅನೇಕ ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನು ಸಹ ಮಂಡಿಸಿದ್ದಾರೆ. ಸಂಸ್ಕೃತ ಸಾಹಿತ್ಯ ಕುರಿತು ಅನೇಕ ರಾಷ್ಟ್ರೀಯ ವಿಚಾರ ಸಂಕೀರ್ಣಗಳನ್ನು ಆಯೋಜನೆ ಮಾಡಿರುವ ಶ್ರೀಮಳಗಿ ಜಯತೀರ್ಥಾಚಾರ್ಯರ ಪ್ರವಚನಗಳೆಂದರೆ ಕಂಚಿನ ಕಂಠದ, ಸ್ಪಷ್ಟವಾದ ವಿಚಾರ ಮಂಡನೆಯ ವಿದ್ವತ್ಸಮಾರಾಧನೆಯೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ